
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ (ಕೆಎಸ್‌ಒಯು) ಕುಲಪತಿ ಹುದ್ದೆಯಿಂದ ಎಸ್ ವಿದ್ಯಾಶಂಕರ್ ಅವರನ್ನು ವಜಾಗೊಳಿಸುವಂತೆ ಕೋರಿ ಸಲ್ಲಿಕೆಯಾಗಿರುವ ಮನವಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಮೈಸೂರು ವಿಶ್ವವಿದ್ಯಾಲಯದ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ ಸದಸ್ಯ ಡಾ. ಕೆ ಮಹದೇವ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ನೇತ್ವತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರ ಮತ್ತು ಕುಲಪತಿ ವಿದ್ಯಾಶಂಕರ್‌ಗೆ ನೋಟಿಸ್ ಜಾರಿಗೊಳಿಸಿತು.
ಕೆಎಸ್‌ಒಯು ಕುಲಪತಿ ಹುದ್ದೆಗೆ ಎಸ್ ವಿದ್ಯಾಶಂಕರ್ ಅವರನ್ನು 2019ರ ಮೇ 30ರಂದು ನೇಮಕ ಮಾಡಲಾಗಿತ್ತು. 2022ರ ಮೇ 30ಕ್ಕೆ ಅವರ ಸೇವಾವಧಿ ಮುಕ್ತಾಯವಾಗಬೇಕಿತ್ತು. ಆದರೆ, ಮತ್ತೆ ಒಂದು ವರ್ಷದ ಅವಧಿಗೆ ಅವರ ಸೇವೆ ವಿಸ್ತರಿಸಿ ರಾಜ್ಯಪಾಲರು 2022ರ ಏಪ್ರಿಲ್ 6ರಂದು ಆದೇಶಿಸಿದ್ದರು. ಈ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಬಿಐಟಿ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರಾಗಿ ಎಸ್ ವಿದ್ಯಾಶಂಕರ್ ಕಾರ್ಯ ನಿರ್ವಹಿಸಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಈ ಆರೋಪದ ಹೊರತಾಗಿಯೂ ವಿದ್ಯಾಶಂಕರ್ ಅವರನ್ನು ಕೆಎಸ್‌ಒಯು ಕುಲಪತಿ ಹುದ್ದೆಗೆ ಮೂರು ವರ್ಷದ ಅವಧಿಗೆ ನೇಮಿಸಿ 2019ರ ಮೇ 30ರಂದು ರಾಜ್ಯಪಾಲರು ಆದೇಶಿಸಿದ್ದರು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಅಲ್ಲದೇ, ಕುಲಪತಿಯಾದ ನಂತರವೂ ವಿದ್ಯಾಶಂಕರ್ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾನೂನುಬಾಹಿರವಾಗಿ 55 ಬೋಧಕ ಮತ್ತು 93 ಬೋಧಕೇತರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿದ್ದಾರೆ. ಈ ಎಲ್ಲಾ ಕಾರಣಗಳನ್ನು ಪರಿಗಣಿಸಿ ಕುಲಪತಿ ಹುದ್ದೆಯಿಂದ ವಿದ್ಯಾಶಂಕರ್ ಅವರನ್ನು ವಜಾಗೊಳಿಸುವಂತೆ ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.