

ನೇರ ಪ್ರಸಾರಗೊಂಡ ನ್ಯಾಯಾಲಯದ ಕಲಾಪಗಳ ಆರ್ಕೈವ್ ಮಾಡಿದ (ಸಂಗ್ರಹಿಸಿಟ್ಟ) ರೆಕಾರ್ಡಿಂಗ್‌ಗಳನ್ನು ಲಭ್ಯವಾಗಿಸುವ ಅಥವಾ ನಿರಾಕರಿಸುವ ಸಂಬಂಧ ಸ್ಪಷ್ಟ ಮಾರ್ಗಸೂಚಿಗಳು ಅಥವಾ ಪ್ರಮಾಣೀಕೃತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸಲು ಕೋರಿರುವ ಅರ್ಜಿ ಸಂಬಂಧ ರಿಜಿಸ್ಟ್ರಾರ್‌ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ನಿರ್ದಿಷ್ಟ ಪ್ರಕರಣವೊಂದರ ಕಲಾಪದ ರೆಕಾರ್ಡಿಂಗ್ ಒದಗಿಸಲು ನಿರಾಕರಿಸಿದ ಸಹಾಯಕ ರಿಜಿಸ್ಟ್ರಾರ್ (ಮಾಹಿತಿ ತಂತ್ರಜ್ಞಾನ) ಅವರ ಕ್ರಮ ಪ್ರಶ್ನಿಸಿ ವಕೀಲ ಅಂಗದ್ ಕಾಮತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್‌ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠವು ಪ್ರತಿವಾದಿಗಳಾದ ಹೈಕೋರ್ಟ್‌ನ ಆಡಳಿತ ವಿಭಾಗ, ರಿಜಿಸ್ಟ್ರಾರ್ (ಐಟಿ) ಮತ್ತು ಸಹಾಯಕ ರಿಜಿಸ್ಟ್ರಾರ್ (ಐಟಿ) ಅವರಿಗೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಪ್ರತಿಕ್ರಿಯಿಸುವಂತೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿತು.
ಇದೇ ವೇಳೆ, ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ, ರೆಕಾರ್ಡಿಂಗ್‌ಗಳನ್ನು ಸೀಮಿತ ಅವಧಿಗೆ ಮಾತ್ರ ಇರಿಸಲಾಗುತ್ತದೆ. ಆನಂತರ ಅವುಗಳನ್ನು ಅಳಿಸಲು ಅವಕಾಶವಿದೆ. ಆದ್ದರಿಂದ, ತಾವು ಕೋರಿರುವ ನಿರ್ದಿಷ್ಟ ಕಲಾಪದ ನೇರ ಪ್ರಸಾರದ ರೆಕಾರ್ಡಿಂಗ್ ಅನ್ನು ಸಂರಕ್ಷಿಸಿಡಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದರು. ಆದರೆ, ಅಂತಹ ಯಾವುದೇ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ ಪೀಠವು ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಫಬ್ರವರಿ 6ಕ್ಕೆ ಮುಂದೂಡಿತು.
ಶೈಕ್ಷಣಿಕ ಉದ್ದೇಶಕ್ಕಾಗಿ ನೇರಪ್ರಸಾರಗೊಂಡಿದ್ದ ನಿರ್ದಿಷ್ಟ ಕಲಾಪದ ರೆಕಾರ್ಡಿಂಗ್‌ನ ಆಕ್ಸೆಸ್ ಕೋರಿ 'ಕರ್ನಾಟಕ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು, 2021'ರ ಅಡಿಯಲ್ಲಿ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ಸಹಾಯಕ ರಿಜಿಸ್ಟ್ರಾರ್ (ಐಟಿ) ಅವರು 2025ರ ಡಿಸೆಂಬರ್ 30ರಂದು ತಿರಸ್ಕರಿಸಿದ್ದರು. 2021ರ ನಿಯಮಗಳ ನಿಯಮ 10 ಕೋರ್ಟ್ ಕಲಾಪದ ರೆಕಾರ್ಡಿಂಗ್‌ಗಳ ಬಳಕೆಯನ್ನು ನಿರ್ಬಂಧಿಸುತ್ತದೆ ಹಾಗೂ ಸಂಬಂಧಿತ ಪೀಠ ನಿರ್ದೇಶಿಸದ ಹೊರತು ಆರ್ಕೈವ್ ಮಾಡಿದ ದೃಶ್ಯಾವಳಿಗಳು ಅಧಿಕೃತ ನ್ಯಾಯಾಲಯದ ದಾಖಲೆಯ ಭಾಗವಾಗುವುದಿಲ್ಲ ಎಂದು ಸ್ಪಷ್ಟಪಡಿಸುತ್ತದೆ ಎಂಬ ಕಾರಣ ನೀಡಿ ಅರ್ಜಿದಾರರ ಮನವಿ ತಿರಸ್ಕರಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ವಕೀಲ ಅಂಗದ್ ಕಾಮತ್ ಅವರು “ಸಹಾಯಕ ರಿಜಿಸ್ಟ್ರಾರ್ ಅವರು ನಿಯಮಗಳನ್ನು ತಪ್ಪಾಗಿ ಅರ್ಥೈಸಿಕೊಂಡು ನಮ್ಮ ಮನವಿ ತಿರಸ್ಕರಿಸಿದ್ದಾರೆ. ನಿಯಮ 8ರ ಅಡಿ ಪ್ರವೇಶಾಧಿಕಾರ (ಆ್ಯಕ್ಸೆಸ್) ನೀಡುವ ಬಗ್ಗೆ ಹಾಗೂ ನಿಯಮ 10ರಲ್ಲಿ ಬಳಕೆಯ ಬಗ್ಗೆ ವಿವರಿಸಲಾಗಿದೆ. ನಾವು ಕೇವಲ ಪ್ರವೇಶಾಧಿಕಾರದ ಬಗ್ಗೆ ಕೇಳಿದ್ದೆವೇ ಹೊರತು ಬಳಕೆಯ ಬಗ್ಗೆಯಲ್ಲ. ರೆಕಾರ್ಡಿಂಗ್‌ಗಳನ್ನು ಹೇಗೆ ಬಳಸಬಹುದು ಎಂಬ ನಿಯಮಗಳನ್ನು ಸಂಬಂಧಿತ ಪ್ರಾಧಿಕಾರವು ತಪ್ಪಾಗಿ ಅವಲಂಬಿಸಿದೆ. ಮೊದಲು ಆಕ್ಸೆಸ್ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಪರಿಗಣಿಸಬೇಕಿತ್ತು” ಎಂದರು.
ಮುಂದುವರಿದು, ಒಮ್ಮೆ ಆ್ಯಕ್ಸೆಸ್ ದೊರೆತ ನಂತರ, ನಾವು ಅದನ್ನು ಯಾವ ಉದ್ದೇಶಕ್ಕೆ ಬಳಸುತ್ತೇವೆ ಎಂಬುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಆದರೆ, ಮೊದಲು ಆ್ಯಕ್ಸೆಸ್ ನೀಡುವ ಕುರಿತು ನಿರ್ಧರಿಸುವ ಅಧಿಕಾರ ಕೇವಲ ಸಂಬಂಧಿತ ಪ್ರಾಧಿಕಾರಕ್ಕೆ ಮಾತ್ರ ಇರುತ್ತದೆ. ಆದರೆ, ಆ ಪ್ರಾಧಿಕಾರ 'ಬಳಕೆ' ಮತ್ತು 'ಪ್ರವೇಶ' ಎರಡನ್ನೂ ಒಂದೇ ಎಂದು ಭಾವಿಸಿದೆ. 2021ರ ನಿಯಮಗಳ ಅಡಿಯಲ್ಲಿ, ಸಾರ್ವಜನಿಕ ವಲಯದಲ್ಲಿ ಲಭ್ಯವಿರದ ಕೋರ್ಟ್ ಕಲಾಪಗಳ ರೆಕಾರ್ಡಿಂಗ್ ಆ್ಯಕ್ಸೆಸ್ ಮಾಡಲು ಪಕ್ಷಕಾರರು ಕೋರಬಹುದು. ಅದಾಗ್ಯೂ, ಇಂತಹ ಮನವಿಗಳನ್ನು ಅಂಗೀಕರಿಸಲು ಅಥವಾ ತಿರಸ್ಕರಿಸಲು ನಿಯಮಗಳು ಸ್ಪಷ್ಟ ಆಧಾರಗಳನ್ನು ರೂಪಿಸಿಲ್ಲ. ಇದು ಅಸಮಂಜಸ ನಿರ್ಧಾರಗಳಿಗೆ ಕಾರಣವಾಗುತ್ತಿದೆ ಎಂದು ಅರ್ಜಿದಾರರು ಪೀಠಕ್ಕೆ ವಿವರಿಸಿದರು.
ವಿಚಾರಣೆಯ ಹಂತದಲ್ಲಿ ಪೀಠವು “ಆರ್ಕೈವ್ ಮಾಡಿದ ರೆಕಾರ್ಡಿಂಗ್‌ಗಳು ಸ್ವಯಂಚಾಲಿತವಾಗಿ ಅಧಿಕೃತ ನ್ಯಾಯಾಲಯದ ದಾಖಲೆಗಳಾಗಿ ಅರ್ಹತೆ ಪಡೆಯುವುದಿಲ್ಲ. ಹೀಗಿರುವಾಗ, ನಿಯಮ 10ರ ಅಡಿಯಲ್ಲಿರುವ ನಿರ್ಬಂಧಗಳನ್ನು ಅರ್ಜಿದಾರರು ಹೇಗೆ ಮೀರಲಿದ್ದಾರೆ” ಎಂದು ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಕಾಮತ್ ಅವರು “ನಿಯಮ 10(2)(iv) ಅಡಿಯಲ್ಲಿ ತರಬೇತಿ, ಶೈಕ್ಷಣಿಕ ಮತ್ತು ವಿದ್ಯಾಭ್ಯಾಸದ ಉದ್ದೇಶಗಳಿಗಾಗಿ ಅಧಿಕೃತ ರೆಕಾರ್ಡಿಂಗ್‌ಗಳ ಬಳಕೆಯನ್ನು ಅನುಮತಿಸಲು ಅವಕಾಶವಿದೆ ಎಂದರಲ್ಲದೆ, ಶೈಕ್ಷಣಿಕ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನ ಉದ್ದೇಶಗಳಿಗಾಗಿ ಕಲಾಪದ ರೆಕಾರ್ಡಿಂಗ್‌ನ ಆಕ್ಸೆಸ್ ಕೋರಿದ್ದೇವೆ” ಎಂದರು.
'ಕರ್ನಾಟಕ ನ್ಯಾಯಾಲಯದ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು, 2021' ರ ನಿಯಮ 8(3) ಯಾವ ಉದ್ದೇಶಗಳಿಗೆ ಕಲಾಪದ ರೆಕಾರ್ಡಿಂಗ್‌ಗಳ ಆ್ಯಕ್ಸೆಸ್ ನೀಡಬಹುದು ಎಂಬುದರ ಬಗ್ಗೆ ಮೌನವಹಿಸಿದೆ. ಆದ್ದರಿಂದ, ನಿಯಮ 8(3)ರ ಅಡಿಯಲ್ಲಿ ಕಲಾಪಗಳ ಆ್ಯಕ್ಸೆಸ್ ಹೇಗೆ ನೀಡಬೇಕು ಅಥವಾ ನಿರಾಕರಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಅಥವಾ ಎಸ್‌ಒಪಿಗಳನ್ನು ರೂಪಿಸಬೇಕು. ಆ ಮಾರ್ಗಸೂಚಿ ಅಥವಾ ಎಸ್‌ಒಪಿಗಳು ಕಲಾಪದ ರೆಕಾರ್ಡಿಂಗ್‌ಗಳ ಆ್ಯಕ್ಸೆಸ್ ಕುರಿತು ಕೈಗೊಳ್ಳುವ ನಿರ್ಧಾರಗಳಿಗೆ ಕಾರಣಗಳು, ಕಾಲಮಿತಿ ಮತ್ತು ಮರುಪರಿಶೀಲನಾ ವ್ಯವಸ್ಥೆಯನ್ನು ಒಳಗೊಂಡಿರಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.