ತುರ್ತುಸ್ಥಿತಿ 'ಅಸಾಂವಿಧಾನಿಕ' ಎಂದು ಘೋಷಿಸಲು 94 ವರ್ಷದ ವಯೋವೃದ್ಧೆಯಿಂದ ಸುಪ್ರೀಂ‌ನಲ್ಲಿ ಮನವಿ: ಹರೀಶ್ ಸಾಳ್ವೆ ವಾದ

ಪತಿ ವಿರುದ್ಧ ಜಾರಿಗೊಳಿಸಲಾದ ನಿರಂಕುಶ ಬಂಧನ ಆದೇಶದಿಂದಾಗಿ ಬಂಧನಕ್ಕೊಳಗಾಗುವ ಭಯದಿಂದ ತಾನು ಮತ್ತು ತನ್ನ ಪತಿ ದೇಶ ತೊರೆಯಬೇಕಾಯಿತು ಎಂದು ವೆರಾ ಸರಿನ್ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
Emergency
EmergencyNewspapers / Ragu Rai

ಭಾರತ ಸರ್ಕಾರವು ನಲವತ್ತೈದು ವರ್ಷಗಳ ಹಿಂದೆ ತುರ್ತು ಪರಿಸ್ಥಿತಿ ಘೋಷಿಸಿ, ನಲವತ್ಮೂರು ವರ್ಷಗಳ ಹಿಂದೆ ಅದನ್ನು ಹಿಂಪಡೆದ ಬಳಿಕ ಅದನ್ನು ಅಸಾಂವಿಧಾನಿಕ ಎಂದು ಘೋಷಿಸಿ, 25 ಕೋಟಿ ರೂಪಾಯಿ ಪರಿಹಾರ ಕೊಡಿಸುವಂತೆ ಕೋರಿ 94 ವರ್ಷದ ವಯೋವೃದ್ಧೆಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಅರ್ಜಿದಾರೆಯಾದ ವೆರಾ ಸರಿನ್ ಅವರು ವಕೀಲ ಅನನ್ಯಾ ಘೋಷ್‌ ಅವರ ಮೂಲಕ ಮನವಿ ಸಲ್ಲಿಸಿದ್ದು, ಹಿರಿಯ ವಕೀಲ ಹರೀಶ್‌ ಸಾಳ್ವೆ ಅರ್ಜಿದಾರರನ್ನು ಪ್ರತಿನಿಧಿಸಲಿದ್ದಾರೆ. “ಅರ್ಜಿದಾರರ ಪತಿಯ ವಿರುದ್ಧ ಹೊರಡಿಸಲಾಗಿದ್ದ ನ್ಯಾಯಸಮ್ಮತವಲ್ಲದ ಮತ್ತು ನಿರಂಕುಶ ಬಂಧನ ಆದೇಶಗಳಿಂದಾಗಿ” ಜೈಲುಪಾಲಾಗುವ ಭೀತಿಯಿಂದ ಸರಿನ್‌ ಮತ್ತು ಆಕೆಯ ಪತಿ ದೇಶ ತೊರೆಯುವಂತಾಗಿತ್ತು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ವಿದೇಶಿ ವಿನಿಮಯ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಸಂರಕ್ಷಣಾ ಕಾಯಿದೆ – 1974 (ಕಾಫಿಪೊಸಾ) ಮತ್ತು ಕಳ್ಳಸಾಗಣೆದಾರರ ಮತ್ತು ವಿದೇಶಿ ವಿನಿಮಯ ಕೈಚಳಕದಾರರ (ಆಸ್ತಿ ಮುಟ್ಟುಗೋಲು) ಕಾಯಿದೆ -1976ರ (ಎಸ್‌ಎಎಫ್‌ಇಎಂಎ) ಅಡಿ ತಮ್ಮ ಪತಿಯ ವಿರುದ್ಧ ದೂರು ದಾಖಲಿಸಲಾಗಿತ್ತು ಎಂದು ಸರಿನ್‌ ಮನವಿಯಲ್ಲಿ ವಿವರಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆಯಾಗುವುದಕ್ಕೂ ಮುನ್ನ ತನ್ನ ಮೃತ ಪತಿ ದೆಹಲಿಯ ಕರೋಲ್‌ ಭಾಗ್‌ ಮತ್ತು ಕೆ ಜಿ ಮಾರ್ಗ್‌ನಲ್ಲಿ ಕಲಾಕೃತಿಗಳು, ಕುಸರಿ ಆಭರಣಗಳು, ರತ್ನಗಳು, ರತ್ನಗಂಬಳಿಗಳು ಇತ್ಯಾದಿಗಳ ಉದ್ಯಮ ಹೊಂದಿದ್ದರು. ತುರ್ತುಪರಿಸ್ಥಿತಿಯ ವೇಳೆ, “ಅರ್ಜಿದಾರರ ಸ್ಥಿರಾಸ್ತಿಯನ್ನು ವಶಪಡಿಸಿಕೊಳ್ಳಲಾಯಿತು. ಅಲ್ಲದೆ, ಕಲಾಕೃತಿಗಳು, ರತ್ನಗಳು, ರತ್ನಗಂಬಳಿಗಳು, ವರ್ಣಚಿತ್ರಗಳು, ದಂತಗಳು, ಪ್ರತಿಮೆಗಳು, ದಂತ ಕಲಾಕೃತಿಗಳು ಕೋಟ್ಯಂತರ ಮೌಲ್ಯದ ದಂತಗಳನ್ನು ಒಳಗೊಂಡಿರುವ ಚರಾಸ್ತಿಯನ್ನು ಸಹ ವಶಪಡಿಸಿಕೊಳ್ಳಲಾಯಿತು. ಇಲ್ಲಿಯವರೆಗೆ ಅದನ್ನು ಮರಳಿಸುವ ಕೆಲಸವಾಗಿಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

2000ದಲ್ಲಿ ತಮ್ಮ ಪತಿ ತೀರಿಕೊಂಡ ಬಳಿಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಮ್ಮ ಪತಿಯ ವಿರುದ್ಧ ಆರಂಭಿಸಿದ ಎಲ್ಲಾ ಕಾನೂನು ಹೋರಾಟಗಳನ್ನು ಏಕಾಂಗಿಯಾಗಿ ಎದುರಿಸುತ್ತಿರುವುದಾಗಿ ಮನವಿಯಲ್ಲಿ ಸರೀನ್ ವಿವರಿಸಿದ್ದಾರೆ. “ಹಲವು ಸಂದರ್ಭಗಳಲ್ಲಿ ಪೊಲೀಸರು ಮತ್ತು ಅಧಿಕಾರಿಗಳು ತಮ್ಮ ಮನೆ ಪ್ರವೇಶಿಸಿ ಶೋಧನೆ ನಡೆಸುತ್ತಿದ್ದ ವೇಳೆ, ಉಳಿದಿರುವ ಬೆಲೆಬಾಳುವ ಚೂರು-ಪಾರು ಪದಾರ್ಥಗಳನ್ನು ನೀಡಿದ ಬಳಿಕವಷ್ಟೇ ಮನೆ ತೊರೆಯುತ್ತಿದ್ದರು” ಎಂದು ಅವರು ದೂರಿದ್ದಾರೆ.

ನ್ಯಾಯಮೂರ್ತಿಗಳಾದ ಸಂಜಯ್‌ ಕಿಷನ್‌ ಕೌಲ್‌ ಮತ್ತು ದಿನೇಶ್‌ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಸೋಮವಾರ ಅರ್ಜಿಯ ವಿಚಾರಣೆ ನಡೆದಿದ್ದು, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ನೀಲಾ ಗೋಖಲೆ ಅವರು ಮುಂದಿನ ವಿಚಾರಣೆಯಲ್ಲಿ ಹಿರಿಯ ವಕೀಲ ಹರೀಶ್‌ ಸಾಳ್ವೆ ವಾದಿಸಲಿದ್ದಾರೆ ಎಂದು ವಿಚಾರಣೆ ಮುಂದೂಡುವಂತೆ ಕೋರಿದರು.

ಈ ವೇಳೆ ನ್ಯಾ.ಕೌಲ್ ಅವರು, “ ತುರ್ತುಪರಿಸ್ಥಿತಿ ಆಗಿ ಹೋದ ಹಲವು ವರ್ಷಗಳ ಬಳಿಕ ಇದೆಂಥಾ ರಿಟ್‌ ಮನವಿ… ಅದೂ 30, 35 ವರ್ಷಗಳ ಬಳಿಕ... ಅರ್ಥವಿಲ್ಲ... ಹೋಗಲಿಬಿಡಿ...” ಎಂದು ಆಕ್ಷೇಪಿಸಿದರು. ಪ್ರಕರಣವು ಮುಂದಿನ ಸೋಮವಾರ ವಿಚಾರಣೆಗೆ ಬರಲಿದೆ.

Also Read
ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ತುರ್ತು ವಿಲೇವಾರಿ: ಸರ್ಕಾರಿ ಅಭಿಯೋಜಕರ ನೇಮಕಾತಿ ವಿವರ ಬಯಸಿದ ಹೈಕೋರ್ಟ್

ಜುಲೈ 2020ರ ಸರ್ಕಾರದ ಆದೇಶದ ನಂತರ, ದೆಹಲಿ ಹೈಕೋರ್ಟ್ ನವದೆಹಲಿಯ ಕೆ ಜಿ ಮಾರ್ಗ್‌ನಲ್ಲಿರುವ ಆಸ್ತಿಯ ಬಾಡಿಗೆಯ ಬಾಕಿ ಮೊತ್ತವನ್ನು 1999ರಿಂದ ನಿಗದಿತ ಮಾಸಿಕ ದರದಲ್ಲಿ ಸರಿನ್ ಮತ್ತು ಇತರ ಕಾನೂನುಬದ್ಧ ವಾರಸುದಾರರಿಗೆ ಪಾವತಿಸಲು ನಿರ್ದೇಶಿಸಿತ್ತು.

“ಅರ್ಜಿದಾರರು ತಮ್ಮ ಇಳಿವಯಸ್ಸಿನಲ್ಲಿ ತಮಗಾದ ಆಘಾತದಿಂದ ಹೊರಬರುವ ಸರಳ ಬಯಕೆ ಹೊಂದಿದ್ದಾರೆ. ತಾವು ಅನುಭವಿಸಿದ ನೋವನ್ನು ಸಮಾಜ ಮನಗಾಣಬೇಕು ಎಂದು ಬಯಸಿದ್ದಾರೆ. ಆದ್ದರಿಂದ, ಈ ಅರ್ಜಿ ಸಲ್ಲಿಸಲಾಗಿದೆ” ಎಂದು ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com