
ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಸಮಯದಲ್ಲಿ ವಿಶ್ವ ಪ್ರಸಿದ್ಧ ರಾಜಸ್ಥಾನದ ಅಜ್ಮೀರ್ ಷರೀಫ್ ದರ್ಗಾಕ್ಕೆ ಪ್ರಧಾನಿ ಮೋದಿ ಅವರು ಚಾದರ ಅರ್ಪಿಸದಂತೆ ತಾತ್ಕಾಲಿಕ ತಡೆ ನೀಡಲು ಕೋರಿ ಅಜ್ಮೀರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.
ದರ್ಗಾ ಇರುವ ಸ್ಥಳದಲ್ಲಿ ಶಿವನ ದೇವಾಲಯವಿತ್ತು ಎಂಬ ದಾವೆ ಹಿನ್ನೆಲೆಯಲ್ಲಿ ಅದು ವಿವಾದಾತ್ಮಕ ಸ್ಥಳವಾಗಿರುವುದರಿಂದ ಕೇಂದ್ರ ಸರ್ಕಾರ ಚಾದರ ಅರ್ಪಿಸಬಾರದು ಎಂದು ಕೋರಲಾಗಿದೆ.
ದರ್ಗಾವನ್ನು ಶಿವನ ದೇಗುಲದ ಮೇಲೆ ನಿರ್ಮಿಸಲಾಗಿದ್ದು ಅದನ್ನು ಭಗವಾನ್ ಶ್ರೀ ಸಂಕಟಮೋಚನ್ ಮಹಾದೇವ್ ವಿರಾಜಮಾನ್ ದೇವಸ್ಥಾನ ಎಂದು ಘೋಷಿಸುವಂತೆ ಕೋರಿ ಹಿಂದೂ ಸೇನೆಯ ಅಧ್ಯಕ್ಷ ವಿಷ್ಣು ಗುಪ್ತಾ ಅವರು ಈಚೆಗೆ ಅರ್ಜಿ ಸಲ್ಲಿಸಿದ್ದರು. ಅದೇ ಅರ್ಜಿಯ ಭಾಗವಾಗಿ ಅವರು ಪ್ರಸ್ತುತ ಮನವಿ ಸಲ್ಲಿಸಿದ್ದಾರೆ.
ಗುಪ್ತಾ ತಮ್ಮ ಅರ್ಜಿಯಲ್ಲಿ ವಿವಾದ ನ್ಯಾಯಾಲಯದಲ್ಲಿರುವಾಗ ಕೇಂದ್ರ ಸರ್ಕಾರ ಚಾದರ್ ನೀಡಿರುವುದು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಹಾಳುಗೆಡವುತ್ತದೆ. ಈ ಬೆಳವಣಿಗೆಗಳಿಂದಾಗಿ ಇಡೀ ಪ್ರಕರಣ ನೆಲೆ ಕಳೆದುಕೊಳ್ಳುತ್ತದೆ. ಹೀಗಾಗಿ ಕೇಂದ್ರ ಸರ್ಕಾರ ಚಾದರ್ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ.
ಈ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಅವರು ಅಜ್ಮೀರ್ ದರ್ಗಾವನ್ನು ಖಾಲಿ ಜಾಗದಲ್ಲಿ ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಬದಲಿಗೆ ಮಹದೇವ ದೇಗುಲ ಮತ್ತು ಜೈನ ಮಂದಿರಗಳು ಅಲ್ಲಿದ್ದವು ಎಂಬುದನ್ನು ಇತಿಹಾಸದ ದಾಖಲೆಗಳು ಸೂಚಿಸುತ್ತವೆ. ಆದ್ದರಿಂದ, ವಿವಾದಿತ ಆಸ್ತಿಯ ಸ್ಥಳದಲ್ಲಿ ಭಗವಾನ್ ಶ್ರೀ ಸಂಕಟಮೋಚನ್ ಮಹಾದೇವ್ ದೇವಾಲಯವನ್ನು ಪುನರ್ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.
ವಿಶೇಷವೆಂದರೆ ಪ್ರಧಾನಿ ಮೋದಿ ಅವರು ಚಾದರ್ ಹಿಡಿದಿರುವ ಚಿತ್ರವನ್ನು ಬುಧವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಅವರು ಟ್ವೀಟ್ ಮಾಡಿದ್ದರು. ದರ್ಗಾಕ್ಕೆ ಪ್ರಧಾನಿಗಳು ಚಾದರ್ ಅರ್ಪಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
"ಪ್ರಧಾನಿ ನರೇಂದ್ರ ಮೋದಿ ಜಿ ಅವರು ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ ಉರುಸ್ ಹಿನ್ನೆಲೆಯಲ್ಲಿ ಅಜ್ಮೀರ್ ಷರೀಫ್ ದರ್ಗಾಕ್ಕೆ ತಮ್ಮ ಪರವಾಗಿ ನೀಡಲಾಗುವ ಚಾದರ್ ಅನ್ನು ಪ್ರದರ್ಶಿಸಿದರು. ಇದು ಭಾರತದ ಶ್ರೀಮಂತ ಆಧ್ಯಾತ್ಮಿಕ ಪರಂಪರೆ, ಸಾಮರಸ್ಯ ಹಾಗೂ ಭ್ರಾತೃತ್ವದ ನಿರಂತರ ಸಂದೇಶವನ್ನು ಬಿಂಬಿಸುತ್ತದೆ," ಎಂದು ರಿಜಿಜು ಟ್ವೀಟ್ ಮಾಡಿದ್ದರು.