ಹಳೆಯ ಸಂಸತ್ ಕಟ್ಟಡವನ್ನು 'ಸಂವಿಧಾನ ಸದನ್' (ಸಂವಿಧಾನ ಭವನ) ಎಂದು ಮರುನಾಮಕರಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪ್ರಸ್ತಾಪಿಸಿದರು.
ಸಂಸತ್ತಿನ ವಿಶೇಷ ಅಧಿವೇಶನದ ಎರಡನೇ ದಿನವಾದ ಇಂದು ಹೊಸ ಸಂಸತ್ ಕಟ್ಟಡಕ್ಕೆ ತೆರಳುವ ಮೊದಲು ಪ್ರಧಾನಿ ಈ ವಿಚಾರ ಪ್ರಸ್ತಾಪಿಸಿದರು. "ಭವಿಷ್ಯದಲ್ಲಿ, ಎಲ್ಲಾ ಸಂಸತ್ ಸದಸ್ಯರ ಒಪ್ಪಿಗೆಯೊಂದಿಗೆ, ನಾವು ಹಳೆಯ ಸಂಸತ್ ಭವನವನ್ನು 'ಸಂವಿಧಾನ ಸದನ' ಎಂದು ಕರೆಯಬಹುದು ಎಂದು ನಾನು ಮನವಿ ಮಾಡುವೆ," ಎಂದರು.
ಸಂಸತ್ತು ಈಗ ಹೊಸ ಕಟ್ಟಡದಿಂದ ಕಾರ್ಯನಿರ್ವಹಿಸುತ್ತದೆಯಾದರೂ, ಹಳೆಯ ಕಟ್ಟಡದ ಘನತೆ ಎಂದಿಗೂ ಕಡಿಮೆಯಾಗಬಾರದು ಎಂದು ಮೋದಿ ಹೇಳಿದರು.
"ಹಳೆಯ ಸಂಸತ್ತು ನಮ್ಮ ಪೀಳಿಗೆಗೆ ಯಾವಾಗಲೂ ಸ್ಫೂರ್ತಿಯಾಗಲಿ. ನಾವು ಇದನ್ನು ಸಂವಿಧಾನ ಭವನ ಎಂದು ಕರೆಯುವಾಗ, ಅದು ಈ ಹಿಂದೆ ಇಲ್ಲಿ ಸಂವಿಧಾನ ಸಭೆಯಲ್ಲಿ ಕುಳಿತಿದ್ದ ಮಹಾನ್ ಪುರುಷರನ್ನು ಸಹ ನೆನಪಿಸುತ್ತದೆ. ಇದು ಭವಿಷ್ಯದ ಪೀಳಿಗೆಗೆ ಉಡುಗೊರೆಯಾಗಿದೆ" ಎಂದು ಅವರು ವಿವರಿಸಿದರು.
'ಎಪ್ಪತ್ತೈದು ವರ್ಷಗಳ ಸಂಸದೀಯ ಯಾನ- ಸಾಧನೆ, ಅನುಭವ, ನೆನಪು ಹಾಗೂ ಪಾಠಗಳು ʼ ಎಂಬ ವಿಷಯದ ಕುರಿತಂತೆ ನಿನ್ನೆ ( ಸೆಪ್ಟೆಂಬರ್ 18) ಚರ್ಚಿಸುವುದರಿಂದಿಗೆ ಹಳೆಯ ಕಟ್ಟಡದಲ್ಲಿ ವಿಶೇಷ ಅಧಿವೇಶನ ಆರಂಭವಾಗಿತ್ತು. ಇಂದು ಅಧಿವೇಶನ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅಧಿವೇಶನ ಸೆಪ್ಟೆಂಬರ್ 22 ರಂದು ಮುಕ್ತಾಯಗೊಳ್ಳಲಿದ್ದು ಈ ವೇಳೆ ಐದು ಮಸೂದೆಗಳ ಕುರಿತು ಚರ್ಚೆ ಮತ್ತು ಅವುಗಳಿಗೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.