
ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಳಿ ಪ್ಲಾಸ್ಟಿಕ್ ತ್ಯಾಜ್ಯದ ಅಸಮರ್ಪಕ ವಿಲೇವಾರಿ ಮತ್ತು ಸಂಗ್ರಹದ ಬಗ್ಗೆ ಕೇರಳ ಹೈಕೋರ್ಟ್ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದೆ.
ಪ್ರಸಿದ್ಧ ದೇವಾಲಯ ಮತ್ತು ಅದರ ಯಾತ್ರಾ ಮಾರ್ಗದ ಸುತ್ತಲಿನ ಪ್ರದೇಶ ಪಶ್ಚಿಮ ಘಟ್ಟಗಳ ನಿರ್ಣಾಯಕ ಜೀವವೈವಿಧ್ಯ ತಾಣದಲ್ಲಿದೆ ಮತ್ತು ಪೆರಿಯಾರ್ ಹುಲಿ ಅಭಯಾರಣ್ಯದ ಭಾಗವಾಗಿದೆ ಎಂದು ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಮುರಳೀ ಕೃಷ್ಣ ಎಸ್ ಅವರಿದ್ದ ವಿಭಾಗೀಯ ಪೀಠ ಹೇಳಿದೆ. ಈ ಪ್ರದೇಶದಲ್ಲಿ ಎಸೆದ ತ್ಯಾಜ್ಯ ಉತ್ಪನ್ನಗಳನ್ನು ಪ್ರಾಣಿಗಳು ಸೇವಿಸಿದರೆ, ಅದು ದುರಂತದಾಯಕವಾಗಲಿದೆ ಎಂದು ನ್ಯಾಯಾಲಯ ತಿಳಿಸಿದೆ.
ತಿರುವಾಂಕೂರು ದೇವಸ್ವಂ ಮಂಡಳಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯನ್ನು ನಿರ್ವಹಿಸದ ಕಾರಣ, ಆನೆಗಳು ಪ್ಲಾಸ್ಟಿಕ್, ಬೆಲ್ಲದ ಚೀಲ, ಮತ್ತಿತರ ವಿಷಕಾರಿ ವಸ್ತು ಒಳಗೊಂಡಂ ಕಸ, ತ್ಯಾಜ್ಯವನ್ನು ತಿನ್ನುತ್ತಿವೆ ಎಂದು ಪೆರಿಯಾರ್ ಹುಲಿ ಮೀಸಲು ವಿಭಾಗದ (ಪಶ್ಚಿಮ ವಿಭಾಗ) ಉಪ ನಿರ್ದೇಶಕರು ನೀಡಿದ ವರದಿಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿತು.
ಆನೆಗಳ ಲದ್ದಿಯಲ್ಲಿ ಪ್ಲಾಸ್ಟಿಕ್ ಅವಶೇಷಗಳು ದೊರೆತಿರುವುದು ಹಾಗೂ ಸ್ಥಳೀಯ ಅಪೂರ್ವ ಜೀವವೈವಿಧ್ಯ ಪ್ರಭೇದಗಳು ತ್ಯಾಜ್ಯಕಾರಿ ವಸ್ತುಗಳನ್ನು ತಿನ್ನುವ ಅಂಶವನ್ನು ವರದಿಯಲ್ಲಿ ದಾಖಲಿಸಿರುವುದನ್ನು ನ್ಯಾಯಾಲಯವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ತ್ಯಾಜ್ಯ ದಹಿಸುವ ಕೇಂದ್ರಗಳ ಬಳಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿರುವುದು ಹಾಗೂ ಅದರಿಂದ ಕಾಡು ಪ್ರಾಣಿಗಳಿಗೆ ಉಂಟಾಗುವ ಬೆದರಿಕೆಯ ಕುರಿತು ಶಬರಿಮಲೆ ವಿಶೇಷ ಆಯುಕ್ತರು ನೀಡಿದ ವರದಿಯ ಆಧಾರದ ಮೇಲೆ ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ಪ್ರಕರಣ ಪರಿಗಣಿಸುವಾಗ ನ್ಯಾಯಾಲಯ ಈ ಅವಲೋಕನ ಮಾಡಿದೆ.
ಪ್ಲಾಸ್ಟಿಕ್ ತ್ಯಾಜ್ಯ ತುಂಬಿದ ಪ್ರದೇಶಗಳ ಬಳಿ ಆನೆಗಳು ಓಡಾಡುತ್ತಿರುವುದನ್ನು ಒಳಗೊಂಡ ವಿವಿಧ ಛಾಯಾಚಿತ್ರಗಳನ್ನು ನ್ಯಾಯಾಲಯ ಗಮನಿಸಿತು.
ಶಬರಿಮಲೆ ಅಭಿವೃದ್ಧಿ ಯೋಜನೆಯ ಸಹಾಯಕ ಎಂಜಿನಿಯರ್ (ಪರಿಸರ) ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಹೋಟೆಲ್ ಮಾಲೀಕರು ತ್ಯಾಜ್ಯ ಬೇರ್ಪಡಿಸುತ್ತಿಲ್ಲ ಮತ್ತು ಕೆಲವರು ಏಕ-ಬಳಕೆಯ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ಮುಂದುವರೆಸಿದ್ದಾರೆ ಎಂದರು.
ವಾದ ಆಲಿಸಿದ ನ್ಯಾಯಾಲಯ ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಇರುಮುಡಿಯಲ್ಲಿ ಬಳಸುವ ಸಂಬಂಧ ಟಿಡಿಎಸ್ ಭಕ್ತರಲ್ಲಿ ಅರಿವು ಮೂಡಿಸುವುದು, ದಂಡ ವಿಧಿಸುವಿಕೆ ಸೇರಿದಂತೆ ವಿವಿಧ ನಿರ್ದೇಶನಗಳನ್ನು ಈ ವೇಳೆ ನೀಡಿತು.