2015ರಲ್ಲಿಯೇ ರದ್ದುಪಡಿಸಲಾಗಿದ್ದ ಐಟಿ ಕಾಯಿದೆ ಸೆಕ್ಷನ್ 66 ಎ ಅನ್ನು ಇನ್ನೂ ಬಳಸುತ್ತಿರುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ನೀಡಿದೆ.
ಐಟಿ ಕಾಯಿದೆ ಸೆಕ್ಷನ್ 66 ಎಯನ್ನು ಸರ್ವೋಚ್ಛ ನ್ಯಾಯಾಲಯ ಮಾರ್ಚ್ 24, 2015ರಂದು ರದ್ದು ಪಡಿಸಿದ್ದು ಅದನ್ನು ಬಳಸಿ ಎಫ್‌ಐಆರ್ ದಾಖಲಿಸದಂತೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಲಹೆ ನೀಡಬೇಕು ಎಂದು ಕೋರಿ ಸರ್ಕಾರೇತರ ಸಂಸ್ಥೆ ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ರೋಹಿಂಟನ್ ನಾರಿಮನ್, ಕೆಎಂ ಜೋಸೆಫ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ನೋಟಿಸ್ ನೀಡಿತು.
ಕಾಯಿದೆ ಇನ್ನೂ ಬಳಕೆಯಲ್ಲಿರುವ ಕುರಿತು ನ್ಯಾ. ನಾರಿಮನ್ ಕಳವಳ ವ್ಯಕ್ತಪಡಿಸಿದ್ದಾರೆ. “ಅದ್ಭುತ. ಈಗ ನಡೆಯುತ್ತಿರುವುದು ಭಯಾನಕವಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣಗಳನ್ನು ಪರಿಶೀಲಿಸುವಂತೆ ಹಿರಿಯ ವಕೀಲ ಸಂಜಯ್ ಪಾರಿಖ್ ಅವರ ಕೋರಿಕೆಯ ಮೇರೆಗೆ ನೋಟಿಸ್ ನೀಡುವುದಾಗಿ ನ್ಯಾಯಾಲಯ ಹೇಳಿದೆ.
ಕೇಂದ್ರ ಸರ್ಕಾರದ ಪರ ಹಾಜರಾದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್, " ಸೆಕ್ಷನ್ 66 ಎ ಅನ್ನು ವಿಭಾಗೀಯ ಪೀಠದಿಂದ ರದ್ದುಪಡಿಸಿದ್ದರೂ ಕೂಡ, ಅದಿನ್ನೂ ಅಸ್ತಿತ್ವದಲ್ಲಿದೆ. ಪೊಲೀಸರು ಪ್ರಕರಣ ದಾಖಲಿಸುವಾಗ ಅದು ಇನ್ನೂ ಉಳಿದಿದೆ ಮತ್ತು ಸುಪ್ರೀಂಕೋರ್ಟ್ ಅದನ್ನು ರದ್ದುಪಡಿಸಿದೆ ಎಂಬ ಅಡಿಟಿಪ್ಪಣಿ ಮಾತ್ರ ಇದೆ. 66A ನಲ್ಲಿ ಬ್ರಾಕೆಟ್ ಹಾಕಿ ʼರದ್ದುಪಡಿಸಲಾಗಿದೆʼ ಎಂಬ ಪದದೊಟ್ಟಿಗೆ ಸೂಚಿಸಬೇಕು” ಎಂದು ಹೇಳಿದರು. ನಂತರ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ನ್ಯಾಯಾಲಯ ಸೂಚಿಸಿತು.
ವಕೀಲೆ ಅಪರ್ಣಾ ಭಟ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, “ಆಘಾತಕಾರಿ ರೀತಿಯಲ್ಲಿ ಸೆಕ್ಷನ್ 66 ಎ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ದೇಶದ ವಿಚಾರಣಾ ನ್ಯಾಯಾಲಯಗಳಲ್ಲೂ ಬಳಕೆಯಲ್ಲಿದೆ” ಎಂದು ಪಿಯುಸಿಎಲ್ ವಾದಿಸಿದೆ.
ಜೂಂಬಿ ಟ್ರ್ಯಾಕರ್ ಎಂಬ ಜಾಲತಾಣ ಪತ್ತೆ ಹಚ್ಚಿರುವ ಅಂಶಗಳನ್ನು ಉಲ್ಲೇಖಿಸಿ ಐಟಿ ಕಾಯಿದೆಯ ಸೆಕ್ಷನ್ 66 ಎ ಅಡಿ ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಲಾಗಿದ್ದು 2021ರ ಮಾರ್ಚ್ 10ರ ಹೊತ್ತಿಗೆ ಸುಮಾರು 745 ಪ್ರಕರಣಗಳು ಜಿಲ್ಲಾ ನ್ಯಾಯಾಲಯಗಳ ಮುಂದೆ ಬಾಕಿ ಉಳಿದಿದ್ದು ಸಕ್ರಿಯವಾಗಿವೆ ಎಂದು ಅದು ಹೇಳಿದೆ.
ಸೆಕ್ಷನ್ 66 ಎ ಅಡಿಯಲ್ಲಿ ದೇಶಾದ್ಯಂತ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಎಲ್ಲಾ ಪ್ರಕರಣಗಳ ಮತ್ತು ದಾಖಲಾದ ಎಲ್ಲಾ ಎಫ್‌ಐಆರ್ಗಳ ಮಾಹಿತಿ ಸಂಗ್ರಹಿಸಲು ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಪ್ರಾರ್ಥಿಸಲಾಗಿದೆ. ಶ್ರೇಯಾ ಸಿಂಘಾಲ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ನೀಡಲಾದ ತೀರ್ಪನ್ನು ಅನುಸರಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಬೇಕೆಂದು ಕೂಡ ಅರ್ಜಿ ಕೋರಿದೆ. ಅಲ್ಲದೆ ಸೆಕ್ಷನ್ ರದ್ದುಗೊಳಿಸಲಾಗಿದ್ದು ಅದು ಅಸ್ತಿತ್ವದಲ್ಲಿ ಇಲ್ಲದ ಕುರಿತು ಎಲ್ಲಾ ಇಂಗ್ಲಿಷ್ ಮತ್ತು ಸ್ಥಳೀಯ ಭಾಷಾ ಪತ್ರಿಕೆಗಳಲ್ಲಿ ಮಾಹಿತಿ ಪ್ರಕಟಿಸಲು ನಿರ್ದೇಶಿಸುವಂತೆ ಮನವಿ ಮಾಡಲಾಗಿದೆ. 2015 ರ ತೀರ್ಪಿನ ಪಾಲನೆ ಕೋರಿ ಇದೇ ಎನ್‌ಜಿಒ 2018ರಲ್ಲಿ ಕೂಡ ಮನವಿ ಸಲ್ಲಿಸಿತ್ತು.
ಶ್ರೇಯಾ ಸಿಂಘಾಲ್ ತೀರ್ಪಿನ ಪ್ರತಿಗಳನ್ನು ಈ ದೇಶದ ಪ್ರತಿ ಹೈಕೋರ್ಟ್‌ನಿಂದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಿಗೆ ಲಭ್ಯವಾಗುವಂತೆ ನಿರ್ದೇಶಿಸಿ ಸುಪ್ರೀಂಕೋರ್ಟ್ ಫೆಬ್ರವರಿ 15, 2019ರಲ್ಲಿ ಪ್ರಕರಣವನ್ನು ವಿಲೇವಾರಿ ಮಾಡಿತ್ತು. ಅಲ್ಲದೆ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ತೀರ್ಪಿನ ಪ್ರತಿ ಒದಗಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಪ್ರತಿ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ತೀರ್ಪಿನ ಪ್ರತಿಗಳನ್ನು ಕಳುಹಿಸುವ ಮೂಲಕ ಪೊಲೀಸ್ ಇಲಾಖೆಗಳನ್ನು ಜಾಗೃತಗೊಳಿಸುವಂತೆ ಸೂಚಿಸಲಾಗಿತ್ತು.