ಮನೆಯಲ್ಲಿ ಕ್ರಿಸ್ತನ ಛಾಯಾಚಿತ್ರ ಇದ್ದ ಮಾತ್ರಕ್ಕೆ ಆ ವ್ಯಕ್ತಿ ನಿಶ್ಚಿತವಾಗಿಯೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂದರ್ಥವಲ್ಲ ಎಂದು ಬಾಂಬೆ ಹೈಕೋರ್ಟ್ ನಾಗಪುರ ಪೀಠ ಈಚೆಗೆ ಹೇಳಿದೆ [ಪರ್ವಿ ಆಶಿಶ್ ಚಕ್ರವರ್ತಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿರತರರ ನಡುವಣ ಪ್ರಕರಣ].
ತಾನು ʼಮಹರ್ʼ ಜಾತಿಗೆ ಸೇರಿದವಳು ಎಂಬ ಅಪ್ರಾಪ್ತ ವಯಸ್ಕ ಬಾಲಕಿಯ ವಾದವನ್ನು ನಿರಾಕರಿಸಿದ್ದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪೃಥ್ವಿರಾಜ್ ಚವಾಣ್ ಮತ್ತು ಊರ್ಮಿಳಾ ಜೋಶಿ ಫಾಲ್ಕೆ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಾಲಕಿಯ ಮನೆಗೆ ಭೇಟಿ ನೀಡಿದ್ದ ಸಮಿತಿಯ ವಿಚಕ್ಷಣಾ ದಳ ಆಕೆಗೆ ಮಹರ್ ಜಾತಿಯ ಪ್ರಮಾಣಪತ್ರ ನೀಡದೆ ಇರಲು ನಿರ್ಧರಿಸಿತ್ತು.
ಆದರೆ ಹೈಕೋರ್ಟ್, “ವಿಚಕ್ಷಣಾ ದಳದ ಅಧಿಕಾರಿ ಕೇವಲ ಅರ್ಜಿದಾರೆಯ ಮನೆಗೆ ಭೇಟಿ ನೀಡಿ ಭಗವಾನ್ ಏಸುಕ್ರಿಸ್ತರ ಛಾಯಾಚಿತ್ರ ಇರುವುದನ್ನು ಗಮನಿಸಿ ಅರ್ಜಿದಾರೆಯ ಕುಟುಂಬ ಕ್ರೈಸ್ತ ಧರ್ಮಕ್ಕೆ ಸೇರಿದ್ದೆಂದು ಭಾವಿಸಿದ್ದಾರೆ. ಒಬ್ಬರ ಮನೆಯಲ್ಲಿ ಕ್ರಿಸ್ತನ ಛಾಯಾಚಿತ್ರ ಇದ್ದ ಮಾತ್ರಕ್ಕೆ ಆ ವ್ಯಕ್ತಿ ನಿಜವಾಗಿಯೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ ಎಂಬ ಮಾತನ್ನು ವಿವೇಚನೆಯುಳ್ಳ ಯಾವುದೇ ವ್ಯಕ್ತಿ ಒಪ್ಪುವುದಿಲ್ಲ ಇಲ್ಲವೇ ನಂಬುವುದಿಲ್ಲ” ಎಂದು ನುಡಿದಿದೆ.
ಅರ್ಜಿದಾರೆಗೆ (ಅಪ್ರಾಪ್ತ ಬಾಲಕಿ) ಯಾರೋ ಛಾಯಾಚಿತ್ರವನ್ನು ಉಡುಗೊರೆಯಾಗಿ ನೀಡಿದ್ದು ಅದನ್ನು ಆಕೆ ಮನೆಯಲ್ಲಿ ತೂಗುಹಾಕಿದ್ದಾಳೆ . ಆದರೆ ಬಾಲಕಿಯ ತಂದೆ ಅಥವಾ ಅಜ್ಜ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಲು ಬ್ಯಾಪ್ಟಿಸಮ್ (ಸಂಸ್ಕಾರ ಮಜ್ಜನ) ಪಡೆದಿದ್ದಾರೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರೆ ಮತ್ತವರ ಕುಟುಂಬದ ಸಾಂಪ್ರಾದಯಿಕ ಉದ್ಯೋಗ ಕೂಲಿ ಕೆಲಸ. ಅಲ್ಲದೆ ಕುಟುಂಬ ಬೌದ್ಧ ಸಂಪ್ರದಾಯಗಳ ಪ್ರಕಾರ ವಿವಾಹ ನೆರವೇರಿಸುತ್ತದೆ ಎಂಬುದನ್ನು ಅರಿತ ನ್ಯಾಯಾಲಯ ವಿಚಕ್ಷಣಾ ದಳದ ವರದಿ ಒಪ್ಪಲು ನಿರಾಕರಿಸಿತು.
“ಕುಟುಂಬವು ಅನುಸರಿಸುತ್ತಿರುವ ಬೌದ್ಧಧರ್ಮದ ಸಂಪ್ರದಾಯವಾಗಿದ್ದು, ವಿಚಕ್ಷಣಾ ಅಧಿಕಾರಿಯ ವರದಿಯು ಮೇಲುನೋಟಕ್ಕೆ ತಿರಸ್ಕಾರಯೋಗ್ಯವಾಗಿದ್ದು, ಕಪೋಲಕಲ್ಪಿತವಾಗಿದೆ. ಅರ್ಜಿದಾರರ ವಾದವನ್ನು ಆಕ್ಷೇಪಿಸುವಂತಹ ಯಾವುದೇ ಸಾಕ್ಷಿ ಇಲ್ಲ. ಅರ್ಜಿದಾರೆಗೆ ಸಮಿತಿ ಇನ್ನೆರಡು ವಾರಗಳ ಒಳಗೆ ಮೆಹರ್ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡಬೇಕು” ಎಂದು ಪೀಠ ನಿರ್ದೇಶಿಸಿತು.