ರಾಜ್ಯ ಚುನಾವಣಾ ಆಯೋಗದಿಂದ ಗ್ರೇಟರ್‌ ಬೆಂಗಳೂರಿಗೆ ಪರ್ಯಾಯ ಎಸ್‌ಐಆರ್‌ಗೆ ಆಕ್ಷೇಪ: ನಾಳೆ ಅರ್ಜಿ ವಿಚಾರಣೆ

ಇಂದು ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠದ ಮುಂದೆ ವಕೀಲ ವೆಂಕಟೇಶ್‌ ದಳವಾಯಿ ಉಲ್ಲೇಖಿಸಿ, ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಇದನ್ನು ಆಲಿಸಿದ ಪೀಠವು ನಾಳೆ ವಿಚಾರಣೆ ನಡೆಸಲಾಗುವುದು ಎಂದಿತು.
Karnataka High Court
Karnataka High Court
Published on

ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಹಮ್ಮಿಕೊಂಡಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ(ಎಸ್ಐಆರ್)  ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ, ರಾಜ್ಯ ಚುನಾವಣೆ ಆಯೋಗ ಬೆಂಗಳೂರಿನ ಕೆಲವು ವಾರ್ಡ್‌ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಪರಿಷ್ಕರಣೆಗೆ ಆದೇಶಿಸಿರುವ ಕ್ರಮ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಪರ್ಯಾಯ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗವು ಜೂನ್‌ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಲು ನಗರದ ವಿವೇಕ್ ಹಾಗೂ ಇತರರು ಅರ್ಜಿ ಸಲ್ಲಿಸಿದ್ದಾರೆ.

ಇಂದು ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರ ಏಕಸದಸ್ಯ ಪೀಠದ ಮುಂದೆ ವಕೀಲ ವೆಂಕಟೇಶ್‌ ದಳವಾಯಿ ಉಲ್ಲೇಖಿಸಿ, ತುರ್ತು ವಿಚಾರಣೆ ನಡೆಸುವಂತೆ ಕೋರಿದರು. ಇದನ್ನು ಆಲಿಸಿದ ಪೀಠವು ನಾಳೆ ವಿಚಾರಣೆ ನಡೆಸಲಾಗುವುದು ಎಂದಿತು.

ಕೇಂದ್ರ ಸರ್ಕಾರವು ಎಸ್‌ಐಆರ್‌ ನಡೆಸುವುದಾಗಿ‌ 2025ರ ಅಕ್ಟೋಬರ್ 27ರಂದು ಪ್ರಕಟಿಸಿತ್ತು. ಅದರಂತೆ 2026ರ ಜೂನ್‌ 16ರಂದು ರಾಜ್ಯದಲ್ಲಿ ವಿಧಾನಸಭಾ ಕ್ಷೇತ್ರಗಳ‌ ಮತ‌ದಾರರ ಪಟ್ಟಿಯನ್ನು ಫ್ರೀಜ್ ಮಾಡಿತ್ತು.‌ ಇದಾದ ಮೂರೇ ದಿನಗಳಲ್ಲಿ ಅಂದರೆ ಜೂನ್‌ 19 ರಾಜ್ಯ ಚುನಾವಣಾ ಆಯೋಗ ಸಹ ಜಿಬಿಎಯ ಕೆಲವು ವಾರ್ಡ್‌ಗಳ ಮತಪಟ್ಟಿ ಪರಿಷ್ಕರಣೆ ನಡೆಸಲು ಆದೇಶಿಸಿದೆ ಎಂದು ಅರ್ಜಿದಾರರು‌ ಅರ್ಜಿಯಲ್ಲಿ ‌ಆಕ್ಷೇಪಿಸಿದ್ದಾರೆ.

ಅಲ್ಲದೇ‌, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್‌ 26ರಿಂದ ಈಗಾಗಲೇ ಜಿಬಿಎ ಸೇರಿ ರಾಜ್ಯದ್ಯಾಂತ ಎಸ್ಐಆರ್ ಮನೆ‌ ಮನೆ ಸರ್ವೇ ಆರಂಭವಾಗಿದೆ‌. ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಪರ್ಯಾಯ ಎಸ್‌ಐಆರ್‌  ನಡೆಸುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ‌ಮೇಲಾಗಿ ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಹಾಗಾಗಿ ರಾಜ್ಯ ಚುನಾವಣಾ ಆಯೋಗವು ಜೂನ್‌ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com