ಪರೇಶ್ ರಾವಲ್ ನಟನೆಯ 'ದ ತಾಜ್ ಸ್ಟೋರಿ' ಸಿನಿಮಾ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಪಿಐಎಲ್

ತಾಜ್ ಮಹಲ್ ಮೂಲದ ಬಗ್ಗೆ ಈ ಚಿತ್ರ ಕಪೋಲಕಲ್ಪಿತ ಮತ್ತು ಪ್ರಚೋದನಕಾರಿ ವಿಚಾರವನ್ನು ಪ್ರಸ್ತುತಪಡಿಸುತ್ತದೆ ಎಂದು ವಾದಿಸಿ ವಕೀಲ ಶಕೀಲ್ ಅಬ್ಬಾಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
The Taj Story
The Taj Story
Published on

ನಟ ಪರೇಶ್ ರಾವಲ್ ಅಭಿನಯದ 'ದ ತಾಜ್ ಸ್ಟೋರಿ' ಚಿತ್ರದ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ. ಚಿತ್ರ ಅಕ್ಟೋಬರ್ 31ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ.

ಚಿತ್ರದ ಪೋಸ್ಟರ್‌ನಲ್ಲಿ ತಾಜ್ ಮಹಲ್‌ನ ಗುಮ್ಮಟದಿಂದ ಶಿವನ ಪ್ರತಿಮೆ ಹೊರಬರುತ್ತಿರುವಂತೆ ಬಿಂಬಿಸಿರುವುದು ಮತ್ತು ಸ್ಮಾರಕ ಹಿಂದೂ ದೇವಾಲಯವಾಗಿತ್ತು ಎಂಬ ಚರ್ಚಾಸ್ಪದ ಸಿದ್ಧಾಂತವನ್ನು ಚಿತ್ರದ ಪೋಸ್ಟರ್‌ ಮುನ್ನಲೆಗೆ ತರುತ್ತಿರುವುದು ವಿವಾದ ಹುಟ್ಟುಹಾಕಿದೆ.

ತಾಜ್ ಮಹಲ್ ಮೂಲದ ಬಗ್ಗೆ ಈ ಚಿತ್ರ ಕಪೋಲಕಲ್ಪಿತ ಮತ್ತು ಪ್ರಚೋದನಕಾರಿ ವಿಚಾರವನ್ನು ಪ್ರಸ್ತುತಪಡಿಸುತ್ತದೆ ಎಂದು ಹೇಳಿ ವಕೀಲ ಶಕೀಲ್ ಅಬ್ಬಾಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಇದು ಈಗಾಗಲೇ ಸಾಬೀತಾದ ಇತಿಹಾಸ ಮತ್ತು ವಿದ್ವಾಂಸರ ಒಮ್ಮತಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಪ್ರತಿಪಾದಿಸುತ್ತದೆ ಎಂದು ಅರ್ಜಿ ಆರೋಪಿಸಿದೆ.

Also Read
ತಾಜ್‌ ಮಹಲ್‌ ಕೊಠಡಿ ತೆರೆಯಲು ಕೋರಿದ್ದ ಪಿಐಎಲ್‌ ವಜಾ ಮಾಡಿದ ಸುಪ್ರೀಂ; 'ಪ್ರಚಾರ ಹಿತಾಸಕ್ತಿ ಅರ್ಜಿ' ಎಂದ ಪೀಠ

ಆದ್ದರಿಂದ, ಸಿನಿಮಾಕ್ಕೆ ನೀಡಿರುವ ಪ್ರಮಾಣಪತ್ರವನ್ನು ಮರು ಪರಿಶೀಲಿಸಬೇಕು ಅಥವಾ ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡುವುದಕ್ಕಾಗಿ ದೃಶ್ಯಗಳಿಗೆ ಅಗತ್ಯ ಕತ್ತರಿ ಪ್ರಯೋಗ ಮಾಡಲು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ. ಚಿತ್ರವು ವಿವಾದಿತ ಕಥನದಿಂದ ಕೂಡಿದೆ ಎಂಬ ಹಕ್ಕು ತ್ಯಾಗ ಘೋಷಣೆಯನ್ನು ಸಿನಿಮಾ ಪ್ರದರ್ಶನದ ವೇಳೆ ಪ್ರಸಾರ ಮಾಡಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

Also Read
ತಾಜ್ ಮಹಲ್‌ನಲ್ಲಿ ಶಹಜಹಾನ್ ವಾರ್ಷಿಕ ಉರುಸ್‌ ನಿಷೇಧಿಸಲು ಕೋರಿ ಆಗ್ರಾ ನ್ಯಾಯಾಲಯದ ಮೆಟ್ಟಿಲೇರಿದ ಹಿಂದೂ ಸಂಘಟನೆ

ಚಿತ್ರದ ಊಹಾತ್ಮಕ ಹೇಳಿಕೆಗಳು ಇತಿಹಾಸ ಅಧ್ಯಯನದ ಮೇಲಿನ ನಂಬಿಕೆಯನ್ನು ಕಡಿಮೆ ಮಾಡಬಹುದು, ಕೋಮು ಅಶಾಂತಿಗೆ ಕಾರಣವಾಗಬಹುದು. ಯುನೆಸ್ಕೋ ವಿಶ್ವ ಪರಂಪರೆ ಸ್ಮಾರಕವಾದ ತಾಜ್ ಮಹಲ್‌ನ ಅಂತಾರಾಷ್ಟ್ರೀಯ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ಒದಗಬಹುದು ಎಂದು ಅರ್ಜಿ ಆತಂಕ ವ್ಯಕ್ತಪಡಿಸಿದೆ.

ಚಿತ್ರದಲ್ಲಿ ಗಂಭೀರವಾದ ಮತ್ತು ವಿಭಜನಕಾರಿ ದೃಶ್ಯಗಳು ಇದ್ದು, ಅವು ಕೋಮು  ಉದ್ವಿಗ್ನತೆ ಉಂಟುಮಾಡಿ ಸಮಾಜದ ಶಾಂತಿ ಕದಡಬಹುದು. ಚಿತ್ರ ಬಿಜೆಪಿ ನಾಯಕರು  ಹಾಗೂ ಹಿಂದುತ್ವವಾದಿ ಸಂಘಟನೆಗಳ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ಪುನಃ ವೈಭವೀಕರಿಸುತ್ತಿದ್ದು, ಇದರಿಂದ ದೇಶವ್ಯಾಪಿ ಕೋಮು ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ಅದು ದೂರಿದೆ.

Kannada Bar & Bench
kannada.barandbench.com