ಅಕ್ರಮ ಗಣಿಗಾರಿಕೆಯ ಪ್ರಮುಖ ಆರೋಪಿ ಗಾಲಿ ಜನಾರ್ದನ ರೆಡ್ಡಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಸ್ವಸ್ತಿಕ್ ನಾಗರಾಜ್ ಅಲಿಯಾಸ್ ಕೆ ವಿ ನಾಗರಾಜ್ ಅವರಿಗೆ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾಗಿರುವ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಈಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ (ಕೆ ವಿ ನಾಗರಾಜ್ ವರ್ಸಸ್ ಜಾರಿ ನಿರ್ದೇಶನಾಲಯ).
ಸ್ವಸ್ತಿಕ್ ನಾಗರಾಜ್ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ 21ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ಹಾಗೂ ಸಿಬಿಐ ಪ್ರಕರಣಗಳ ಪ್ರಧಾನ ವಿಶೇಷ ನ್ಯಾಯಾಧೀಶ ಕೆ ಎಲ್ ಅಶೋಕ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ.
ಪಿಎಂಎಲ್‌ಎ 2002ರ ಸೆಕ್ಷನ್ 3 ಮತ್ತು 4ರ ಅಡಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್, ಅಷ್ಟೇ ಮೊತ್ತದ ಎರಡು ಭದ್ರತೆ ಒದಗಿಸಬೇಕು. ಹತ್ತು ದಿನಗಳ ಒಳಗೆ ಪಾಸ್‌ಪಾರ್ಟ್ ಅನ್ನು ತನಿಖಾಧಿಕಾರಿಗೆ ಸಲ್ಲಿಸಬೇಕು. ನ್ಯಾಯಾಲಯದ ಅನುಮತಿಯಿಲ್ಲದೇ ದೇಶ ತೊರೆಯುವಂತಿಲ್ಲ ಎಂಬುದು ಸೇರಿದಂತೆ ಎಂಟು ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಕರ್ನಾಟಕ ಲೋಕಾಯುಕ್ತ ವರದಿಯ ಹಿನ್ನೆಲೆಯಲ್ಲಿ ವಿಶೇಷ ತನಿಖಾ ದಳವು (ಎಸ್‌ಐಟಿ) ದಾಖಲಿಸಿರುವ 654 ಕೋಟಿ ರೂಪಾಯಿ ಮೊತ್ತದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಾಗರಾಜ್ ಅವರು ಆರನೇ ಆರೋಪಿಯಾಗಿದ್ದು, 2010ರ ಮಾರ್ಚ್ 3ರಲ್ಲಿ ಕಾರವಾರದ ಬೇಲೆಕೇರಿ ಬಂದರಿನಲ್ಲಿ ಪರ್ಮಿಟ್ ಹೊಂದಿರದ 99 ಲಾರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪರ್ಮಿಟ್ ಹೊಂದಿರದ ಈ ಲಾರಿಗಳಿಂದ ಅದಿರು ಸಾಗಿಸುವವರಿಗೆ ರಕ್ಷಣೆ ನೀಡುವ ಸಲುವಾಗಿ ರಿಸ್ಕ್ ಮನಿ (ಕಾನೂನು ಬಾಹಿರ ಕೃತ್ಯವೆಸಗಲು ಅದರಲ್ಲಿ ಎದುರಾಗುವ ತೊಡಗಕುಗಳ ಕಾರಣಕ್ಕಾಗಿ ಪಡೆಯುವ ಹಣ) ಸಂಗ್ರಹಿಸುತ್ತಿದ್ದ ನಾಗರಾಜ್ ಮತ್ತು ಕಾರದ ಪುಡಿ ಮಹೇಶ್ ಅಲಿಯಾಸ್ ಕೆ ಮಹೇಶ್ ಕುಮಾರ್ ಅವರು ಇಬ್ಬರೂ ಆ ಹಣವನ್ನು ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ರಿಸ್ಕ್ ಹಣ ಸಂಗ್ರಹಿಸುತ್ತಿದ್ದ ನಾಗರಾಜ್ ಮತ್ತು ಕಾರದಪುಡಿ ಮಹೇಶ್ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 120 ಬಿ, 420, 379 ಜೊತೆಗೆ ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ 1957ರ ಸೆಕ್ಷನ್ 4(1) ಮತ್ತು 1(ಎ) ಅಡಿ ಪ್ರಕರಣದ ದಾಖಲಿಸಲಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ನಾಗರಾಜ್ ಅವರಿಗೆ 2015ರ ಅಕ್ಟೋಬರ್ 16ರಂದು ನಿರೀಕ್ಷಣಾ ಜಾಮೀನು ದೊರೆತಿದೆ. ಈ ಪ್ರಕರಣದಲ್ಲಿ ಎಸ್‌ಐಟಿಯು ಆರೋಪ ಪಟ್ಟಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ. ಸಿಬಿಐ ಮತ್ತು ಎಸ್‌ಐಟಿ ದಾಖಲಿಸಿರುವ ಹಲವು ಪ್ರಕರಣಗಳಲ್ಲಿ ನಾಗರಾಜ್ ಆರೋಪಿಯಾಗಿದ್ದಾರೆ. ಅದಿರು ಸಾಗಿಸುತ್ತಿದ್ದವರಿಗೆ ಕುಮ್ಮಕ್ಕು ನೀಡುತ್ತಿದ್ದ ಆರೋಪವನ್ನು ನಾಗರಾಜ್ ಎದುರಿಸುತ್ತಿದ್ದಾರೆ.
ಎಸ್‌ಐಟಿ ಸಲಹೆ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ನಾಗರಾಜ್ ಅವರ ವಿರುದ್ದ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿದೆ. ಈಗಾಗಲೇ ಜಾರಿ ನಿರ್ದೇಶನಾಲಯ ನೀಡಿರುವ ಸಮನ್ಸ್ ಅನ್ವಯ ವಿಚಾರಣೆಗೆ ಹಾಜರಾಗಿದ್ದು, ಬಂಧಿಸುವ ಆತಂಕದ ಹಿನ್ನೆಲೆಯಲ್ಲಿ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು. ಇದನ್ನು ನ್ಯಾಯಾಲಯವು ಪುರಸ್ಕರಿಸಿದೆ.
ನಾಗರಾಜ್ ಪರ ವಕೀಲ ನಾಗೇಂದ್ರ ನಾಯ್ಕ್ ಅವರು “ವಿಚಾರಣಾಧೀನ ಕೈದಿಯಾಗಿ ನಾಗರಾಜ್ ಅವರು ಈಗಾಗಲೇ ಎರಡೂವರೆ ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರ ಚರಾಸ್ತಿ ಮತ್ತು ಸ್ಥಿರಾಸ್ತಿ, ಉದ್ಯಮವು ಆದಾಯ ತೆರಿಗೆ ಇಲಾಖೆಯ ವಿಚಾರಣೆಯೆ ಪ್ರಕ್ರಿಯೆ ಒಳಪಟ್ಟಿವೆ. ನ್ಯಾಯಾಲಯ ವಿಧಿಸುವ ಯಾವುದೇ ಷರತ್ತಿಗೆ ಬದ್ಧವಾಗಿರಲಿದ್ದಾರೆ” ಎಂದು ವಾದಿಸಿದ್ದರು.
ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರು “2007-2010ರ ಅವಧಿಯಲ್ಲಿ ಅಕ್ರಮ ಅದಿರು ಸಾಗಣೆಗಾಗಿ ನಾಗರಾಜ್ ಮತ್ತು ಇತರರು ಪರ್ಮಿಟ್ ಹೊಂದಿರದ ಲಾರಿಗಳಿಂದ 40,92,88,860 ರೂಪಾಯಿಯನ್ನು ರಿಸ್ಕ್ ಹಣವನ್ನಾಗಿ ಸಂಗ್ರಹಿಸಿದ್ದಾರೆ. ಈ ಹಣವನ್ನು ಬೇರೆಬೇರೆ ಕಡೆ ಹೂಡಿಕೆ ಮಾಡಿದ್ದಾರೆ. ಆರೋಪಿಗಳು 32,74,310.88 ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಿಸುವ ಮೂಲಕ 654 ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ. ಯಾವುದೇ ಪರವಾನಗಿ ಇಲ್ಲದೇ ಬೇಲೆಕೇರಿ ಬಂದಿರಿನ ಮೂಲಕ ಅಕ್ರಮವಾಗಿ ಅದಿರು ಸಾಗಿಸುತ್ತಿದ್ದ 99 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದ್ದು, 2022ರ ಫೆಬ್ರವರಿ 18ರಂದು ಸಮನ್ಸ್ ಜಾರಿ ಮಾಡಲಾಗಿತ್ತು. ಅಂದು ಹಾಜರಾಗಿ ಆರೋಪಿ ನಾಗರಾಜ್ ಅವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಮಾರ್ಚ್ 1 ಮತ್ತು 2ರಂದು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈಗ, ಆಧಾರರಹಿತವಾದ ಬಂಧನ ಭೀತಿ ಎಂದು ನಿರೀಕ್ಷಣಾ ಜಾಮೀನು ಕೋರಿದ್ದಾರೆ. ಹೀಗಾಗಿ, ಅಕ್ರಮ ಹಣದ ಫಲಾನುಭವಿಯಾಗಿದ್ದಾರೆ ಎಂಬುದು ಖಾತರಿಯಾಗಿದ್ದು, ತನಿಖೆಯ ಅಗತ್ಯವಿದೆ” ಎಂದು ನಿರೀಕ್ಷಣಾ ಜಾಮೀನಿಗೆ ವಿರೋಧಿಸಿದ್ದರು.