ಸಿಎಟಿ 2024 ಫಲಿತಾಂಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ಪ್ರಶ್ನೆಪತ್ರಿಕೆಯಲ್ಲಿ ದೋಷ ಇರುವುದರಿಂದ ಫಲಿತಾಂಶ ಬದಿಗೆ ಸರಿಸಲು ನಿರ್ದೇಶನ ಕೋರಿ ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.
Delhi High Court
Delhi High Court
Published on

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಮತ್ತಿತರ ವಾಣಿಜ್ಯ ಶಿಕ್ಷಣ ಶಾಲೆಗಳ ಪ್ರವೇಶಕ್ಕಾಗಿ ನಡೆಸಿದ್ದ 2024ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ) ಫಲಿತಾಂಶ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ [ಆದಿತ್ಯ ಕುಮಾರ್ ಮಲ್ಲಿಕ್  ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].  

ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರನ್ನೊಳಗೊಂಡ ಪೀಠ ಡಿಸೆಂಬರ್ 24 ರಂದು ಅರ್ಜಿ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮತ್ತು ಪರೀಕ್ಷೆಯನ್ನು ನಡೆಸಿದ ಸಿಎಟಿ ಸಂಯೋಜಕ IIM ಕಲ್ಕತ್ತಾದ ಪ್ರತಿಕ್ರಿಯೆ ಕೇಳಿತ್ತು.

Also Read
ಸಿಎಲ್‌ಎಟಿ ಫಲಿತಾಂಶ ಡಿ.10ಕ್ಕೆ: ಪರಿಷ್ಕೃತ ತಾತ್ಕಾಲಿಕ ಕೀ ಉತ್ತರ ಪ್ರಕಟಣೆ

ಆದರೆ ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ರಜಾಕಾಲೀನ ಪೀಠ ಸೋಮವಾರ ಪ್ರಕರಣ ಕೈಗೆತ್ತಿಕೊಂಡಾಗ ಇನ್ನೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ವಿಚಾರಣೆ ನಡೆಸಿತು.  ಪ್ರಕರಣದ ಮುಂದಿನ ವಿಚಾರಣೆ ಜನವರಿ 3, 2025ರಂದು ನಡೆಯಲಿದೆ.

ಸಿಎಟಿ 2024 ಪರೀಕ್ಷೆಯನ್ನು ನವೆಂಬರ್ 24 ರಂದು ನಡೆಸಲಾಗಿತ್ತು. ತಾತ್ಕಾಲಿಕ ಉತ್ತರ ಕೀ ಡಿಸೆಂಬರ್ 3 ರಂದು ಬಿಡುಗಡೆಯಾಗಿತ್ತು.

ಪ್ರಶ್ನೆಪತ್ರಿಕೆಯಲ್ಲಿ ದೋಷ ಇರುವುದರಿಂದ ಫಲಿತಾಂಶ ಬದಿಗೆ ಸರಿಸಲು ನಿರ್ದೇಶನ ಕೋರಿ ಅಭ್ಯರ್ಥಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಆಕ್ಷೇಪಣೆ ಸಲ್ಲಿಸಿದ್ದರೂ ತಾತ್ಕಾಲಿಕ ಉತ್ತರ ಕೀಯಲ್ಲಿ ಯಾವುದೇ ಬದಲಾವಣೆ ಮಾಡದೆ ಅಂತಿಮ ಉತ್ತರ ಕೀ ಪ್ರಕಟಿಸಲಾಗಿದೆ ಎಂದು ಅಭ್ಯರ್ಥಿ ದೂರಿದ್ದಾರೆ.

ತನ್ನ ಆಕ್ಷೇಪಣೆಗೆ ವಿವಿಧ ಸಿಎಟಿ ಕೋಚಿಂಗ್ ಸೆಂಟರ್‌ಗಳ ಗಣ್ಯ ತಜ್ಞರು ಮತ್ತು ಅಧ್ಯಾಪಕರ ಬೆಂಬಲವಿದೆ ಎಂದು ಅರ್ಜಿದಾರ ಹೇಳಿಕೊಂಡಿದ್ದು ಸಿಎಟಿ ಪತ್ರಿಕೆಯ ಸಮಗ್ರ ವಿಭಾಗದಲ್ಲಿ ವಿವಿಧ ಅಭ್ಯರ್ಥಿಗಳಿಂದ ಒಟ್ಟು 272 ಆಕ್ಷೇಪಣೆ ಎತ್ತಲಾಗಿದೆ ಎಂದು ತಿಳಿಸಿದ್ದಾರೆ.

ಐಐಎಂ ಕಲ್ಕತ್ತಾ ಯಾವುದೇ ಕಾರಣ ನೀಡದೆ ಅಥವಾ ತನ್ನ ಅಹವಾಲಿನ ಸಂಬಂಧ ಕಾನೂನು ಮೊರೆಹೋಗಲು ಸಮಯಾವಕಾಶ ನೀಡದೆ ತರಾತುರಿಯಲ್ಲಿ ಡಿಸೆಂಬರ್ 19 ರಂದು ಫಲಿತಾಂಶಗಳನ್ನು ಪ್ರಕಟಿಸಿದೆ ಎಂದು ಅವರು ವಾದಿಸಿದ್ದಾರೆ.

ಜನವರಿ 2025 ರ ಎರಡನೇ ವಾರದಲ್ಲಿ ಪ್ರಕಟವಾಗಬೇಕಿದ್ದ ಫಲಿತಾಂಶ ಡಿಸೆಂಬರ್‌ನಲ್ಲೇ ಪ್ರಕಟವಾಗಿರುವುದು ಅನೇಕ ಸಂಗತಿಗಳನ್ನು ಬಿಚ್ಚಿಟ್ಟಿದೆ ಎಂದು ಅವರು ದೂರಿದ್ದಾರೆ.

Also Read
ಎಂಬಿಬಿಎಸ್‌, ಐಐಟಿಗೆ ಹಿಂದಿಯಲ್ಲಿ ಪ್ರವೇಶ ಪರೀಕ್ಷೆ ನಡೆಸುವುದಾದರೆ ಸಿಎಲ್‌ಎಟಿಗೆ ಯಾಕಾಗಬಾರದು? ಹೈಕೋರ್ಟ್‌ ಪ್ರಶ್ನೆ

ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಲ್ಲಿ ಪ್ರಕಟವಾದ ಫಲಿತಾಂಶ ರದ್ದುಗೊಳಿಸಿ ಸರಿಯಾದ ಉತ್ತರಗಳನ್ನು ಕಂಡುಕೊಳ್ಳಲು ತಜ್ಞರ ಸಮಿತಿ ರಚಿಸಬೇಕು ಎಂದು ಅವರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಜನವರಿ 3 ರಂದು ನ್ಯಾಯಮೂರ್ತಿಗಳಾದ ತಾರಾ ವಿತಸ್ತಾ ಗಂಜು ಮತ್ತು ಅನೀಶ್ ದಯಾಲ್ ಅವರಿರುವ ರಜಾಕಾಲೀನ ಪೀಠ ಪ್ರಕರಣದ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com