ದೆಹಲಿ, ಮುಂಬೈನಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಗುರಿಯಾಗಿಸಿ ಬ್ಲ್ಯಾಕ್‌ಮೇಲ್‌ ತಂತ್ರವಾಗಿ ಪಿಐಎಲ್‌ ಬಳಕೆ: ಸುಪ್ರೀಂ

ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಅನ್ಯ ಉದ್ದೇಶದಿಂದ ಅರ್ಹತೆ ಇಲ್ಲದಿದ್ದರೂ ಪಿಐಎಲ್‌ ದಾಖಲಿಸಿದ್ದ ಸೊಸೈಟಿಗೆ ₹1 ಲಕ್ಷ ರೂಪಾಯಿ ದಂಡ ವಿಧಿಸಿ, ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌.
Supreme Court of India
Supreme Court of India

ಮುಂಬೈ ಮತ್ತು ದೆಹಲಿಯಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಗುರಿಯಾಗಿಸಿಕೊಂಡು ಬ್ಲ್ಯಾಕ್‌ಮೇಲ್‌ ತಂತ್ರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು.

ನಿರ್ದಿಷ್ಟ ಆಸ್ತಿಯನ್ನು ಪಿಐಎಲ್‌ನಲ್ಲಿ ಗುರಿಯಾಗಿಸಿಕೊಂಡಾಗ ಬಹುತೇಕ ಸಂದರ್ಭದಲ್ಲಿ ಯಾವ ಕಾರಣಕ್ಕಾಗಿ ಪಕ್ಷಕಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬುದು ಹೈಕೋರ್ಟ್‌ಗೆ ಗೊತ್ತಿರುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಮತ್ತು ನ್ಯಾ. ಪಿ ಎಸ್‌ ನರಸಿಂಹ ಅವರ ನೇತೃತ್ವದ ವಿಭಾಗೀಯ ಪೀಠವು ಹೇಳಿತು.

“ಮೂಲಸೌಕರ್ಯ ಯೋಜನೆ ವಿಚಾರಗಳಲ್ಲಿ ಪಿಐಎಲ್‌ಗಳು ಬ್ಲ್ಯಾಕ್‌ಮೇಲ್‌ ತಂತ್ರದ ಭಾಗವಾಗುವ ಸಾಧ್ಯತೆ ಇರುತ್ತದೆ. ಕೆಲ ಯೋಜನೆಗಳನ್ನು ಗುರಿಯಾಗಿಸಿಕೊಳ್ಳುವುದು ಇದರ ಉದ್ದೇಶವಾಗಿರುತ್ತದೆ. ಇಲ್ಲಿ ಹೈಕೋರ್ಟ್‌ಗೆ ಅದು ಗಮನಕ್ಕೆ ಬಂದಿದೆ. ದೆಹಲಿ, ಮುಂಬೈ ಇತ್ಯಾದಿ ನಗರಗಳಲ್ಲಿ ಇದು ನಡೆಯುತ್ತಿದೆ” ಎಂದು ಪೀಠ ಹೇಳಿತು.

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ಅನ್ಯ ಉದ್ದೇಶದಿಂದ ಅರ್ಹತೆ ಇಲ್ಲದಿದ್ದರೂ ಪಿಐಎಲ್‌ ದಾಖಲಿಸಿದ್ದ ಸೊಸೈಟಿಗೆ ₹1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು.

ವಾರ್ಲಿಯಲ್ಲಿ ಭೂನಿವೇಶನವೊಂದರ ಪುನರ್‌ ನಿರ್ಮಾಣ ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಸರ್ತಿ ಸೇವಾ ಸಂಘ ಅರ್ಜಿ ಸಲ್ಲಿಸಿತ್ತು.

Also Read
ಸುಪ್ರೀಂ ಕೋರ್ಟ್ ರೀತಿಯ ಸಾಂವಿಧಾನಿಕ ನ್ಯಾಯಾಲಯ ಜಾಮೀನು ಅರ್ಜಿ, ನಿಷ್ಪ್ರಯೋಜಕ ಪಿಐಎಲ್ ಆಲಿಸಬಾರದು: ಸಚಿವ ರಿಜಿಜು

“ಪಿಐಎಲ್‌ ಮೂಲಕ ನಿರ್ದಿಷ್ಟ ಆಸ್ತಿಯನ್ನು ಗುರಿಯಾಗಿಸಿಕೊಂಡಾಗ ಬಹುತೇಕ ಸಂದರ್ಭದಲ್ಲಿ ಪಕ್ಷಕಾಕರರು ಏತಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬುದು ಹೈಕೋರ್ಟ್‌ಗೆ ಗೊತ್ತಿರುತ್ತದೆ. ನಿರ್ದಿಷ್ಟ ಯೋಜನೆಯೊಂದನ್ನು ಏಕೆ ಗುರಿಯಾಗಿಸಲಾಗಿದೆ ಎಂದು ತಿಳಿದಿರುತ್ತದೆ” ಎಂದು ಪೀಠ ಹೇಳಿದೆ.

“ಇಂಥ ಹಲವು ಪ್ರಕರಣಗಳ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನಲ್ಲಿ ನಾನು ನಡೆಸಿದ್ದೇನೆ. ಹೈಕೋರ್ಟ್‌ ವಿಧಿಸಿರುವ ದಂಡವನ್ನು ಪಾವತಿಸಬೇಕು. ಇದು ನ್ಯಾಯಾಂಗದ ಸಮಯದ ದುರ್ಬಳಕೆಯಾಗಿದೆ” ಎಂದು ಸಿಜೆಐ ಸ್ಪಷ್ಟಪಡಿಸಿದರು.

Related Stories

No stories found.
Kannada Bar & Bench
kannada.barandbench.com