ಸಂಗಾತಿ ಜೊತೆಗಿನ ಬಾಂಧವ್ಯ ಮುಂದುವರೆಸಲು ಸಾಧ್ಯವಾಗದೇ ಹೋದಾಗ ಸುಲಭವಾಗಿ ತಪ್ಪಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಜನ ಮದುವೆಗಿಂತ ಲಿವ್-ಇನ್ ಸಂಬಂಧಗಳನ್ನು ಬಯಸುತ್ತಿದ್ದಾರೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಅಬ್ದುಲ್ ಹಮೀದ್ ಸಿದ್ದಿಕಿ ಮತ್ತು ಕವಿತಾ ಗುಪ್ತಾ ನಡುವಣ ಪ್ರಕರಣ].
ಒಬ್ಬ ವ್ಯಕ್ತಿಗೆ ಮದುವೆ ಎಂಬ ಸಾಮಾಜಿಕ ಸಂಸ್ಥೆ ನೀಡುವ ಭದ್ರತೆ, ಸಾಮಾಜಿಕ ಸ್ವೀಕಾರ, ಪ್ರಗತಿ ಮತ್ತು ಸ್ಥಿರತೆಯನ್ನು ಲಿವ್-ಇನ್-ರಿಲೇಶನ್‌ಶಿಪ್ ಎಂದಿಗೂ ಒದಗಿಸದು ಎಂದು ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ಸಂಜಯ್ ಎಸ್ ಅಗರ್‌ವಾಲ್ ಅವರಿದ್ದ ಪೀಠ ಎಚ್ಚರಿಸಿತು.
ಲಿವ್ ಇನ್ ಸಂಬಂಧದಲ್ಲಿ ಜೋಡಿ ಬೇರೆಯಾಗಲು ಬಯಸಿದರೆ ತನ್ನ ಸಂಗಾತಿಯ ಒಪ್ಪಿಗೆಯನ್ನು ಗಣನೆಗೆ ತೆಗೆದುಕೊಳ್ಳದೆ ಮತ್ತು ನ್ಯಾಯಾಲಯ ಕಾನೂನಿನ ಔಪಚಾರಿಕತೆಯ ಗೋಜಿಲ್ಲದೆ ಬೇರೆಯಾಗುವ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ ಎಂದು ನ್ಯಾಯಾಲಯ ನುಡಿದಿದೆ.
ನಮ್ಮ ದೇಶದಲ್ಲಿ, ಸಾಮಾಜಿಕ ಮೌಲ್ಯಗಳು, ರೂಢಿ ಸಂಪ್ರದಾಯಗಳು ಹಾಗೂ ಕಾನೂನು ಮದುವೆಯ ಸ್ಥಿರತೆಗಾಗಿ ಯತ್ನಿಸುವುದರಿಂದ ವಿವಾಹವಾಗದೆ ಸಂಬಂಧವನ್ನು ಪವಿತ್ರೀಕರಿಸದೆ ಇರುವುದು ಸಾಮಾಜಿಕ ಕಳಂಕ ಎನ್ನಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಆದರೆ ಮದುವೆಯಲ್ಲೂ ಸಮಸ್ಯೆಗಳು ತಲೆದೋರಲಿದ್ದು ವಿವಾಹ ಮುರಿದುಬಿದ್ದಾಗ ಮಹಿಳೆಯರು ಹೆಚ್ಚು ತೊಂದರೆಗೊಳಗಾಗುತ್ತಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದಿದೆ.
ಪಾಶ್ಚಿಮಾತ್ಯ ದೇಶಗಳ ಸಾಂಸ್ಕೃತಿಕ ಪ್ರಭಾವದಿಂದಾಗಿ ಮದುವೆಯ ಸಂಸ್ಥೆಯು ಹಿಂದಿನಂತೆ ಜನರನ್ನು ನಿಯಂತ್ರಿಸುತ್ತಿಲ್ಲ ಎಂಬುದನ್ನು ಆ ಸಮಾಜವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ತಿಳಿದುಬರುವ ಸಂಗತಿಯಾಗಿದ್ದು ಈ ಮಹತ್ವದ ಬದಲಾವಣೆಗಳು ಮತ್ತು ವೈವಾಹಿಕ ಕರ್ತವ್ಯಗಳ ಕುರಿತಂತೆ ಇರುವ ನಿರಾಸಕ್ತಿ ಬಹುಶಃ ಲಿವ್- ಇನ್ ಪರಿಕಲ್ಪನೆಯನ್ನು ಹುಟ್ಟುಹಾಕಿದೆ ಎಂದು ಅದು ಹೇಳಿದೆ.
ಲಿವ್ ಇನ್ ಸಂಬಂಧದ ಜೋಡಿಯ ನಡುವೆ ಹೆಚ್ಚಿನ ದೂರುಗಳಲ್ಲಿ ಮಹಿಳೆಯರು ಸಂತ್ರಸ್ತರಾಗಿರುವುದರಿಂದ ಅವರನ್ನು ರಕ್ಷಿಸುವ ಅಗತ್ಯವಿದೆ ಎಂದು ನ್ಯಾಯಾಲಯ ನುಡಿಯಿತು.
ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿ ಜನಿಸಿದ ತನ್ನ ಮಗುವಿನ ಪಾಲನೆಗೆ ಅವಕಾಶ ನೀಡದ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಾಲಯ ಈ ಅಂಶಗಳನ್ನು ತಿಳಿಸಿತು.