Lawyers
Lawyers

ಬೇಸಿಗೆಯಲ್ಲಿ ವಕೀಲರ ವಸ್ತ್ರ ಸಂಹಿತೆ ಸಡಿಲಿಕೆ: ಬಿಸಿಐ ಸಂಪರ್ಕಿಸಲು ಸೂಚಿಸಿದ ಸುಪ್ರೀಂ ಕೋರ್ಟ್‌

ಒಂದು ವೇಳೆ ಬಿಸಿಐ ಕ್ರಮ ಕೈಗೊಳ್ಳದಿದ್ದರೆ ಆಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದ ಪೀಠ.
Published on

ಬೇಸಿಗೆ ಕಾಲದಲ್ಲಿ ವಕೀಲರ ವಸ್ತ್ರ ಸಂಹಿತೆಯಲ್ಲಿ ಸಡಿಲಿಕೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ [ಶೈಲೇಂದ್ರ ತ್ರಿಪಾಠಿ ಮತ್ತು ಭಾರತೀಯ ವಕೀಲರ ಪರಿಷತ್ತು ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ಭಾರತೀಯ ವಕೀಲರ ಪರಿಷತ್ತನ್ನು (ಬಿಸಿಐ) ಸಂಪರ್ಕಿಸುವಂತೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠ ಸೂಚಿಸಿದ ಬಳಿಕ ಅರ್ಜಿದಾರ ಶೈಲೇಂದ್ರ ತ್ರಿಪಾಠಿ ಅವರು ತಮ್ಮ ಮನವಿ ಹಿಂಪಡೆಯಲು ನಿರ್ಧರಿಸಿದರು. ಒಂದು ವೇಳೆ ಬಿಸಿಐ ಕ್ರಮ ಕೈಗೊಳ್ಳದಿದ್ದರೆ ಆಗ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪೀಠ ಹೇಳಿದೆ.

Also Read
ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವಸ್ತ್ರ ಸಂಹಿತೆ ಜಾರಿಗೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆ

ಕಪ್ಪು ನಿಲುವಂಗಿ ಅಥವಾ ಕೋಟು ಇಲ್ಲವೇ ಉದ್ದನೆಯ ಔಪಚಾರಿಕ ಗೌನ್‌ಗಳು ದೇಶದ ಉತ್ತರ ಮತ್ತು ಕರಾವಳಿ ಭಾಗಗಳಲ್ಲಿ ಬೇಸಿಗೆ ಹವಾಮಾನಕ್ಕೆ ಹೊಂದಿಕೆಯಾಗದ ವಸಾಹತುಶಾಹಿ ಪರಂಪರೆ ಎಂದು ತ್ರಿಪಾಠಿ ಅವರು ಅರ್ಜಿ ಸಲ್ಲಿಸಿದ್ದರು.

ಕಲ್ಕತ್ತಾ ಮತ್ತು ಮದ್ರಾಸ್‌ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿರುವ ನ್ಯಾ. ಇಂದಿರಾ ಬ್ಯಾನರ್ಜಿ ಅವರು ಅರ್ಜಿದಾರರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರಾದರೂ ಸಂವಿಧಾನದ 32ನೇ ವಿಧಿಯಡಿಯಲ್ಲಿ ಅರ್ಜಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ತಿಳಿಸಿ ಬಿಸಿಐ ಸಂಪರ್ಕಿಸುವಂತೆ ಸೂಚಿಸಿದರು. ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ವಿಕಾಸ್‌ ಸಿಂಗ್‌ ವಾದ ಮಂಡಿಸಿದರು. ವಕೀಲರಾದ ಅಭಿಗ್ಯಾ ಕುಶ್ವಾಹ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿತ್ತು.

Kannada Bar & Bench
kannada.barandbench.com