ಏಳು ದಶಕಗಳ ಹಿಂದೆ ಸಂವಿಧಾನ ರಚಿಸಲು ವಿವಿಧ ಹಿನ್ನೆಲೆಯ ವ್ಯಕ್ತಿಗಳು ಸೇರಿದ ರೀತಿಯಲ್ಲಿಯೇ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ವಿವಿಧ ಹಿನ್ನೆಲೆಯ ವ್ಯಕ್ತಿಗಳು ಸಹಕರಿಸಿದರು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ತಿಳಿಸಿದರು.
ಭಾರತೀಯ ವಕೀಲರ ಪರಿಷತ್ ಇಂದು ನವದೆಹಲಿಯಲ್ಲಿ ಆಯೋಜಿಸಿರುವ ಅಂತಾರಾಷ್ಟ್ರೀಯ ವಕೀಲರ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು.
"ವಿವಿಧ ಪ್ರದೇಶ ವೈವಿಧ್ಯಮಯ ಹಿನ್ನೆಲೆ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿದ್ದ ವ್ಯಕ್ತಿಗಳು ಜೊತೆಗೂಡಿ, ಒಂದು ದನಿಯಾಗುವ ಮೂಲಕ ಭಾರತದ ಸಂವಿಧಾನದ ಕರಡು ರಚನೆಗೆ ಮುಂದಾದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಅಂಥದ್ದೇ ಇನ್ನೊಂದು ಯತ್ನವನ್ನು ನಾವೀಗ ಕಂಡಿದ್ದು ದೇಶದ ನಾಗರಿಕರಾದ ನಾವು ಹೆಮ್ಮೆ ಪಡಬೇಕಾದ ಸಂಗತಿಯಾಗಿದೆ” ಎಂದು ಸಿಜೆಐ ಚಂದ್ರಚೂಡ್ ಹೇಳಿದರು.
ಸಿಜೆಐ ಭಾಷಣದ ಪ್ರಮುಖಾಂಶಗಳು
ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನ್ಯಾಯಾಂಗ ಮತ್ತು ಸರ್ಕಾರ ಸಹಭಾಗಿತ್ವದ ಮನೋಧರ್ಮದಲ್ಲಿ ಒಗ್ಗೂಡಿ ಕೆಲಸ ಮಾಡುತ್ತಿವೆ.
ಲಘು ಮೋಟಾರು ವಾಹನವನ್ನು ಓಡಿಸಲು ಪರವಾನಗಿ ಹೊಂದಿರುವ ವ್ಯಕ್ತಿಯು ವಾಣಿಜ್ಯ ವಾಹನವನ್ನು ಓಡಿಸಬಹುದೇ ಎಂಬ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿರುವ ಸಂವಿಧಾನ ಪೀಠದ ಪ್ರಕರಣವನ್ನು ಸರ್ಕಾರ ಮತ್ತು ನ್ಯಾಯಾಂಗ ಪ್ರತಿಕೂಲ ಸವಾಲಾಗಿ ನೋಡುವ ಬದಲು ದೇಶದ ಲಕ್ಷಾಂತರ ಚಾಲಕರ ಜೀವನೋಪಾಯ ಸಾಗುವಂತೆ ಮಾಡಲು ಸಹಕರಿಸುತ್ತಿವೆ.
ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ₹ 7,000 ಕೋಟಿಗೂ ಹೆಚ್ಚು ಆರ್ಥಿಕ ವೆಚ್ಚದ 3 ನೇ ಹಂತದ ಇ-ಕೋರ್ಟ್ ಯೋಜನೆಗೆ ಅನುಮೋದನೆ ನೀಡಿದೆ.
ಬಹುಬಗೆಯ ತೀರ್ಪುಗಳನ್ನು (Polyvocal Court) ನೀಡುವ ನ್ಯಾಯಾಲಯ ಎಂದು ಸುಪ್ರೀಂ ಕೋರ್ಟನ್ನು ಕರೆದರೂ ಆ ಕಾರಣಕ್ಕಾಗಿಯೇ ನಮ್ಮದು ರಾಷ್ಟ್ರೀಯ ನ್ಯಾಯಾಲಯ ಎನಿಸಿದೆ. ದಿನದ ಕೊನೆಗೆ ನಾವೆಲ್ಲಾ ಒಗ್ಗೂಡಿ ನಡೆದದ್ದನ್ನು ಚರ್ಚಿಸುತ್ತೇವೆ. ಅಭಿಪ್ರಾಯ ಭೇದದ ಹೊರತಾಗಿಯೂ ಈ ಸ್ನೇಹದ ಕಲ್ಪನೆ ಚೇತೋಹಾರಿಯದ್ದಾಗಿರುತ್ತದೆ.
ವಕೀಲರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಇದು ಸಕಾಲ. ಈಗ ದೇಶದ ವಕೀಲರು ಎಂದು ನಮ್ಮನ್ನು ನೋಡುವುದಿಲ್ಲ. ನಾವು ಜಾಗತಿಕ ರಂಗದತ್ತ ತುಡಿಯಬೇಕಿದೆ. ಆದರೆ ನ್ಯಾಯವಿತರಣೆಯಲ್ಲಿ ಎದುರಾಗುವ ಸವಾಲುಗಳನ್ನು ತಪ್ಪಿಸಲು ನಮ್ಮಲ್ಲಿ ಮಂತ್ರ ದಂಡ ಇಲ್ಲ. ಈ ಎರಡು ದಿನಗಳ ಸಮ್ಮೇಳನದಲ್ಲಿ ನಾವು ನವೀನ ಪರಿಹಾರಗಳನ್ನು ಕಂಡುಕೊಳ್ಳುತ್ತೇವೆ ಎಂದು ನನಗೆ ಖಾತ್ರಿಯಿದೆ.
ಕೇಂದ್ರ ಕಾನೂನು ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್, ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.