

ಇಂಡಿಗೋ ವಿಮಾನಗಳ ಸಂಚಾರ ರದ್ದತಿ ವಿಚಾರವಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ವಿರುದ್ಧ ತನಿಖೆ ನಡೆಸುವಂತೆ ಹಾಗೂ ರದ್ದತಿಯಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಸೆಂಟರ್ ಫಾರ್ ಅಕೌಂಟಬಿಲಿಟಿ ಅಂಡ್ ಸಿಸ್ಟಮಿಕ್ ಚೇಂಜ್ (CASC) ಸಂಸ್ಥೆಯು ಸಲ್ಲಿಸಿದ ಈ ಅರ್ಜಿ ನಾಳೆ (ಡಿಸೆಂಬರ್ 17) ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿರುವ ಪೀಠದೆದುರು ವಿಚಾರಣೆಗೆ ಬರುವ ಸಾಧ್ಯತೆ ಇದೆ.
ಪರಿಷ್ಕೃತ ವಿಮಾನ ಕರ್ತವ್ಯ ಸಮಯ ನಿಯಮಾವಳಿ ಪಾಲಿಸಲು ಇಂಡಿಗೋಗೆ ಸಾಧ್ಯವಾಗದೆ ಇದ್ದುದರಿಂದ ರಾಷ್ಟ್ರವ್ಯಾಪಿ ವಾಯುಯಾನ ಬಿಕ್ಕಟ್ಟು ತಲೆದೋರಿ ಕಂಪೆನಿಯ 5,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಅಡಚಣೆಗಳಿಂದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಸಿಲುಕಿಕೊಂಡರು. ಸಮರ್ಪಕ ಮಾಹಿತಿ ನೀಡದಿರುವುದು, ಮರುಪಾವತಿಯಲ್ಲಿ ವಿಳಂಬ ಮತ್ತು ಸರ್ಕಾರ ವಿಧಿಸಿದ್ದ ದರ ಮಿತಿಗಳಿದ್ದರೂ ವಿಮಾನ ದರಗಳು ತೀವ್ರ ಏರಿಕೆ ಕಂಡವು ಎಂದು ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ 2019ರ ಸೆಕ್ಷನ್ 2(5)(iii) ಮತ್ತು 35(1)(d) ಅಡಿಯಲ್ಲಿ ಇಂಡಿಗೋ ವಿರುದ್ಧ ಸಾಮೂಹಿಕ ಮೊಕದ್ದಮೆ (ಕ್ಲಾಸ್ ಆಕ್ಷನ್ ಸೂಟ್) ದಾಖಲಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿ ಕೋರಿದೆ.
ಇತ್ತ ಡಿಜಿಸಿಎ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದುಈ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಅಥವಾ ಲೋಕಪಾಲ್ ತನಿಖೆ ನಡೆಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಗಮನಾರ್ಹವಾಗಿ, ಇಂಡಿಗೋ ಸಂಕಷ್ಟಕ್ಕೆ ಸಂಬಂಧಿಸಿದಂತೆ ಈಗಾಗಲೇ ಮತ್ತೊಂದು ಪಿಐಎಲ್ ಅನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಡಿಸೆಂಬರ್ 10ರಂದು ಆ ಪ್ರಕರಣದ ವಿಚಾರಣೆ ವೇಳೆ, ತೊಂದರೆಗೊಳಗಾದ ಪ್ರಯಾಣಿಕರಿಗೆ ಪರಿಹಾರ ನೀಡುವಂತೆ ಇಂಡಿಗೋಗೆ ಅದು ಆದೇಶಿಸಿತ್ತು. ಇದೇ ವೇಳೆ ತಪ್ಪು ಮಾಡಿದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೂ ನಿರ್ದೇಶನ ನೀಡಿತ್ತು.