ಎಲೆಕ್ಟ್ರಿಕ್‌ ವಾಹನಗಳಿಗೆ ಕಡ್ಡಾಯ ವಿಮೆ: ಕೇಂದ್ರ, ದೆಹಲಿ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದ ದೆಹಲಿ ಹೈಕೋರ್ಟ್‌

ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಆಕ್ಷೇಪಣೆ ಸಲ್ಲಿಸಲು ಆದೇಶಿಸಿರುವ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಾಂಘಿ ಮತ್ತು ನ್ಯಾ. ನವೀನ್‌ ಚಾವ್ಲಾ ಅವರು ವಿಚಾರಣೆಯನ್ನು ಅಕ್ಟೋಬರ್‌ 20ಕ್ಕೆ ಮುಂದೂಡಿದ್ದಾರೆ.
ಎಲೆಕ್ಟ್ರಿಕ್‌ ವಾಹನಗಳಿಗೆ ಕಡ್ಡಾಯ ವಿಮೆ: ಕೇಂದ್ರ, ದೆಹಲಿ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದ ದೆಹಲಿ ಹೈಕೋರ್ಟ್‌
Electric Vehicles

ಎಲ್ಲಾ ಎಲೆಕ್ಟ್ರಿಕ್‌ ವಾಹನಗಳಿಗೆ ವಿಮೆಯನ್ನು ಕಡ್ಡಾಯಗೊಳಿಸಲು ಆದೇಶಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ನೋಟಿಸ್‌ ಜಾರಿ ಮಾಡಿದೆ (ರಜತ್‌ ಕಪೂರ್‌ ವರ್ಸಸ್‌ ಭಾರತ ಸರ್ಕಾರ ಮತ್ತು ಇತರರು).

ವಕೀಲ ರಜತ್‌ ಕಪೂರ್‌ ಸಲ್ಲಿಸಿದ್ದ ಮನವಿ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಪಿನ್‌ ಸಾಂಘಿ ಮತ್ತು ನ್ಯಾಯಮೂರ್ತಿ ನವೀನ್‌ ಚಾವ್ಲಾ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಗಣನೀಯವಾಗಿ ಹೆಚ್ಚಾಗುತ್ತಿರುವುದರಿಂದ ಎಲೆಕ್ಟ್ರಿಕ್‌ ವಾಹನಗಳಿಗೆ ವ್ಯಾಪಕ ಬೇಡಿಕೆ ಉಂಟು ಮಾಡಿದೆ. ದ್ವಿಚಕ್ರ ಎಲೆಕ್ಟ್ರಿಕ್‌ ವಾಹನಗಳಿಗೆ ವಿಮೆ ಇಲ್ಲ ಎಂಬ ಮಹತ್ವದ ಪ್ರಶ್ನೆಯನ್ನು ಈ ವೇಳೆ ಎತ್ತಬೇಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಪ್ರತಿ ಗಂಟೆಗೆ ಗರಿಷ್ಠ 25 ಕಿ ಮೀ ವೇಗ ಮೀರದ, 250 ವ್ಯಾಟ್‌ ಶಕ್ತಿಯ ಎಲೆಕ್ಟ್ರಿಕಲ್‌ ವೆಹಿಕಲ್‌ಗಳಿಗೆ ಚಾಲನಾ ಪರವಾನಗಿಯೂ ಬೇಕಿಲ್ಲ. ಇವುಗಳ ನೋಂದಣಿಯೂ ಅಗತ್ಯವಿಲ್ಲದಿರುವುದರಿಂದ ವಿದ್ಯಾರ್ಥಿಗಳು, ಯುವಕರು ಮತ್ತು ನಿವೃತ್ತರು ಎಲೆಕ್ಟ್ರಿಕ್‌ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

“ವಿಮೆಗೆ ಸಂಬಂಧಿಸಿದಂತೆ ಯಾವುದೇ ನಿಯಮಗಳು ಇಲ್ಲದಿರುವುದರಿಂದ ಹಲವು ಬಗೆಯ ವಾಹನಗಳು ರಸ್ತೆಗಿಳಿಯಲಿದ್ದು, ಇದು ಮುಂದಿನ ದಿನಗಳಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಬಹುದು. ಮೂರನೇ ವ್ಯಕ್ತಿ ವಿಮೆ (ಥರ್ಡ್‌ ಪಾರ್ಟಿ ಇನ್ಯೂರೆನ್ಸ್) ಅತ್ಯಗತ್ಯವಾಗಿದ್ದು, ವಿಮೆ ಔಪಚಾರಿಕತೆ ಮುಗಿಯುವವರೆಗೆ ಶೋರೂಮ್‌ನಿಂದ ವಾಹನ ತೆಗೆದುಕೊಂಡು ಹೋಗಲು ಅನುಮತಿಸಬಾರದು” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಉಕ್ರೇನ್-ರಷ್ಯಾ ಯುದ್ಧದಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಳಿತವಾಗುತ್ತಿದ್ದು, ಇದರಿಂದ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ, ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಿಸಿದಂತೆ ತಕ್ಷಣ ಕಾನೂನು ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

Related Stories

No stories found.