ಇಂಡಿಗೋ ವಿಮಾನ ಬಿಕ್ಕಟ್ಟು: ಸುಪ್ರೀಂ, ದೆಹಲಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಕೆ

ಪೈಲಟ್‌ಗಳ ಕೊರತೆ ಮತ್ತು ಹೊಸದಾಗಿ ವಿಮಾನ ಕರ್ತವ್ಯ ಸಮಯ ನಿಯಮಾವಳಿ ಜಾರಿಗೆ ತರಲು ಸಾಧ್ಯವಾಗದೆ ಇಂಡಿಗೋ ಗಂಭೀರ ತೊಂದರೆ ಎದುರಿಸುತ್ತಿದೆ.
Indigo
Indigo
Published on

ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನ ರದ್ದತಿ ಮತ್ತು ವಿಳಂಬದಿಂದ ಉಂಟಾಗಿರುವ ಅವ್ಯವಸ್ಥೆ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕಳವಳ ವ್ಯಕ್ತಪಡಿಸಿದೆ.

ಜನ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದು ಅವರಲ್ಲಿ ಹಲವರಿಗೆ ಆರೋಗ್ಯ ಸಮಸ್ಯೆಗಳಿರಬಹುದು ಎಂದು ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಕಳವಳ ವ್ಯಕ್ತಪಡಿಸಿತು.

Also Read
ವಿಮಾನಯಾನ ದರ ಕಡಿವಾಣಕ್ಕೆ ದೆಹಲಿ ಹೈಕೋರ್ಟ್ ನಕಾರ: ವಿಮಾನಕ್ಕಿಂತಲೂ ರಿಕ್ಷಾ ದರ ದುಬಾರಿ ಎಂದ ನ್ಯಾಯಾಲಯ

ಆದರೆ ಕೇಂದ್ರ ಸರ್ಕಾರ ಪ್ರಕರಣವನ್ನು ಪರಿಗಣಿಸಿರುವುದನ್ನು ಸಹ ನ್ಯಾಯಪೀಠ ಗಮನಿಸಿತು. "ಇದು ಗಂಭೀರ ವಿಷಯ. ಲಕ್ಷಾಂತರ ಜನ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಭಾರತ ಸರ್ಕಾರ ಸಕಾಲಿಕ ಕ್ರಮ ಕೈಗೊಂಡಿದೆ ಮತ್ತು ಸಮಸ್ಯೆಯನ್ನು ಪರಿಗಣಿಸಿದೆ ಎಂದು ನಮಗೆ ತಿಳಿದಿದೆ. ಅನೇಕ ಪ್ರಯಾಣಿಕರಿಗೆ ಅನಾರೋಗ್ಯ ಇತ್ಯಾದಿ ಸಮಸ್ಯೆಗಳೂ ಇರಬಹುದು” ಎಂದು ಸಿಜೆಐ ಕಾಂತ್ ಆತಂಕ ವ್ಯಕ್ತಪಡಿಸಿದರು.

ಅರ್ಜಿಯನ್ನು ಪಟ್ಟಿ ಮಾಡುವಂತೆ ಮಾಡಿದ ನಂತರ, ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು. ಇಂಡಿಗೋದಲ್ಲಿ ಸಾಕಷ್ಟು ಹುದ್ದೆ ಖಾಲಿ ಇರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡಲಾಗುತ್ತಿಲ್ಲ ಎಂದು ವಕೀಲರು ಹೇಳಿದರು.

ಆದರೆ ಅರ್ಜಿಯನ್ನು ತುರ್ತಾಗಿ ಆಲಿಸಲು ನ್ಯಾಯಾಲಯ ಒಪ್ಪಲಿಲ್ಲ. ಅರ್ಜಿಯನ್ನು ನಿಯಮಿತ ಕ್ರಮದಲ್ಲಿಯೇ ವಿಚಾರಣೆಗೆ ಪಟ್ಟಿಯಾಗುವ ಸಾಧ್ಯತೆ ಇದೆ.

Also Read
ಸ್ಪೈಸ್‌ಜೆಟ್‌ ಮಾಜಿ ಪ್ರವರ್ತಕ ಮಾರನ್‌ಗೆ ₹380 ಕೋಟಿ ಪಾವತಿಸಲು ವಿಮಾನಯಾನ ಸಂಸ್ಥೆಗೆ ಸೂಚಿಸಿದ ದೆಹಲಿ ಹೈಕೋರ್ಟ್

ಇತ್ತ ಇಂಡಿಗೋ ಬಿಕ್ಕಟ್ಟಿನಿಂದ ತೊಂದರೆಗೊಳಗಾದವರಿಗೆ ಪ್ರಯಾಣ ಮೊತ್ತವನ್ನು ಮರುಪಾವತಿಸಲು ನಿರ್ದೇಶನ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೂ ಇದೇ ರೀತಿಯ ಅರ್ಜಿ ಸಲ್ಲಿಸಲಾಗಿದೆ.

ವಿಮಾನ ನಿಲ್ದಾಣದಲ್ಲಿ ಸಿಲುಕಿರುವ ಜನರಿಗೆ ಇಂಡಿಗೋ ಸೂಕ್ತ ರೀತಿಯಲ್ಲಿ ಸಹಕರಿಸುವಂತೆ ನ್ಯಾಯಾಲಯ ಆದೇಶ ನೀಡಬೇಕು ಎಂದು ನಾವು ಕೋರುತ್ತೇವೆ. ಸೂಕ್ತ ರೀತಿಯಲ್ಲಿ ಪ್ರಯಾಣದ ಮೊತ್ತ ಮರುಪಾವತಿಯಾಗುತ್ತಿಲ್ಲ ಎಂದು ಪಿಐಎಲ್‌ ಅರ್ಜಿದಾರರು ದೂರಿದ್ದಾರೆ.

ಸರ್ಕಾರ ಈಗಾಗಲೇ ಕೆಲನಿರ್ದೇಶನಗಳನ್ನು ನೀಡಿದೆ ಎಂದ ಮುಖ್ಯ ನ್ಯಾಯಮೂರ್ತಿ ಡಿ ಕೆ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ವಿಭಾಗೀಯ ಪೀಠ ಬುಧವಾರ ಪ್ರಕರಣ ಆಲಿಸುವುದಾಗಿ ತಿಳಿಸಿತು.

ಪೈಲಟ್‌ಗಳ ಕೊರತೆ ಮತ್ತು ಹೊಸದಾಗಿ ವಿಮಾನ ಕರ್ತವ್ಯ ಸಮಯ ನಿಯಮಾವಳಿ ಜಾರಿಗೆ ತರಲು ಸಾಧ್ಯವಾಗದೆ ಇಂಡಿಗೋ ಗಂಭೀರ ತೊಂದರೆ ಎದುರಿಸುತ್ತಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟನ್ನು ನಿಭಾಯಿಸಲು ಇಂಡಿಗೋಗೆ ವಿನಾಯಿತಿ ನೀಡಿದ್ದಾರೆ. ಆದರೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನ ರದ್ದತಿ ಮುಂದುವರೆದಿದೆ.

Kannada Bar & Bench
kannada.barandbench.com