ಪಟಾಕಿ ದಾಸ್ತಾನು ಸಂಗ್ರಹಕ್ಕೆ ಮಾರ್ಗಸೂಚಿ ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದ ಹೈಕೋರ್ಟ್‌

ಸುರಕ್ಷತಾ ಕ್ರಮ ಅನುಸರಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಿಗೆ ಬೀಗ ಹಾಕಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಹಲವು ಪಟಾಕಿ ಮಾರಾಟಗಾರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌.
Firecrackers
Firecrackers

ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದರೂ ಪಟಾಕಿ ದಾಸ್ತಾನಿಗೆ ಪರವಾನಗಿ ನೀಡಿರುವ ಅಧಿಕಾರಿಗಳ ಕ್ರಮವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್‌, ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸುವ ಇಂಗಿತ ವ್ಯಕ್ತಪಡಿಸಿದೆ.

ಸುರಕ್ಷತಾ ಕ್ರಮ ಅನುಸರಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ವಿವಿಧ ಪಟಾಕಿ ದಾಸ್ತಾನು ಮತ್ತು ಮಾರಾಟ ಮಳಿಗೆಗಳಿಗೆ ಬೀಗ ಹಾಕಿರುವ ಕಂದಾಯ ನಿರೀಕ್ಷಕರ ಕ್ರಮ ಪ್ರಶ್ನಿಸಿ ಹಲವು ಪಟಾಕಿ ಮಾರಾಟಗಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ನ್ಯಾಯಾಲಯದ ಸೂಚನೆ ಮೇರೆಗೆ ಸ್ಫೋಟಕಗಳ ಮುಖ್ಯ ನಿಯಂತ್ರಣಾಧಿಕಾರಿ, ಅರ್ಜಿದಾರರ ಪಟಾಕಿ ದಾಸ್ತಾನು ಹಾಗೂ ಮಾರಾಟ ಮಳಿಗೆಯ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆ ವರದಿಗಳನ್ನು ಪೀಠಕ್ಕೆ ಒದಗಿಸಿದ ಕೇಂದ್ರ ಸರ್ಕಾರದ ಉಪ ಸಾಲಿಸಿಟರ್‌ ಜನರಲ್‌ ಎಚ್‌ ಶಾಂತಿಭೂಷಣ್‌ ಅವರು, ಜಿಲ್ಲಾಧಿಕಾರಿಗಳು ಪಟಾಕಿ ದಾಸ್ತಾನಿಗೆ ಅನುಮತಿ ನೀಡಿರುವ ಹಲವು ಪ್ರಕರಣಗಳಲ್ಲಿ ಸ್ಪೋಟಕಗಳ ಕಾಯಿದೆ 1984ರ ನಿಯಮಗಳು ಉಲ್ಲಂಘನೆಯಾಗಿದೆ. 500 ಕೆಜಿ ವರೆಗೂ ಪಟಾಕಿ ದಾಸ್ತಾನು ಮಾಡಲು ಜಿಲ್ಲಾಧಿಕಾರಿಗೆ ಪರವಾನಗಿ ನೀಡಲು ಅವಕಾಶವಿದೆ. ಆದರೆ, ಅದಕ್ಕಿಂತ ಹೆಚ್ಚು ಪ್ರಮಾಣ ಪಟಾಕಿ ದಾಸ್ತಾನಿಗೂ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ ಎಂದು ತಿಳಿಸಿದರು.

ಪಟಾಕಿ ದಾಸ್ತಾನು ಇರಿಸಿದ ಮತ್ತು ಮಾರಾಟ ಮಾಡುವ ಜಾಗ, ಇತರೆ ಅಂಗಡಿ, ಮನೆಗಳು ನಡುವೆ 15 ಮೀಟರ್‌ ಅಂತರವಿರಬೇಕು. ದಾಸ್ತಾನು ಮಾಹಿತಿ ನಿರ್ವಹಣೆ ಮಾಡಬೇಕು. ಅಗ್ನಿ ಸುರಕ್ಷತೆ ಕ್ರಮ ಕೈಗೊಳ್ಳಬೇಕು.  ಕೆಲ ಪ್ರಕರಣಗಳಲ್ಲಿ ನಿಯಮ ಮೀರಿ ಪರವಾನಗಿ ನೀಡಿದ್ದಾರೆ ಎಂದು ಎಂದು ಶಾಂತಿಭೂಷಣ್‌ ವಿವರಿಸಿದರು. ಇದೇ ವೇಳೆ ಅವರು, ಕಂದಾಯ ನಿರೀಕ್ಷಕರು ಅಧಿಕಾರ ವ್ಯಾಪ್ತಿ ಮೀರಿ ಪಟಾಕಿ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

Also Read
ಪಟಾಕಿ ದಾಸ್ತಾನು ಮಳಿಗೆಗಳ ಸುರಕ್ಷತೆ: ನವೆಂಬರ್ 6ರೊಳಗೆ ವರದಿ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಕಾನೂನುಬಾಹಿರವಾಗಿ ಪಟಾಕಿ ದಾಸ್ತಾನು ಮತ್ತು ಮಾರಾಟಕ್ಕೆ ಏಕೆ ಪರವಾನಗಿ ಕೊಡುತ್ತಿದ್ದೀರಿ? ದೀಪಾವಳಿ ಹಬ್ಬದಲ್ಲಿ ನಿಮಗೆ ಅನುಕೂಲವಾಗಲಿ ಎಂದು ಈ ರೀತಿ ಪರವಾನಗಿ ನೀಡುತ್ತೀರಾ? ಕಂದಾಯ ನಿರೀಕ್ಷಕರು ಏಕೆ ದಾಸ್ತಾನು ಮಳಿಗೆಗೆ ಬೀಗ ಹಾಕಿದ್ದಾರೆ? ಅವರಿಗೆ ಯಾವ ಅಧಿಕಾರವಿದೆ? ಅವರಿಗೆ ಪಟಾಕಿ ಏನಾದರೂ ಅವರಿಗೆ ಬೇಕಿತ್ತಾ ಎಂದು ಕಟುವಾಗಿ ಪ್ರಶ್ನಿಸಿತು.

ಅಲ್ಲದೇ, ಪ್ರತಿವರ್ಷ ದೀಪಾವಳಿ ಹಬ್ಬ ಸಮೀಪಿಸಿದಾಗ ಇದೇ ವರ್ತನೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ, ಪಟಾಕಿ ದಾಸ್ತಾನಿಗೆ ಅನುಮತಿ ನೀಡುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

Kannada Bar & Bench
kannada.barandbench.com