ಯತಿ ನರಸಿಂಹಾನಂದ ನಡೆಸಲಿರುವ ಧರ್ಮ ಸಂಸದ್ ವಿರುದ್ಧ ಕ್ರಮ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ದೇಶದಲ್ಲಿ ನಡೆಯುವ ದ್ವೇಷದ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.
Supreme Court, Yati Narsinghanand
Supreme Court, Yati Narsinghanand
Published on

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಈ ವಾರ ಯತಿ ನರಸಿಂಹಾನಂದ ಮತ್ತಿತರರು ಆಯೋಜಿಸಲು ಉದ್ದೇಶಿಸಿರುವ ಧರ್ಮ ಸಂಸದ್ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮಾಜಿ ಅಧಿಕಾರಿಗಳು ಸೇರಿದಂತೆ ನಾಗರಿಕ ಸಮಾಜದ ಸದಸ್ಯರ ಗುಂಪೊಂದು ಸುಪ್ರೀಂ ಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ .

ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿ ಸಿಜೆಐ ಸಂಜೀವ್ ಖನ್ನಾ ಅವರೆದುರು  ವಕೀಲ ಪ್ರಶಾಂತ್ ಭೂಷಣ್ ಅರ್ಜಿ ಪ್ರಸ್ತಾಪಿಸಿದರು. ತುರ್ತು ಅರ್ಜಿ ಸಲ್ಲಿಸಲು ನ್ಯಾಯಾಲಯ ಕೇಳಿದಾಗ ಅರ್ಜಿದಾರರು ಈಗಾಗಲೇ ಸಲ್ಲಿಸಲಾಗಿದೆ ಎಂದರು.

Also Read
ಯತಿ ನರಸಿಂಹಾನಂದ ಭಾಷಣ ಕುರಿತ ಟ್ವೀಟ್: ಎಫ್ಐಆರ್ ರದ್ದತಿಗೆ ಅಲಾಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ ಪತ್ರಕರ್ತ ಜುಬೇರ್‌

ದ್ವೇಷ ಭಾಷಣ ಪ್ರಕರಣಗಳಲ್ಲಿ ಅಪರಾಧಿಗಳ ಧರ್ಮ ಲೆಕ್ಕಿಸದೆ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳುವಂತೆ 2022ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಾಂಗ ನಿಂದನೆ ಅರ್ಜಿ ಆರೋಪಿಸಿದೆ .

ಮುಸ್ಲಿಮರ ವಿರುದ್ಧ ನರಸಿಂಹಾನಂದ ಅವರು ಪದೇ ಪದೇ ದ್ವೇಷ ಭಾಷಣ ಮಾಡುತ್ತಿದ್ದಾರೆ. ಅಲ್ಲದೆ ಧರ್ಮ ಸಂಸದ್‌ನ ಜಾಲತಾಣ ಮತ್ತು ಅದರ ಜಾಹೀರಾತುಗಳಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳ ವಿರುದ್ಧ ವಿವಿಧ ಕೋಮು ಹೇಳಿಕೆಗಳಿದ್ದು ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದು ಅರ್ಜಿದಾರರು ದೂರಿದ್ದಾರೆ.

Also Read
ಸನಾತನ ಧರ್ಮ ಸಂರಕ್ಷಣಾ ಮಂಡಳಿ ಸ್ಥಾಪನೆ: ಮನವಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ಅರುಣಾ ರಾಯ್, ಅಶೋಕ್ ಕುಮಾರ್ ಶರ್ಮಾ, ದೇಬ್ ಮುಖರ್ಜಿ, ನವರೇಖಾ ಶರ್ಮಾ, ಸೈಯದಾ ಹಮೀದ್, ವಿಜಯನ್ ಎಂ ಜೆ ಅವರಂತಹ ನಿವೃತ್ತ ಅಧಿಕಾರಿಗಳು ಮತ್ತು ಸಾಮಾಜಿಕ ಹೋರಾಟಗಾರರು ಅರ್ಜಿ ಸಲ್ಲಿಸಿದ್ದಾರೆ.

ದೇಶದಲ್ಲಿ ನಡೆಯುವ ದ್ವೇಷ ಭಾಷಣಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.

Kannada Bar & Bench
kannada.barandbench.com