ಅಕ್ರಮ ಹಣ ವರ್ಗಾವಣೆ ಪ್ರಕರಣ: ಹಿರಿಯ ವಕೀಲ ಶ್ಯಾಮಸುಂದರ್‌ಗೆ ಬೆದರಿಕೆ; ಹೈಕೋರ್ಟ್‌ ಖಂಡನೆ

ತಮ್ಮ ಮನೆಯ ಮುಂದೆ ಕೆಲವು ಸಮಾಜಘಾತುಕ ಶಕ್ತಿಗಳು ಕಾಣಿಸಿಕೊಂಡಿದ್ದು, ತಮಗೆ ಬೆದರಿಕೆ ಇದೆ. ಅಂಗೂರ್‌ ಪರವಾಗಿ ತಮ್ಮ ಮಹಿಳಾ ಸಹೋದ್ಯೋಗಿಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದ ಹಿರಿಯ ವಕೀಲ ಶ್ಯಾಮಸುಂದರ್.‌
Sr. Counsel M S Shyamsundar and Karnataka HC
Sr. Counsel M S Shyamsundar and Karnataka HC

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಧುಕರ್‌ ಅಂಗೂರ್‌ಗೆ ನೀಡಿರುವ ಜಾಮೀನು ರದ್ದುಪಡಿಸುವಂತೆ ಕೋರಿರುವ ಪ್ರಕರಣದಲ್ಲಿ ಅಲಯನ್ಸ್‌ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಎಂ ಎಸ್‌ ಶ್ಯಾಮಸುಂದರ್‌ಗೆ ಸಮಾಜಘಾತುಕ ಶಕ್ತಿಗಳು ಬೆದರಿಕೆ ಹಾಕಿರುವುದಕ್ಕೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ ತೀವ್ರ ಆಕ್ಷೇಪಿಸಿದ್ದು, ಇಂಥ ನಡೆಯನ್ನು ಸಹಿಸುವುದಿಲ್ಲ ಎಂದು ಕಟು ಎಚ್ಚರಿಕೆ ನೀಡಿದೆ.

ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯ ಮತ್ತು ಅಲಯನ್ಸ್‌ ಬ್ಯುಸಿನೆಸ್‌ ಶಾಲೆ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿ ವಿಚಾರಣೆಗೆ ಹಾಜರಾಗಿದ್ದ ಹಿರಿಯ ವಕೀಲ ಶ್ಯಾಮಸುಂದರ್‌ ಅವರು “ತಮ್ಮ ಮನೆಯ ಮುಂದೆ ಕೆಲವು ಸಮಾಜಘಾತುಕ ಶಕ್ತಿಗಳು ಕಾಣಿಸಿಕೊಂಡಿದ್ದು, ತಮಗೆ ಬೆದರಿಕೆ ಇದೆ. ಮಧುಕರ್‌ ಅಂಗೂರ್‌ ಪರವಾಗಿ ತಮ್ಮ ಮಹಿಳಾ ಸಹೋದ್ಯೋಗಿಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ” ಪೀಠದ ಗಮನಸೆಳೆದರು.

ಇದನ್ನು ತೀವ್ರವಾಗಿ ಖಂಡಿಸಿದ ಪೀಠವು, ಹೇಳಿಕೆಯ ನೈಜತೆ ಅರಿಯಲು ಮಧುಕರ್‌ ಅಂಗೂರ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತು. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಅಂಗೂರ್‌ ಪೀಠದ ಮುಂದೆ ಹಾಜರಾಗಿದ್ದರು. ಈ ವಿಚಾರವನ್ನು ಅಂಗೂರ್‌ ಅವರಲ್ಲಿ ವಿಚಾರಿಸಿದಾಗ ಅವರು ಅದನ್ನು ನಿರಾಕರಿಸಿದರು. ತಮ್ಮ ಸೂಚನೆಯಂತೆ ಘಟನೆ ನಡೆದಿಲ್ಲ. ಆದರೂ ಇದು ನಡೆಯಬಾರದಿತ್ತು ಎಂದು ಹೇಳಿದರು.

ಅಲ್ಲದೇ, “ತಾನು ಕಾನೂನು ಪಾಲಿಸುವ ಪ್ರಜೆಯಾಗಿದ್ದು, ಅದನ್ನು ಮುಂದುವರಿಸುತ್ತೇನೆ. ತಿಳಿದೋ, ತಿಳಿಯದೆಯೋ ತಮ್ಮ ಬೆಂಬಲಿಗರು ಮೇಲೆ ಉಲ್ಲೇಖಿಸಿದಂಥ ಕೃತ್ಯದಲ್ಲಿ ಭಾಗಿಯಾಗಿದ್ದರೆ ಅದಕ್ಕೆ ಕ್ಷಮೆ ಕೋರುತ್ತಿದ್ದು, ಬೇಷರತ್‌ ಲಿಖಿತ ಕ್ಷಮೆಯ ಅಫಿಡವಿಟ್‌ ಸಲ್ಲಿಸಿದ್ದೇನೆ” ಎಂದರು.

ಇದನ್ನು ಒಪ್ಪಿದ ಪೀಠವು “ಅಂಗೂರ್‌ ಸಲ್ಲಿಸಿದ ಬೇಷರತ್‌ ಕ್ಷಮೆಯ ಅಫಿಡವಿಟ್‌ ಅನ್ನು ದಾಖಲಿಸಿಕೊಂಡಿತು. ಬೇಷರತ್‌ ಕ್ಷಮೆಯಲ್ಲಿ ಶ್ಯಾಮ್‌ಸುಂದರ್‌ ಮತ್ತು ಅವರ ಮಹಿಳಾ ಸಹೋದ್ಯೋಗಿಯು ವ್ಯಕ್ತಪಡಿಸಿರುವ ಆತಂಕಗಳಿಗೆ ಪರಿಹಾರವಿದೆ. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸಿದರೆ ಕಠಿಣ ಕ್ರಮಕೈಗೊಳ್ಳಲು ನ್ಯಾಯಾಲಯ ಹಿಂಜರಿಯುವುದಿಲ್ಲ” ಎಂದು ಆದೇಶದಲ್ಲಿ ದಾಖಲಿಸಿತು. ವಿಚಾರಣೆಯನ್ನು ಮಾರ್ಚ್‌ 1ಕ್ಕೆ ಮುಂದೂಡಿದೆ.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ಮಾಜಿ ಕುಲಪತಿ ಮಧುಕರ್ ಜಿ ಅಂಗೂರ್‌ಗೆ ಕರ್ನಾಟಕ ಹೈಕೋರ್ಟ್ ಜಾಮೀನು

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅಲಯನ್ಸ್‌ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಮಧುಕರ್‌ ಅಂಗೂರ್‌ ಅವರು ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಇಮೇಲ್‌ ಕಳುಹಿಸುವ ಮೂಲಕ ಬೋಧನಾ ಶುಲ್ಕವನ್ನು ಅಕ್ರಮವಾಗಿ ತೆರೆದಿರುವ ಬ್ಯಾಂಕ್‌ ಖಾತೆಗೆ ಜಮೆ ಮಾಡುವಂತೆ ನಿರ್ದೇಶಿಸಿದ್ದರು. ಕುಲಪತಿ ಹುದ್ದೆಯಿಂದ ವಜಾ ಮಾಡಿದ್ದರೂ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸುತ್ತಿದ್ದರು ಎನ್ನುವ ಆರೋಪವಿದೆ. ಹೀಗಾಗಿ, ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ 2022ರ ಏಪ್ರಿಲ್‌ನಲ್ಲಿ ಮಧುಕರ್‌ ಅಂಗೂರ್‌ಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇದನ್ನು ರದ್ದುಪಡಿಸುವಂತೆ ಅಲಯನ್ಸ್‌ ವಿಶ್ವವಿದ್ಯಾಲಯವು ಅರ್ಜಿ ಸಲ್ಲಿಸಿದೆ.

Related Stories

No stories found.
Kannada Bar & Bench
kannada.barandbench.com