ಪಿಎನ್‌ಬಿ ಹಗರಣ: ದೆಹಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಕಾರ

ಬ್ಯಾಂಕ್ ಮತ್ತು ಅದರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
Punjab National Bank
Punjab National Bank
Published on

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಆರ್‌ಬಿಐ 2018ರಲ್ಲಿ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಬ್ಯಾಂಕ್‌ ವಿರುದ್ಧ ತನಿಖೆ ನಡೆಸಲು ಸೂಚಿಸಿದ್ದ ದೆಹಲಿ ಹೈಕೋರ್ಟ್‌ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನಿರಾಕರಿಸಿದೆ. [ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ದೆಹಲಿ ಸರ್ಕಾರದ ನಡುವಣ ಪ್ರಕರಣ].

ಬ್ಯಾಂಕ್ ಮತ್ತು ಅದರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ ವಜಾಗೊಳಿಸಿತು. ಆದರೆ ಕಾನೂನಿನ ಪ್ರಕಾರ ಲಭ್ಯ ಇರುವ ಉಳಿದ ಪರಿಹಾರಗಳನ್ನು ಪಡೆಯಲು ಅದು ವ್ಯಾಜ್ಯವನ್ನು ಮುಕ್ತವಾಗಿರಿಸಿತು.

Also Read
[ಪಿಎನ್‌ಬಿ ವಂಚನೆ ಪ್ರಕರಣ] ಮೆಹುಲ್‌ ಚೋಕ್ಸಿಗೆ ವೈದ್ಯಕೀಯ ಜಾಮೀನು ನೀಡಿದ ಪೂರ್ವ ಕೆರೆಬಿಯನ್‌ ಸುಪ್ರೀಂ ಕೋರ್ಟ್‌

ಆರ್‌ಬಿಐಗೆ ಜನವರಿ 2018ರಲ್ಲಿ ವಿವಿಧ ವಂಚನೆ ನಿಗಾ ವರದಿಗಳು (ಎಫ್‌ಎಂಆರ್‌) ಬಂದವು. ಆಗ ಸಿಬಿಎಸ್‌ಗೆ (ಕೋರ್‌ ಬ್ಯಾಂಕಿಂಗ್‌ ವ್ಯವಸ್ಥೆ) ಸಂಬಂಧಿಸಿದ ತನ್ನೆಲ್ಲಾ ಅಪ್ಲಿಕೇಷನ್‌ಗಳನ್ನು ಎಸ್‌ಟಿಪಿ (ಸ್ಟ್ರೈಟ್‌ ಥ್ರೂ ಪ್ರೋಸೆಸಿಂಗ್‌) ಮೂಲಕ ಸಂಯೋಜಿಸಿರುವುದಾಗಿ ಪಿಎನ್‌ಬಿ ಸುಳ್ಳು ಹೇಳಿರುವುದು ತಿಳಿದು ಬಂದಿತ್ತು. ಎಫ್‌ಎಂಆರ್‌ಗಳ ಪ್ರಕಾರ ₹13,000 ಕೋಟಿಯ ಹಗರಣ ಕುರಿತಾದ ಸಿಬಿಎಸ್‌ ಅನ್ನು ಬ್ಯಾಂಕ್‌ ಎಸ್‌ಟಿಪಿ ಮೂಲಕ ಸ್ವಿಫ್ಟ್‌ನೊಂದಿಗೆ ಸೇರಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕ್‌ಗೆ ಶೋಕಾಸ್‌ ನೋಟಿಸ್‌ ನೀಡಿತ್ತು ಬಳಿಕ ಬ್ಯಾಂಕ್‌ ವಿರುದ್ಧ ತನಿಖೆಗೆ ಅನುಮತಿ ಕೋರಿ ಪಟಿಯಾಲ ಹೌಸ್ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತು.  ಶೋಕಾಸ್ ನೋಟಿಸ್‌ಗೆ ಸಂಬಂಧಿಸಿದ ವಿಚಾರಣೆಯ ನಂತರ, ಡಿಸೆಂಬರ್ 2018ರಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರ ಸಮಿತಿಯು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆಯ ಸೆಕ್ಷನ್ 47 ಎ ಅಡಿಯಲ್ಲಿ ಪಿಎನ್‌ಬಿಗೆ ₹ 2 ಕೋಟಿ ದಂಡ ವಿಧಿಸಿತು.

Also Read
ಪಿಎನ್‌ಬಿ ಹಗರಣ: ಭಾರತಕ್ಕೆ ಹಸ್ತಾಂತರ ಪ್ರಶ್ನಿಸಿ ಮೋದಿ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿದ ಇಂಗ್ಲೆಂಡ್‌ ಹೈಕೋರ್ಟ್‌

ಆರ್‌ಬಿಐ ಸಲ್ಲಿಸಿದ್ದ ಕ್ರಿಮಿನಲ್ ದೂರಿನಲ್ಲಿ ಹೆಸರಿಸಲಾದ ಪಿಎನ್‌ಬಿ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿ ಮಾರ್ಚ್ 11, 2019 ರಂದು, ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಮನ್ಸ್ ನೀಡಿತು.

ಕಳೆದ ವರ್ಷ ಜೂನ್‌ನಲ್ಲಿ, ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಪಿಎನ್‌ಬಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸಿತು. ನಂತರ ಬ್ಯಾಂಕ್ ದೆಹಲಿ ಹೈಕೋರ್ಟ್‌ನ ಈ  ಆದೇಶ ಪ್ರಶ್ನಿಸಿ ಈಗಿನ ವಿಶೇಷ ಅನುಮತಿ ಅರ್ಜಿಯನ್ನು (ಎಸ್‌ಎಲ್‌ಪಿ)  ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು.

Kannada Bar & Bench
kannada.barandbench.com