ನ್ಯಾಯಾಲಯ, ಸಂವಿಧಾನಗಳನ್ನು ರಾಜಕೀಯ ನಂಬಿಕೆಗಳಿಗೂ ಮಿಗಿಲಾಗಿ ಕಾಣಿ: ನ್ಯಾಯವಾದಿಗಳಿಗೆ ಸಿಜೆಐ ಚಂದ್ರಚೂಡ್‌ ಕಿವಿಮಾತು

ಚುನಾವಣಾ ಬಾಂಡ್‌ ತೀರ್ಪನ್ನು ಸ್ವಯಂಪ್ರೇರಿತವಾಗಿ ಮರುಪರಿಶೀಲನೆ ಮಾಡುವಂತೆ ಕೋರಿ ಎಸ್‌ಸಿಬಿಎ ಅಧ್ಯಕ್ಷ ಅದೀಷ್‌ ಅಗರವಾಲ್‌ ಅವರು ಇತ್ತೀಚೆಗೆ ತಮಗೆ ಪತ್ರ ಬರೆದಿದ್ದ ಬೆನ್ನಿಗೇ ಸಿಜೆಐ ಅವರು ಈ ಮಾತುಗಳನ್ನು ಆಡಿರುವುದು ಮಹತ್ವ ಪಡೆದಿದೆ.
CJI DY Chandrachud
CJI DY Chandrachud

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ತೀರ್ಪಿನ ಬಗ್ಗೆ ವಕೀಲರ ಪರಿಷತ್‌ ಸದಸ್ಯರು ಮಾತನಾಡುವುದಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಶುಕ್ರವಾರ ತೀರ ಬೇಸರ ವ್ಯಕ್ತಪಡಿಸಿದ್ದಾರೆ.

ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದ ಶತಮಾನೋತ್ಸವದ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ತೀರ್ಪುಗಳ ಬಗ್ಗೆ ವಕೀಲರ ಪರಿಷತ್‌ ಸದಸ್ಯರು ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸುವ ಬೆಳವಣಿಗೆಯ ಬಗ್ಗೆ ತೀರ ಬೇಸರವಾಗಿದೆ. ಮೊಟ್ಟ ಮೊದಲಿಗೆ ನೀವೆಲ್ಲಾ ನ್ಯಾಯಾಲಯದ ಅಧಿಕಾರಿಗಳು. ನ್ಯಾಯಾಲಯದ ಘನತೆ ಮತ್ತು ಸತ್ಯ ಎತ್ತಿ ಹಿಡಿಯುವುದು ನಿಮ್ಮ ಕೈಯಲ್ಲಿದೆ” ಎಂದಿದ್ದಾರೆ.

ಇತರರಂತೆ ವಕೀಲರಿಗೆ ತಮ್ಮದೇ ಆದ ರಾಜಕೀಯ ಸೆಳೆತ ಮತ್ತು ನಂಬಿಕೆಗಳು ಇವೆ. ತತ್ವಜ್ಞಾನಿ ಅರಿಸ್ಟಾಟಲ್‌ ಹೇಳಿದಂತೆ ಮನುಷ್ಯರು ಸ್ವಭಾವತಃ ರಾಜಕೀಯ ಪ್ರಾಣಗಳು. ಅದಾಗ್ಯೂ, ವಕೀಲರು ನ್ಯಾಯಾಲಯಗಳು ಮತ್ತು ಸಂವಿಧಾನವನ್ನು ಎಲ್ಲದಕ್ಕಿಂತ ಮಿಗಿಲಾಗಿ ಕಾಣಬೇಕು” ಎಂದು ಒತ್ತಿಹೇಳಿದರು.

“ಸ್ವತಂತ್ರವಾದ ವಕೀಲರ ಪರಿಷತ್‌ ಕಾನೂನು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ಆಡಳಿತವನ್ನು ರಕ್ಷಿಸುವ ನೈತಿಕ ಭದ್ರಕೋಟೆಯಾಗಿದೆ” ಎಂದು ಹೇಳಿದರು.

ಚುನಾವಣಾ ಬಾಂಡ್‌ ತೀರ್ಪನ್ನು ಸ್ವಯಂಪ್ರೇರಿತವಾಗಿ ಮರುಪರಿಶೀಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ಅದೀಷ್‌ ಅಗರವಾಲ್‌ ಪತ್ರ ಬರೆದಿದ್ದ ವೇಳೆ ಅವರನ್ನು ಮುಕ್ತ ನ್ಯಾಯಾಲಯದಲ್ಲಿ ಸಿಜೆಐ ತರಾಟೆಗೆ ತೆಗೆದುಕೊಂಡಿದ್ದ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಿಜೆಐ ಅವರ ಹೇಳಿಕೆಗಳು ಮಹತ್ವ ಪಡೆದಿವೆ.

Kannada Bar & Bench
kannada.barandbench.com