ನಿಯಮದ ಪ್ರಕಾರ ವ್ಯಕ್ತಿಯೊಬ್ಬನನ್ನು ದಾವೆಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆ ಮಾಡಲು ಅರ್ಜಿದಾರರು ವಿರೋಧಿಸಿದ್ದಾಗ ಆ ವ್ಯಕ್ತಿಯನ್ನು ನ್ಯಾಯಾಲಯಗಳು ಮೊಕದ್ದಮೆಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆ ಮಾಡಬಾರದು ಎಂದು ಕಲ್ಕತ್ತಾ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಶ್ರೀ ಜೋಗೇಶ್ ಗುಪ್ತಾ ಮತ್ತು ಶ್ರೀ ಶ್ರೀ ಈಶ್ವರ್ ಸತ್ಯನಾರಾಯಣಿ ಇನ್ನಿತರರ ನಡುವಣ ಪ್ರಕರಣ].
ಫಿರ್ಯಾದಿಯನ್ನು ಬೇರೊಬ್ಬರ ವಿರುದ್ಧ ಹೋರಾಡು ಎಂದು ಒತ್ತಾಯಿಸಲು ಸಾಧ್ಯ ಇಲ್ಲ ಎಂಬುದಾಗಿ ನ್ಯಾಯಮೂರ್ತಿ ಅಜೋಯ್ ಕುಮಾರ್ ಮುಖರ್ಜಿ ಪ್ರಕರಣವೊಂದರ ಕುರಿತಾದ ಆದೇಶದ ವೇಳೆ ವಿವರಿಸಿದರು.
“ವಾಸ್ತವವಾಗಿ, ನಿಯಮದ ಪ್ರಕಾರ, ಫಿರ್ಯಾದಿಯು ವ್ಯಕ್ತಿಯೊಬ್ಬನನ್ನು ದಾವೆಯಲ್ಲಿ ಪ್ರತಿವಾದಿಯಾಗಿ ಸೇರ್ಪಡೆ ಮಾಡಲು ವಿರೋಧಿಸಿದ್ದಾಗ ನ್ಯಾಯಾಲಯ ಹಾಗೆ ಸೇರ್ಪಡೆ ಮಾಡಬಾರದು. ಏಕೆಂದರೆ ಫಿರ್ಯಾದಿಯೇ ಡಾಮಿನಸ್ ಲಿಟಸ್ (ಪ್ರಬಲ ದಾವೆದಾರ). ಯಾರ ವಿರುದ್ಧ ಅವರ ಪರಿಹಾರ ಪಡೆಯುವುದಿಲ್ಲವೋ ಅಂತಹವರ ವಿರುದ್ಧ ಹೋರಾಡುವಂತೆ ಅವರನ್ನು ಒತ್ತಾಯಿಸುವಂತಿಲ್ಲ” ಎಂದು ನ್ಯಾಯಾಲಯ ನುಡಿದಿದೆ.
ಬೇರೆ ಕಕ್ಷಿದಾರರ ನಡುವಿನ ವ್ಯಾಜ್ಯದಲ್ಲಿ ತನಗೆ ಆಸ್ತಿಯ ಮೇಲೆ ಹಕ್ಕು ಇದ್ದು ತನ್ನನ್ನೂ ಪಕ್ಷಕಾರರಾಗುವಂತೆ ಮಾಡಿಕೊಳ್ಳಬೇಕೆಂದು ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ತನ್ನನ್ನು ಸಿಪಿಸಿ ಆದೇಶ 1 ನಿಯಮ 10 (2) ಅಡಿ ಪ್ರಕರಣದ ಪ್ರತಿವಾದಿಯಾಗಿ ಸೇರ್ಪಡೆ ಮಾಡಬಹುದು ಎಂದು ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಸಿವಿಲ್ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ ಅವರು ಹೈಕೋರ್ಟ್‌ನಲ್ಲಿ ಪರಿಹಾರ ಕೋರಿದ್ದರು. ತನ್ನನ್ನು ಪಕ್ಷಕಾರರನ್ನಾಗಿ ಮಾಡಿಕೊಳ್ಳದ್ದಿದ್ದರೆ ತನ್ನ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಲ್ಲದೆ ತಮ್ಮನ್ನು ಹಾಗೆ ಪಕ್ಷಕಾರರನ್ನಾಗಿ ಮಾಡಿಕೊಳ್ಳುವುದರಿಂದ ಪ್ರಕರಣಗಳು ಹೆಚ್ಚುವುದು ತಪ್ಪುತ್ತದೆ ಎಂದು ಅವರು ವಾದಿಸಿದ್ದರು.
ಆದರೆ ಹೈಕೋರ್ಟ್ ಸಹ ಅವರ ಮನವಿಯನ್ನು ತಿರಸ್ಕರಿಸಿತ್ತು. ಪ್ರಕರಣ ಅರ್ಜಿದಾರರ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುವುದೇ ಇಲ್ಲವೇ ಎಂಬುದನ್ನು ಮೊಕದ್ದಮೆಯಲ್ಲಿ ಸೇರಿಸಬೇಕೆ ಎನ್ನುವುದನ್ನು ನಿರ್ಧರಿಸಲು ಅಪ್ರಸ್ತುತ ಎಂದು ನ್ಯಾ. ಮುಖರ್ಜಿ ಹೇಳಿದರು.
ಪ್ರಕರಣದಲ್ಲಿ ಸಿವಿಲ್ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ತಿರಸ್ಕರಿಸಲು ಸಾಕಷ್ಟು ಕಾರಣಗಳನ್ನು ನೀಡಿದ್ದು ವಿವಾದದ ತೀರ್ಪಿಗೆ ಅವರ ಉಪಸ್ಥಿತಿಯ ಅಗತ್ಯವಿಲ್ಲ ಎಂದ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ತೀರ್ಪು ನೀಡಿದಾಗ ಅಜಿದಾರರು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿ ಮೊಕದ್ದಮೆ ಹೂಡಬಹುದು ಇಲ್ಲವೇ ತಮ್ಮ ಹಕ್ಕುಗಳ ಮೇಲೆ ಪರಿಣಾಮ ಬೀರುವಂತಿದ್ದರೆ ಆಕ್ಷೇಪಣೆ ಸಲ್ಲಿಸಬಹುದು ಎಂದಿತು.