PNB scam
PNB scam

ನೀರವ್ ಮೋದಿ ಹಗರಣ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಷ್ಕ್ರಿಯತೆಗೆ ಬಾಂಬೆ ಹೈಕೋರ್ಟ್ ಅಸಮಾಧಾನ

ಹಗರಣದ ಆರೋಪಿ ನೀರವ್ ಮೋದಿ ಅವರ ₹ 500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ ಜಪ್ತಿ ಮಾಡಿರುವ ಕುರಿತು ಪಿಎನ್‌ಬಿ ಮತ್ತು ಇ ಡಿ ಸಲ್ಲಿಸಿದ ಕ್ರಾಸ್ ಕ್ಲೇಮ್‌ಗಳಿಗೆ ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದೇಶಭ್ರಷ್ಟ ಆರ್ಥಿಕ ಅಪರಾಧಿ ವಜ್ರ ವ್ಯಾಪಾರಿ ನೀರವ್ ಮೋದಿ ಆರೋಪಿಯಾಗಿರುವ ಸಾಲ ವಂಚನೆ ಪ್ರಕರಣದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ನಿಷ್ಕ್ರಿಯತೆಯು ಮಂಗಳವಾರ ಬಾಂಬೆ ಹೈಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಯಿತು.

ಹಗರಣದಲ್ಲಿ ಬೃಹತ್‌ ಪ್ರಮಾಣದ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಗೌರಿ ಗೋಡ್ಸೆ ಅವರಿದ್ದ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತು.

“ವ್ಯಾಪಕ ಹಣ (ಹಗರಣದಲ್ಲಿ) ಸಿಲುಕಿದೆ, ಬ್ಯಾಂಕ್‌ ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟಕ್ಕೂ ಇದು ಸಾರ್ವಜನಿಕ ಹಣ” ಎಂದು ನ್ಯಾಯಾಲಯ ಕುಟುಕಿತು.

Also Read
ಪಿಎನ್‌ಬಿ ಹಗರಣ: ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಆಗ ಪಿಎನ್‌ಬಿ ಪರ ವಕೀಲರು “ಪ್ರಕರಣದಲ್ಲಿ ಆಕ್ಷೇಪ ವ್ಯಕ್ತಪಡಿಸಿರುವ ವಹಿವಾಟುಗಳ ಬಗ್ಗೆ ಬ್ಯಾಂಕ್‌ಗೆ ತಿಳಿದಿರಲಿಲ್ಲ ಅಥವಾ ಅಂತಹ ಸಾಲ ಅನಧಿಕೃತವಾದುದಾಗಿದೆ” ಎಂದು ಪ್ರತಿಕ್ರಿಯಿಸಿದರು. ಈ ಹಂತದಲ್ಲಿ ಪಿಎನ್‌ಬಿ ಮತ್ತು ಜಾರಿ ನಿರ್ದೇಶನಾಲಯ (ಇ ಡಿ) 2 ವಾರದೊಳಗೆ ಪ್ರತಿಕ್ರಿಯೆ ಸಲ್ಲಿಸಲು ಕಾಲಾವಕಾಶ ನೀಡಿದ್ದು 3 ವಾರಗಳ ಬಳಿಕ ಪ್ರಕರಣದ ವಿಚಾರಣೆ ನಡೆಸಲಿದೆ.

ಹಗರಣದ ಆರೋಪಿ ನೀರವ್ ಮೋದಿ ಅವರ ₹ 500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿ  ಜಪ್ತಿ ಮಾಡಿರುವ ಕುರಿತು ಪಿಎನ್‌ಬಿ ಮತ್ತು ಇ ಡಿ ಸಲ್ಲಿಸಿದ ಕ್ರಾಸ್‌ ಕ್ಲೇಮ್‌ಗಳಿಗೆ (ಅರ್ಜಿದಾರರು ಸಹ ಅರ್ಜಿದಾರರ ವಿರುದ್ಧ ಹೂಡುವ ಹಕ್ಕುಸಾಧನೆ) ಸಂಬಂಧಿಸಿದ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

21 ಆಸ್ತಿಗಳ ಪೈಕಿ ₹500 ಕೋಟಿಗೂ ಹೆಚ್ಚು ಮೌಲ್ಯದ 12 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿಗೆ ಅನುಮತಿ ನೀಡಿದ್ದ ಪಿಎಂಎಲ್‌ಎ ನ್ಯಾಯಾಲಯದ 2022ರ ಅಕ್ಟೋಬರ್‌ ಆದೇಶ ಪ್ರಶ್ನಿಸಿ ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು.  

ನೀರವ್‌ ಮೋದಿ ಬ್ಯಾಂಕ್‌ನ ಸಾಲಗಾರನಾಗಿರುವುದರಿಂದ ಆ 12 ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಎಂದು ಆದೇಶದ ವಿರುದ್ಧ ಪಿಎನ್‌ಬಿ  ಮೇಲ್ಮನವಿ ಸಲ್ಲಿಸಿತ್ತು.

ಮತ್ತೊಂದೆಡೆ, ತನಿಖಾ ಸಂಸ್ಥೆಯಾಗಿರುವ ಕಾರಣ ಇನ್ನುಳಿದ 9 ಆಸ್ತಿಗಳ ಮೇಲೆ ತನಗೆ ಹಕ್ಕಿದೆ ಎಂದು ಪಿಎಂಎಲ್‌ಎ ನ್ಯಾಯಾಲಯದ ಆದೇಶದ ವಿರುದ್ಧ ಇ ಡಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

Related Stories

No stories found.
Kannada Bar & Bench
kannada.barandbench.com