
ಕೇಂದ್ರ ಲೋಕಸೇವಾ ಆಯೋಗದ ಉನ್ನತಮಟ್ಟದ ಸಮಿತಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ನೇಮಕ ಮಾಡುವ ಸಂಬಂಧ ನಿರ್ದಿಷ್ಟ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದ್ದು, ಅಲ್ಲಿಂದ ವರದಿ ಬಂದ ಒಂದು ವಾರದಲ್ಲಿ ಕಾಯಂ ಐಜಿ-ಡಿಜಿಪಿಯನ್ನು ನೇಮಿಸಲಾಗುವುದು ಎಂದು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಪ್ರಭಾರ ಪೊಲೀಸ್ ಮಹಾ ನಿರ್ದೇಶಕರಾಗಿ (ಡಿಜಿ-ಐಜಿಪಿ) ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ ಎ ಸಲೀಂ ಅವರನ್ನು ನೇಮಕ ಮಾಡಿ ಸರ್ಕಾರ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಕೋರಿ ವಕೀಲೆ ಸುಧಾ ಕಾಟ್ವಾ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠವು ವಜಾಗೊಳಿಸಿತು.
ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು “ಯುಪಿಎಸ್‌ಸಿಯ ಉನ್ನತ ಮಟ್ಟದ ಸಮಿತಿಗೆ ನಿರ್ದಿಷ್ಟ ಅಧಿಕಾರಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿದೆ. ಈ ಸಂಬಂಧ ಆಗಸ್ಟ್ 26ರಂದು ಯುಪಿಎಸ್‌ಸಿ ಸಮಿತಿಯು ಸಭೆಯನ್ನೂ ನಡೆಸಿದೆ. ಅಲ್ಲಿಂದ ವರದಿ ಬಂದ ಬಳಿಕ ಒಬ್ಬರನ್ನು ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಒಂದು ವಾರದಲ್ಲಿ ನೇಮಕ ಮಾಡಿ ಆದೇಶಿಸಲಾಗುವುದು” ಎಂದು ತಿಳಿಸಿದರು.
ಈ ಮಧ್ಯೆ, ಅರ್ಜಿದಾರರ ಪರ ವಕೀಲ ಎಸ್ ಉಮಾಪತಿ ಅವರು ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸುವವರೆಗೆ ಅರ್ಜಿಯನ್ನು ಬಾಕಿ ಉಳಿಸಬೇಕು ಎಂದು ಕೋರಿದರು.
ಇದಕ್ಕೆ ಒಪ್ಪದ ಪೀಠವು ಅಡ್ವೊಕೇಟ್ ಜನರಲ್ ಹೇಳಿಕೆ ದಾಖಲಿಸಿಕೊಂಡು ಅರ್ಜಿಯನ್ನು ಇತ್ಯರ್ಥಪಡಿಸಿತು.
ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಕಾಯಂ ಡಿಜಿಪಿಯನ್ನು ನೇಮಕ ಮಾಡುವಾಗ ಅನುಸರಿಸಬೇಕಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ. ಯಾವುದೇ ಕಾರಣಕ್ಕೂ ಕಾರ್ಯಕಾರಿ ಅಥವಾ ಪ್ರಭಾರ ಡಿಜಿಪಿಯನ್ನು ನೇಮಿಸಬಾರದು. ಪ್ರಭಾರ ಡಿಜಿಪಿ ಎಂಬ ಪರಿಕಲ್ಪನೆಯೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಡಾ.ಎಂ ಎ ಸಲೀಂ ಅವರನ್ನು ಪ್ರಭಾರ ಡಿಜಿ-ಐಜಿಪಿಯಾಗಿ ನೇಮಿಸಿ 2025ರ ಮೇ 21ರಂದು ಸರ್ಕಾರ ಆದೇಶ ಮಾಡಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ಅಲ್ಲದೇ, ಡಿಜಿಪಿ ನೇಮಕಾತಿಗೆ ಯುಪಿಎಸ್‍ಸಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಆ ಸಮಿತಿ ರಾಜ್ಯದಲ್ಲಿನ ಸೇವಾ ಹಿರಿತನ ಹೊಂದಿರುವ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳ ಸೇವೆ ಹಾಗೂ ನಡಾವಳಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಶಿಫಾರಸ್ಸುಗೊಂಡವರಲ್ಲಿ ಒಬ್ಬರನ್ನು ಮುಖ್ಯಮಂತ್ರಿಗಳು ಡಿಜಿಪಿಯಾಗಿ ನೇಮಿಸಬೇಕು. ಆದರೆ, ಯುಪಿಎಸ್‌ಸಿಯಿಂದ ಆರ್‌ಟಿಐ ಮೂಲಕ ಪಡೆದ ಉತ್ತರದಿಂದ ಮೇ 21ರಿಂದ ಖಾಲಿಯಾಗಲಿರುವ ಡಿಜಿಪಿ ನೇಮಕಕ್ಕೆ ಉನ್ನತ ಸಮಿತಿ ರಚನೆ ಮಾಡಲು ಸರ್ಕಾರ ಪ್ರಸ್ತಾವನೆ ಕಳುಹಿಸಿದೆ. ಆ ಪ್ರಕ್ರಿಯೆಯಲ್ಲಿ ಕೆಲ ಲೋಪವಾಗಿದೆ. ಆ ಕುರಿತು ಸರ್ಕಾರದಿಂದ ಸ್ಪಷ್ಟೀಕರಣಕ್ಕಾಗಿ ಕಾಯುತ್ತಿರುವುದಾಗಿ ಯುಪಿಎಸ್‌ಸಿ ತಿಳಿಸಿದೆ. ಇದರಿಂದ ಉನ್ನತ ಸಮಿತಿ ರಚನೆಯೇ ಆಗಿಲ್ಲ ಎಂಬುದನ್ನು ದೃಢಪಡಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು.
ಇನ್ನು, ಮೇ 21 ಮತ್ತು ಅದಕ್ಕೂ ಮುಂಚಿತವಾಗಿ ಡಾ.ಎಂ ಎ ಸಲೀಂ ಅವರನ್ನು ಡಿಜಿಪಿ ಈ ಹುದ್ದೆಗೆ ನೇಮಕ ಮಾಡಲು ಉನ್ನತ ಮಟ್ಟದ ಸಮಿತಿ ಯಾವುದೇ ಶಿಫಾರಸು ಮಾಡಿರಲಿಲ್ಲ ಎಂದು ಆರ್‌ಟಿಐ ಉತ್ತರದಲ್ಲಿ ಯುಪಿಎಸ್‌ಸಿ ದೃಢಪಡಿಸುತ್ತದೆ. ಇದರಿಂದ ಯುಪಿಎಸ್‌ಸಿ ಉನ್ನತ ಮಟ್ಟದ ಸಮಿತಿಯ ರಚನೆ ಮಾಡದೆಯೇ ಮತ್ತು ಅದರಿಂದ ಡಿಜಿಪಿ ಹುದ್ದೆಗಳನ್ನು ಶಿಫಾರಸ್ಸು ಮಾಡುವ ಪ್ರಕ್ರಿಯೆ ನಡೆಸದೆ, ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಮಾಡಿ, ಪ್ರಭಾರ ಡಿಜಿಪಿಯಾಗಿ ಡಾ.ಎಂ ಎ ಸಲೀಂ ಅವರನ್ನು ನೇಮಿಸಲಾಗಿದೆ. ಇದು ಸುಪ್ರಿಂ ಕೋರ್ಟ್ ಆದೇಶ ಉಲ್ಲಂಘನೆಯಾಗಿದ್ದು, ಪ್ರಭಾರ ಡಿಜಿಪಿಯಾಗಿ ಸಲೀಂ ಅವರನ್ನು ನೇಮಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.