ಅಕ್ರಮ ಹಣ ವರ್ಗಾವಣೆ: ಸಚಿನ್‌ ನಾರಾಯಣ್‌, ಆಂಜನೇಯ ಸೇರಿ ನಾಲ್ವರ ಜಾಮೀನು ತೀರ್ಪು ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವೇ ಆರೋಪಿಗಳನ್ನು ವಶಕ್ಕೆ ಪಡೆಯದಿರುವುದರಿಂದ ಪೀಠವು ಆರೋಪಿಗಳನ್ನು ಕಸ್ಟಡಿಗೆ ನೀಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದ ನ್ಯಾ. ಧಲ್‌.
D K Shivakumar with Delhi's Rouse Avenue Court
D K Shivakumar with Delhi's Rouse Avenue CourtFacebook

ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿಯ ಪ್ರಕರಣದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಜೊತೆಗೆ ಸಹ ಆರೋಪಿಗಳಾಗಿರುವ ನಾಲ್ವರ ಜಾಮೀನು ಮನವಿಗಳ ವಿಚಾರಣೆಯನ್ನು ದೆಹಲಿಯ ವಿಶೇಷ ನ್ಯಾಯಾಲಯವು ಶನಿವಾರ ನಡೆಸಿದ್ದು, ಆಗಸ್ಟ್‌ 2ಕ್ಕೆ ತೀರ್ಪು ಕಾಯ್ದಿರಿಸಿದೆ.

ದೆಹಲಿಯ ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕರು ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ಭ್ರಷ್ಟಾಚಾರ ನಿಯಂತ್ರಣ, ಸಿಬಿಐ ಹಾಗೂ ಹಾಲಿ, ಮಾಜಿ ಶಾಸಕರು ಮತ್ತು ಸಂಸದರಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಕಾಸ್‌ ಧಲ್ ಅವರು ಪಕ್ಷಕಾರರ ವಾದ ಆಲಿಸಿದರು.

ಆರೋಪಿಗಳಾದ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ದೆಹಲಿಯ ನಿವಾಸಿಗಳಾದ ಎಚ್‌ ಆಂಜನೇಯ ಮತ್ತು ರಾಜೇಂದ್ರ ಎನ್‌ ಅವರನ್ನು ಪ್ರತಿನಿಧಿಸಿದ್ದ ವಕೀಲರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಡಿ ಕೆ ಶಿವಕುಮಾರ್‌ ಅವರಿಗೆ ಅರ್ಹತೆ ಆಧಾರದಲ್ಲಿ ಈಗಾಗಲೇ ಜಾಮೀನು ದೊರೆತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿದಿದ್ದು, ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮಾ, ಆಂಜನೇಯ ಹನುಮಂತಯ್ಯ ಮತ್ತು ರಾಜೇಂದ್ರ ಅವರನ್ನು ಬಂಧಿಸಲಾಗಿಲ್ಲ. ಈಗ ಅವರನ್ನು ಕಸ್ಟಡಿಗೆ ಪಡೆಯುವುದರಲ್ಲಿ ಅರ್ಥವಿಲ್ಲ ಎಂದು ವಾದಿಸಿದರು.

“ಈ ಹಂತದಲ್ಲಿ ಪಿಎಂಎಲ್‌ಎ ಸೆಕ್ಷನ್‌ 45 ಅನ್ವಯಿಸುವುದಿಲ್ಲ. ವಿಚಾರಣೆ ಆರಂಭವಾಗುವುದು ತಡವಾಗುವುದರಿಂದ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬೇಕು. ಮೂಲ ಅಪರಾಧವಾಗಿರುವ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ಪ್ರತ್ಯೇಕ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಹಾಗೂ ಕರ್ನಾಟಕ ಹೈಕೋರ್ಟ್‌ಗಳು ಈಗಾಗಲೇ ತಡೆ ನೀಡಿವೆ. ಆ ಪ್ರಕರಣದಲ್ಲಿ ವಿಚಾರಣಾ ಪ್ರಕ್ರಿಯೆ ಆರಂಭವಾಗದಿರುವಾಗ, ಪಿಎಂಎಲ್‌ಎ ಅಡಿ ಹಾಲಿ ಪ್ರಕರಣದ ವಿಚಾರಣೆ ಆರಂಭವಾಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಡಿ ಕೆ ಶಿವಕುಮಾರ್‌ ಸೇರಿದಂತೆ ಐವರಿಗೆ ಸಮನ್ಸ್‌ ಜಾರಿ ಮಾಡಿದ ದೆಹಲಿಯ ವಿಶೇಷ ನ್ಯಾಯಾಲಯ

ಇದಕ್ಕೆ ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿರುವ ವಿಶೇಷ ಸರ್ಕಾರಿ ಅಭಿಯೋಜಕರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರಾದ ಧುಲ್‌ ಅವರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಜಾರಿ ನಿರ್ದೇಶನಾಲಯವೇ ಆರೋಪಿಗಳನ್ನು ವಶಕ್ಕೆ ಪಡೆಯದಿರುವುದರಿಂದ ಪೀಠವು ಆರೋಪಿಗಳನ್ನು ಕಸ್ಟಡಿಗೆ ನೀಡುವ ಪ್ರಶ್ನೆ ಹೇಗೆ ಉದ್ಭವಿಸುತ್ತದೆ ಎಂದು ಪ್ರಶ್ನಿಸಿದರು.

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಜಾಮೀನು ಮಂಜೂರು ಮಾಡುವಾಗ ನ್ಯಾಯಾಲಯವು ಷರತ್ತು ವಿಧಿಸಿರುವ ಹಿನ್ನೆಲೆಯಲ್ಲಿ ಶಿವಕುಮಾರ್‌ ಅವರು ಪೀಠದ ಮುಂದೆ ಹಾಜರಾಗಿದ್ದರು.

Related Stories

No stories found.
Kannada Bar & Bench
kannada.barandbench.com