[ಪೊಕ್ಸೊ] ಸಂತ್ರಸ್ತೆಯ ವೈದ್ಯಕೀಯ ವರದಿ ಇಲ್ಲದಿದ್ದರೆ ತೀರ್ಪು ಅತ್ಯಾಚಾರ ಆರೋಪಿಗಳ ಪರವಾಗಲಿದೆ: ಕಲ್ಕತ್ತಾ ಹೈಕೋರ್ಟ್

ಯುವಕನಾಗಿರುವ ಆರೋಪಿ ವಿರುದ್ಧ ಕ್ರಿಮಿನಲ್ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಬೇರೆ ಅಪರಾಧಿಗಳೊಂದಿಗೆ ಆತನಿಗೆ ಸೆರೆವಾಸ ವಿಧಿಸುವುದು ಯುವಕನನ್ನು ಕಠೋರ ಅಪರಾಧಿಯನ್ನಾಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.
[ಪೊಕ್ಸೊ] ಸಂತ್ರಸ್ತೆಯ ವೈದ್ಯಕೀಯ ವರದಿ ಇಲ್ಲದಿದ್ದರೆ ತೀರ್ಪು ಅತ್ಯಾಚಾರ ಆರೋಪಿಗಳ ಪರವಾಗಲಿದೆ: ಕಲ್ಕತ್ತಾ ಹೈಕೋರ್ಟ್

ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ವರದಿ ಇಲ್ಲದ ಕಾರಣ ಪೊಕ್ಸೊ ಕಾಯಿದೆ ಅಡಿಯಲ್ಲಿ ಆರೋಪ ಎದುರಿಸುತ್ತಿದ್ದ ಯುವಕನೊಬ್ಬನ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್‌ ಇತ್ತೀಚೆಗೆ ಕೈಬಿಟ್ಟಿದೆ [ಸುಬ್ರತಾ ಪ್ರಧಾನ್‌ ಮತ್ತು ಪ. ಬಂಗಾಳ ಸರ್ಕಾರ ನಡುವಣ ಪ್ರಕರಣ].

ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಂತ್ರಸ್ತೆ ನಿರಾಕರಿಸಿರುವುದರಿಂದ ತೀರ್ಪನ್ನು ಆರೋಪಿಯ ಪರ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಬಿಬೇಕ್ ಚೌಧರಿ ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.

13 ವರ್ಷದ ಬಾಲಕಿಯ ಮೇಲೆ ಆರೋಪಿ ಸುಬ್ರತಾ ಪ್ರಧಾನ್‌ನಂತಹ ವಯಸ್ಕ ವ್ಯಕ್ತಿ ಅತ್ಯಾಚಾರ ಎಸಗಿದ್ದರೆ ಆಕೆಯ ಖಾಸಗಿ ಅಂಗದ ಮೇಲೆ ಹಿಂಸೆ ಮಾಡಿದ ಗುರುತು ಅಥವಾ ಗಾಯ ಇರಬೇಕು. ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯ ಸಮಯದಲ್ಲಿ ಗಾಯದ ಗುರುತು ಗೋಚರಿಸುತ್ತದೆ. ಹೀಗಾಗಿ ವೈದ್ಯಕೀಯ ವರದಿ ಇಲ್ಲದಿದ್ದಾಗ ಆರೋಪಿ ಪರ ತೀರ್ಪು ನೀಡಬೇಕಾಗಿದ್ದು ಸಂಶಯದ ಲಾಭ ಪಡೆಯಲು ಆತ ಅರ್ಹನಾಗುತ್ತಾನೆ” ಎಂದು ನ್ಯಾಯಾಲಯ ಹೇಳಿದೆ.

ಸಂತ್ರಸ್ತೆಯ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷ್ಯಗಳು ವ್ಯತಿರಿಕ್ತವಾಗಿದ್ದು ಪ್ರಾಸಿಕ್ಯೂಷನ್ ವಾದದಲ್ಲಿ ಲೋಪದೋಷಗಳಿವೆ ಎಂದಿರುವ ಪೀಠ ಯುವಕನಾಗಿರುವ ಆರೋಪಿ ವಿರುದ್ಧ ಕ್ರಿಮಿನಲ್ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಬೇರೆ ಅಪರಾಧಿಗಳೊಂದಿಗೆ ಆತನಿಗೆ ಸೆರೆವಾಸ ವಿಧಿಸುವುದು ಯುವಕನನ್ನು ಕಠೋರ ಅಪರಾಧಿಯನ್ನಾಗಿಸಬಹುದು ಎಂಬುದಾಗಿ ತಿಳಿಸಿದೆ.

ಆದರೆ ಅಪಹರಣದಂತಹ ಕೃತ್ಯ ಸಾಬೀತಾಗಿರುವುದನ್ನು ಗಮನಿಸಿದ ನ್ಯಾಯಾಲಯ ಪ್ರಕರಣವನ್ನು ಸೌಮ್ಯವಾಗಿ ಪರಿಗಣಿಸುತ್ತಲೇ ₹ 10,000 ದಂಡದೊಂದಿಗೆ ಒಂದು ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿತು.

Related Stories

No stories found.
Kannada Bar & Bench
kannada.barandbench.com