ಶಾಹೀನ್‌ಬಾಗ್ ಪ್ರತಿಭಟನೆ: ಸಾರ್ವಜನಿಕ ಹಕ್ಕು ಮತ್ತು ಪ್ರತಿಭಟನೆ ಹಕ್ಕಿನ ಸಮನ್ವಯ ಕುರಿತ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಪ್ರತಿಭಟನೆಯ ಹಕ್ಕು ಜನರಿಗಿದೆ ಎಂಬುದನ್ನು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್ ಚಲನೆ ಮತ್ತು ಸಂಚಾರದ ಹಕ್ಕುಗಳೂ ಸಾರ್ವಜನಿಕರಿಗೆ ಇವೆ ಎಂದು ನೆನಪಿಸಿದೆ.
Shaheen bagh
Shaheen bagh
Published on

ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಹೋರಾಟದ ಸಂದರ್ಭದಲ್ಲಿ ಗಮನಸೆಳೆದಿದ್ದ ಶಾಹೀನ್ ಬಾಗ್ ಪ್ರತಿಭಟನೆಗಳ ಪೈಕಿ ಪ್ರತಿಭಟಿಸುವ ಹಕ್ಕು ಮತ್ತು ಜನರ ಇತರ ಹಕ್ಕುಗಳ ಸಮನ್ವಯ ಕುರಿತಾದ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.

ಸಿಎಎ ವಿರೋಧಿಸಿ ಶಾಹಿನ್ ಬಾಗ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು. ಕೋವಿಡ್ ಹಿನ್ನೆಲೆಯಲ್ಲಿ ಬಹುಹಿಂದೆಯೇ ಪ್ರತಿಭಟನೆಯನ್ನು ಹಿಂಪಡೆಯಲಾಗಿತ್ತು.

ಪ್ರತಿಭಟನೆ ಹಿಂಪಡೆದು ಸಾಕಷ್ಟು ಬೆಳವಣಿಗೆಗಳು ಆಗಿರುವುದರಿಂದ ಅರ್ಜಿಗಳು ಅಸ್ತಿತ್ವ ಕಳೆದುಕೊಂಡಿವೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಆದರೆ, ಒಬ್ಬರನ್ನು ಹೊರತುಪಡಿಸಿ ಉಳಿದವರಾರು ಅರ್ಜಿಗಳನ್ನು ಹಿಂಪಡೆಯಲು ಒಪ್ಪಲಿಲ್ಲ. ಮಧ್ಯಪ್ರವೇಶಗಾರರನ್ನು ಪ್ರತಿನಿಧಿಸಿದ್ದ ವಕೀಲ ಮೆಹಮೂದ್ ಪ್ರಾಚ ಅವರು ಪ್ರತಿಭಟನೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ವಿಚಾರಗಳತ್ತ ಗಮನ ಕೇಂದ್ರೀಕರಿಸಬೇಕಿದೆ. ಶಾಹಿನ್ ಬಾಗ್ ನಲ್ಲಿ ತಿಂಗಳುಗಟ್ಟಲೆ ನಡೆದ ಪ್ರತಿಭಟನೆಗಳು ಶಾಂತಿಯುತವಾಗಿದ್ದವು. ಇದನ್ನು ಹತ್ತಿಕ್ಕಲು ಆಡಳಿತ ಯಂತ್ರವನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿತು ಎಂದರು.

Also Read
ಆಸ್ತಿ ಹಕ್ಕು ಮೂಲಭೂತ ಹಕ್ಕಲ್ಲದೆ ಹೋದರೂ, ಸಾಂವಿಧಾನಿಕ ಹಕ್ಕಾಗಿದೆ: ಸುಪ್ರೀಂ ಕೋರ್ಟ್‌

ಜನರಿಗೆ ಪ್ರತಿಭಟಿಸುವ ಹಕ್ಕಿದೆ ಎಂದು ಪ್ರಾಚ ಹೇಳಿದರು. ಪ್ರತಿಭಟಿಸುವ ಹಕ್ಕಿಲ್ಲ ಎಂದು ಹೇಳಿದ್ದು ಯಾರು? ಅದು ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿಕ್ರಿಯಿಸಿದರು. ಪ್ರತಿಭಟನೆಯ ಹಕ್ಕು ಜನರಿಗೆ ಇದೆ ಎಂಬುದನ್ನು ಒಪ್ಪಿದ ನ್ಯಾಯಾಲಯವು, ಅದೇ ವೇಳೆ ಚಲನೆ ಮತ್ತು ಸಂಚಾರದ ಹಕ್ಕುಗಳೂ ಸಾರ್ವಜನಿಕರಿಗೆ ಇವೆ. ಹಾಗಾಗಿ, ಇವುಗಳ ನಡುವೆ ಸಮನ್ವಯ ಕಾಪಾಡಿಕೊಳ್ಳಬೇಕಿದೆ ಎಂದು ನೆನಪಿಸಿತು.

ಸಂವಾದಕಾರರಾಗಿ ಕೆಲಸ ಮಾಡಿದ ಹಿರಿಯ ವಕೀಲ ಸಂಜಯ್ ಹೆಗ್ಡೆ ಮತ್ತು ವಕೀಲೆ ಸಾಧನಾ ರಾಮಚಂದ್ರನ್ ಅವರ ಪ್ರಯತ್ನವನ್ನು ಶ್ಲಾಘಿಸಿರುವ ನ್ಯಾಯಾಲಯವು ಅವರ ವರದಿಯ ಲಾಭ ಪಡೆದು ಆದೇಶ ಹೊರಡಿಸುವುದಾಗಿ ಹೇಳಿದೆ.

Kannada Bar & Bench
kannada.barandbench.com