ಮಕ್ಕಳ ಸುಪರ್ದು ಕೋರಿದ ಅರ್ಜಿಗಳನ್ನು ಅವರು ವಾಸಿಸುವ ಪ್ರದೇಶದ ನ್ಯಾಯಾಲಯದಲ್ಲಿ ಸಲ್ಲಿಸಬೇಕು: ಹೈಕೋರ್ಟ್‌

ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಮಗುವಿನ ತಂದೆಯ ಅರ್ಜಿಯನ್ನು ವಿಚಾರಣೆ ನಡೆಸಲು ಪ್ರಾದೇಶಿಕ ವ್ಯಾಪ್ತಿ ಹೊಂದಿಲ್ಲ ಎಂದು ನ್ಯಾಯಾಲಯ ನಿರ್ಧರಿಸಿದೆ.
High Court of Karnataka
High Court of Karnataka
Published on

ಮಕ್ಕಳ ಸುಪರ್ದಿಗೆ ಕೋರುವ ಅರ್ಜಿಗಳನ್ನು ಅವರು ವಾಸವಿರುವ ಪ್ರದೇಶದ ವ್ಯಾಪ್ತಿಯ ನ್ಯಾಯಾಲಯದಲ್ಲಿ ಮಾತ್ರ ಸಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಚಾಮರಾಜನಗರ ಜಿಲ್ಲೆ ನಿವಾಸಿಗಳಾದ ಸಮೀವುಲ್ಲಾ ಮತ್ತು ಮುಬೀನ್‌ ತಾಜ್‌ ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಪ್ರಕರಣದಲ್ಲಿ ಅರ್ಜಿದಾರರ ಮೊಮ್ಮಗು ಚಾಮರಾಜನಗರದಲ್ಲಿ ನೆಲೆಸಿದೆ. ಮಗುವಿನ ಸುಪರ್ದಿ ಕೋರಿ ತಂದೆ ಮೈಸೂರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಾರ ಮಗುವಿನ ಸುಪರ್ದಿಗೆ ಕೋರಿ ಎಲ್ಲೆಂದರಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಮಗು ನೆಲೆಸಿರುವ ವ್ಯಾಪ್ತಿಯ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಅದರಂತೆ ತಂದೆಯು ಚಾಮರಾಮನಗರದ ಸಂಬಂಧಪಟ್ಟ ನ್ಯಾಯಾಲಯಲ್ಲಿಯೇ ಮಗುವಿನ ಸುಪರ್ದಿಗೆ ಅರ್ಜಿ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.

ಮಗು ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ ಕಾರಣ, ಸಂಬಂಧಪಟ್ಟ ಸ್ಥಳೀಯ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಬೇಕಿದೆ. ಮೈಸೂರಿನ ಕೌಟುಂಬಿಕ ನ್ಯಾಯಾಲಯವು ಮಗುವಿನ ತಂದೆಯ ಅರ್ಜಿಯನ್ನು ವಿಚಾರಣೆ ನಡೆಸಲು ಪ್ರಾದೇಶಿಕ ವ್ಯಾಪ್ತಿ ಹೊಂದಿಲ್ಲ ಎಂದು ನ್ಯಾಯಾಲಯ ನಿರ್ಧರಿಸಿದೆ.

ಅಂತಿಮವಾಗಿ ಮೈಸೂರು ನ್ಯಾಯಾಲಯದ ಆದೇಶ ರದ್ದುಪಡಿಸಿ, ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ತಂದೆ ಅರ್ಜಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ಮಗುವಿನ ಅಜ್ಜಿ-ತಾತನ (ತಾಯಿಯ ಪೋಷಕರು) ಪರ ವಕೀಲರು, ಅರ್ಜಿದಾರರೊಂದಿಗೆ ಮಗು ಚಾಮರಾಜನಗರ ಜಿಲ್ಲೆಯ ಯಳಂದೂರಿನಲ್ಲಿ ನೆಲೆಸಿದೆ. ಮಗುವಿನ ತಂದೆ ಮೈಸೂರಿನ ನಿವಾಸಿ. ಮಗುವಿನ ಸುಪರ್ದಿಗೆ ಕೋರುವ ಅರ್ಜಿಯನ್ನು ಮಗು ನೆಲೆಸಿರುವ ಪ್ರದೇಶ ವ್ಯಾಪ್ತಿಯ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಅದರ ಹೊರತಾಗಿ ಸಂಬಂಧಿಗಳು, ತಂದೆ ಅಥವಾ ತಾಯಿ ನೆಲೆಸಿರುವ ವ್ಯಾಪ್ತಿಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತಿಲ್ಲ. ಆದ್ದರಿಂದ ಮಗುವಿನ ತಂದೆಯ ಅರ್ಜಿಯನ್ನು ಚಾಮರಾಜನಗರ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿದ ಅರ್ಜಿದಾರರ ಮನವಿ ತಿರಸ್ಕರಿಸಿದ ಮೈಸೂರಿನ ನ್ಯಾಯಾಲಯದ ಕ್ರಮ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಅರ್ಜಿದಾರರ ಪುತ್ರಿ ಮೊಹಮ್ಮದ್‌ ಸಮೀರ್‌ (ಮಗುವಿನ ತಂದೆ) ಅವರನ್ನು ವಿವಾಹವಾಗಿದ್ದು, ಅವರಿಗೆ ಮಗು ಜನಿಸಿತ್ತು. ಅರ್ಜಿದಾರರ ಪುತ್ರಿ 2021 ಮೇ 6ರಂದು ನಿಧನರಾಗಿದ್ದರು. ಇದರಿಂದ ಮೊಮ್ಮಗುವನ್ನು ತಮ್ಮ ಬಳಿಯೇ ಅರ್ಜಿದಾರರು ಇರಿಸಿಕೊಂಡಿದ್ದರು. ಮಗು ಮತ್ತು ಅರ್ಜಿದಾರರು ಚಾಮರಾಜನಗರದಲ್ಲಿ ನೆಲೆಸಿದ್ದಾರೆ. ಈ ನಡುವೆ ಮಗುವಿನ ಸುಪರ್ದಿಯನ್ನು ತನಗೆ ಒಪ್ಪಿಸಲು ಆದೇಶಿಸಬೇಕು ಎಂದು ಕೋರಿ ತಂದೆ, 2021ರ ಡಿಸೆಂಬರ್‌ 21ರಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಚಾಮರಾಜನಗರ ಕೌಟುಂಬಿಕ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅರ್ಜಿದಾರರು ಮಧ್ಯಂತರ ಅರ್ಜಿ ಸಲ್ಲಿಸಿದ್ದರು. ಅದನ್ನು ತಿರಸ್ಕರಿಸಿ ಮೈಸೂರಿನ 3ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2023ರ ಫೆಬ್ರವರಿ 3ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 

Kannada Bar & Bench
kannada.barandbench.com