ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮ-2021ರ ನಿಬಂಧನೆ 3(1)(ಡಿ) ಮತ್ತು ನಿಬಂಧನೆ 7 ಅಧಿಕಾರದ ವ್ಯಾಪ್ತಿ ಮೀರಿದ್ದು, ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ಸೋಮವಾರ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಚೈತ್ರಾ ವಿ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸೋಮವಾರ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ಎನ್ ಎಸ್ ಸಂಜಯ್ ಗೌಡ ನೇತೃತ್ವದ ವಿಭಾಗೀಯ ಪೀಠವು ನೋಟಿಸ್ ಜಾರಿ ಮಾಡಿದ್ದು, ಸೆಪ್ಟೆಂಬರ್ 3ರ ಒಳಗೆ ಪ್ರತಿಕ್ರಿಯಿಸುವಂತೆ ಕೇಂದ್ರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ಪ್ರತಿವಾದಿಗಳಿಗೆ ಆದೇಶಿಸಿದೆ.
ಕೇಂದ್ರ ಸರ್ಕಾರ ಜಾರಿ ಮಾಡಿರುವ ನಿಯಮಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸಿರುವ ಸಂವಿಧಾನದ 19(1)(ಎ) ವಿಧಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
“ನೂತನ ಐಟಿ ನಿಯಮಗಳಲ್ಲಿ ಬಳಸಲಾಗಿರುವ ಸಭ್ಯತೆ, ನೈತಿಕತೆ, ಸಾರ್ವಜನಿಕ ಆದೇಶ ಇತ್ಯಾದಿ ಪದಗಳು ಅಸ್ಪಷ್ಟವಾಗಿದ್ದು, ಇದನ್ನು ನಿಯಮಗಳು ಅಥವಾ ಅದು ಆಧರಿಸಿರುವ ಪ್ರಧಾನ ಶಾಸನದಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಹೀಗಾಗಿ, ನಿರ್ದಿಷ್ಟ ಪದ ವ್ಯಾಖ್ಯಾನದ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಐಟಿ ನಿಯಮಗಳ ಜಾರಿ ಅಧಿಕಾರವು ಅಧಿಕಾರಿಗಳಿಗೆ ಲಭ್ಯವಾಗುವುದರಿಂದ ಅವರಿಗೆ ಹೆಚ್ಚಿನ ಅಧಿಕಾರ ದೊರೆಯಲಿದ್ದು, ಇದು ನಿಯಮಗಳ ಉದ್ದೇಶವನ್ನೇ ಸೋಲಿಸಬಹುದು. ಕಟ್ಟುಪಾಡುಗಳು ಹಾಗೂ ಸರಿಯಾದ ವ್ಯಾಖ್ಯಾನ ಇಲ್ಲದೇ ಇರುವುದರಿಂದ ದುರ್ಬಳಕೆಯಾಗುವ ಸಾಧ್ಯತೆ ಇದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪ್ರಜಾಪ್ರಭುತ್ವದ ಬೆಳವಣಿಗೆಗೆ ಸರಾಗ ಮಾಹಿತಿ ಹಂಚಿಕೆ ಅತ್ಯಗತ್ಯವಾಗಿದೆ. ಹೊಣೆಗಾರಿಕೆ ನೆಪದಲ್ಲಿ ಮಾಧ್ಯಮವನ್ನು ನಿಯಂತ್ರಿಸುವ ಮೂಲಕ ಪರೋಕ್ಷವಾಗಿ ಸರಾಗವಾಗಿ ಮಾಹಿತಿ ಹಂಚಿಕೆಯಾಗದಂತೆ ತಡೆಯುವ ಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಾದಿಸಲಾಗಿದೆ.
ಈಗಾಗಲೇ ರದ್ದು ಮಾಡಲಾಗಿರುವ ಐಟಿ ಕಾಯಿದೆಯ ಸೆಕ್ಷನ್ 66ಎ ಅನ್ನು ಹಿಂಬಾಗಿಲ ಮೂಲಕ ಐಟಿ ನಿಯಮಗಳು 2021ರ ರೂಪದಲ್ಲಿ ತರಲು ಪ್ರತಿವಾದಿಗಳು ಪ್ರಯತ್ನಿಸುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.
ಸೆಕ್ಷನ್ 66ಎ ಮತ್ತು ನಿಯಮ 3 (1)(ಡಿ) ಗೆ ಹೋಲಿಕೆ ಮಾಡಿದ ಬಳಿಕ ಅರ್ಜಿಯಲ್ಲಿ “ಮಾನಹಾನಿ, ಸಭ್ಯತೆ ಅಥವಾ ನೈತಿಕತೆ ಹೆಸರಿನ ಆಧಾರದಲ್ಲಿ ನಿರ್ಬಂಧ ಹೆಚ್ಚಿಸುವ ಪ್ರಯತ್ನವನ್ನು ಇದು (ಐಟಿ ನಿಯಮಗಳು) ಮಾಡುತ್ತಿದೆ” ಎಂದು ಹೇಳಲಾಗಿದೆ.
ನಿಯಮ 3(1)(ಡಿ) ಮತ್ತು ನಿಯಮ 7 ಅನ್ನು ಮಧ್ಯಂತರ ಪರಿಹಾರವಾಗಿ ಅಮಾನತು ಮಾಡುವಂತೆ ಅರ್ಜಿದಾರರು ಕೋರಿದ್ದು, ದಂಡ, ನಿರ್ದಿಷ್ಟ ಪ್ರಕಾಶಕರಲ್ಲಿಗೆ ಪ್ರವೇಶಿಸಲು ನಿರಾಕರಿಸುವುದು, ಐಟಿ ನಿಯಮಗಳನ್ನು ಅನುಸರಿಸದ ಮಧ್ಯಸ್ಥಗಾರರು ಮತ್ತು ಜನರ ವಿರುದ್ಧ ದುರುದ್ದೇಶದ ಕ್ರಮ ಕೈಗೊಳ್ಳದಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಕೋರಲಾಗಿದೆ. ವಕೀಲ ಚಿನ್ಮತ್ ಮಿರ್ಜಿ ಮೂಲಕ ಮನವಿ ಸಲ್ಲಿಸಲಾಗಿದ್ದು, ಸೆಪ್ಟೆಂಬರ್ 6ಕ್ಕೆ ವಿಚಾರಣೆ ಮುಂದೂಡಲಾಗಿದೆ.