ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಜುಬೈರ್ ವಿರುದ್ಧದ ಪ್ರಕರಣಗಳ ತನಿಖೆ: ಎಸ್ಐಟಿ ರಚಿಸಿದ ಉತ್ತರಪ್ರದೇಶ ಪೊಲೀಸರು

ಉತ್ತರಪ್ರದೇಶದ ಸೀತಾಪುರ ಮತ್ತು ಲಖೀಂಪುರ ಖೇರಿ ಪೊಲೀಸ್ ಠಾಣೆಯಲ್ಲಿ ಜುಬೈರ್ ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ.
Mohammed Zubair
Mohammed Zubair Twitter

ಆಲ್ಟ್ ನ್ಯೂಸ್ ಸಹ- ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ವಿರುದ್ಧದ ಪ್ರಕರಣಗಳ ತನಿಖೆಗಾಗಿ ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ ಎಂದು ವರದಿಯಾಗಿದೆ.

ಉತ್ತರಪ್ರದೇಶದ ಸೀತಾಪುರ ಮತ್ತು ಲಖೀಂಪುರ ಖೇರಿ ಪೊಲೀಸ್‌ ಠಾಣೆಯಲ್ಲಿ ಜುಬೈರ್‌ ಅವರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಸೀತಾಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಬೈರ್‌ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದಾರೆ. ಮಹಾಂತ ಬಜರಂಗ ಮುನಿ, ಯತಿ ನರಸಿಂಗಾನಂದ ಮತ್ತು ಸ್ವಾಮಿ ಆನಂದ ಸ್ವರೂಪ ಅವರನ್ನು 'ದ್ವೇಷ ಪಸರಿಸುವವರು' ಎಂದು ಉಲ್ಲೇಖಿಸಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಡಿ ಉತ್ತರ ಪ್ರದೇಶ ಪೊಲೀಸರು ಜುಬೈರ್‌ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

Also Read
ಮೊಹಮ್ಮದ್‌ ಜುಬೈರ್‌ ಬಂಧನ: ಆಕ್ಷೇಪಣೆ ಸಲ್ಲಿಸಲು ದೆಹಲಿ ಪೊಲೀಸ್‌ಗೆ ನಿರ್ದೇಶಿಸಿದ ದೆಹಲಿ ಹೈಕೋರ್ಟ್‌

ಸುದರ್ಶನ್ ಟಿವಿಯ ಉದ್ಯೋಗಿ ಆಶಿಶ್ ಕುಮಾರ್ ಕಟಿಯಾರ್ ಸಲ್ಲಿಸಿದ್ದ ದೂರಿನ ಮೇರೆಗೆ ಸೆಪ್ಟೆಂಬರ್, 2021ರಲ್ಲಿ ಲಖಿಂಪುರ ಖೇರಿ ಪ್ರಕರಣ ದಾಖಲಿಸಲಾಗಿತ್ತು. ಮದೀನಾ ಮಸೀದಿಯ ಚಿತ್ರ ಇಸ್ರೇಲ್‌ ದಾಳಿಗೆ ತುತ್ತಾಗಿದೆ ಎಂದು ಸುದ್ದಿ ವಾಹಿನಿ ಸುಳ್ಳು ಸುದ್ದಿ ಹರಡಿದೆ ಎಂದು ಜುಬೈರ್‌ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ಮುಸ್ಲಿಮರನ್ನು ಪ್ರಚೋದಿಸುತ್ತಿದೆ ಎಂದು ಕಟಿಯಾರ್‌ ದೂರಿದ್ದರು. ಜುಬೈರ್‌ ಟ್ವೀಟ್‌ ತೆಗೆದು ಹಾಕದ ಕಾರಣ ಟ್ವಿಟರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯ ಜುಬೈರ್‌ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.

ಸಿನಿಮಾ ದೃಶ್ಯವೊಂದನ್ನು ಟ್ವೀಟ್‌ ಮಾಡಿ ಧಾರ್ಮಿಕ ಭಾವನೆ ಕೆರಳಿಸಿದ ಆರೋಪದಡಿ ದೆಹಲಿ ಪೊಲೀಸರು ದಾಖಲಿಸಿದ್ದ ಪ್ರಕರಣದಲ್ಲಿ ಜುಬೈರ್‌ ಈಗಾಗಲೇ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಜುಲೈ 14 ರಂದು ವಿಚಾರಣೆ ನಡೆಸಲಿದೆ.

Related Stories

No stories found.
Kannada Bar & Bench
kannada.barandbench.com