[ಸಮ್ಮತಿ ಲೈಂಗಿಕತೆ] ಅಪ್ರಾಪ್ತೆಯರ ಗರ್ಭಪಾತದ ವಿಚಾರದಲ್ಲಿ ಹೆಸರು ಬಹಿರಂಗಕ್ಕೆ ಒತ್ತಾಯಿಸಬೇಕಿಲ್ಲ: ಮದ್ರಾಸ್ ಹೈಕೋರ್ಟ್

ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ತೀರ್ಪು ಉಲ್ಲೇಖಿಸಿ ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಎನ್ ಆನಂದ್ ವೆಂಕಟೇಶ್ ಮತ್ತು ಸುಂದರ್ ಮೋಹನ್ ಅವರಿದ್ದ ವಿಶೇಷ ಪೀಠ ಈ ನಿರ್ದೇಶನ ನೀಡಿದೆ.
Justice N Anand Venkatesh and Justice Sunder Mohan
Justice N Anand Venkatesh and Justice Sunder Mohan

ಸಮ್ಮತಿಯ ಲೈಂಗಿಕ ಚಟುವಟಿಕೆ ಕಾರಣಕ್ಕೆ ಗರ್ಭಿಣಿಯಾಗಿರುವ ತಮಗೆ ಗರ್ಭಪಾತಕ್ಕೆ ಅವಕಾಶ ಮಾಡಿಕೊಡಬೇಕೆಂದು ಅಪ್ರಾಪ್ತೆ ಸಂಪರ್ಕಿಸಿದಾಗ ಆಕೆಯ ಹೆಸರು ಬಹಿರಂಗಪಡಿಸುವಂತೆ ವೈದ್ಯಕೀಯ ವೃತ್ತಿಪರರು ಒತ್ತಾಯಿಸುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.

ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯಲ್ಲಿ ಪ್ರಕರಣಗಳ ವಿಚಾರಣೆಗಾಗಿ ರಚಿಸಲಾಗಿದ್ದ ನ್ಯಾಯಮೂರ್ತಿಗಳಾದ ಎನ್ ಆನಂದ್ ವೆಂಕಟೇಶ್ ಮತ್ತು ಸುಂದರ್ ಮೋಹನ್ ಅವರಿದ್ದ ವಿಶೇಷ ಪೀಠ, ಎಕ್ಸ್‌ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನೀಡಿದ್ದ ತೀರ್ಪನ್ನು ಉಲ್ಲೇಖಿಸಿದೆ. ಗರ್ಭಪಾತಕ್ಕಾಗಿ ತಮ್ಮನ್ನು ಸಂಪರ್ಕಿಸುವ ಅಪ್ರಾಪ್ತ ವಯಸ್ಕರ ಹೆಸರನ್ನು ತಿಳಿಸುವಂತೆ ವೈದ್ಯರು ಒತ್ತಾಯಿಸಬಾರದು ಎಂದು ಸರ್ವೋಚ್ಚ ನ್ಯಾಯಾಲಯ ಆಗ ತೀರ್ಪು ನೀಡಿತ್ತು.

ಕಾನೂನು ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಸಿಲುಕಿಕೊಳ್ಳಲು ಬಯಸುವುದಿಲ್ಲವಾದ್ದರಿಂದ ಕಡ್ಡಾಯವಾಗಿ ಹೆಸರು ತಿಳಿಸುವ ಅವಶ್ಯಕತೆ ಬಗ್ಗೆ ಅಪ್ರಾಪ್ತ ವಯಸ್ಕರು ಮತ್ತು ಅವರ ಪೋಷಕರು ಮುನ್ನೆಚ್ಚರಿಕೆಯಿಂದಿರುತ್ತಾರೆ. ಹೆಸರು ಬಹಿರಂಗಪಡಿಸುವಂತೆ ಒತ್ತಾಯಿಸಿದರೆ ಗರ್ಭಪಾತಕ್ಕಾಗಿ ಅನರ್ಹ ವ್ಯಕ್ತಿ ಅಥವಾ ನಕಲಿ ವೈದ್ಯರನ್ನು ಅವರು ಸಂಪರ್ಕಿಸುವ ಸಾಧ್ಯತೆಗಳಿವೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ವಿವರಿಸಿತ್ತು.    

Also Read
ಅತ್ಯಾಚಾರ ಸಂತ್ರಸ್ತೆಯ ಗರ್ಭಪಾತ: ವಿಶೇಷ ವಿಚಾರಣೆ ವೇಳೆ ಗುಜರಾತ್ ಹೈಕೋರ್ಟ್ ಧೋರಣೆ ಖಂಡಿಸಿದ ಸುಪ್ರೀಂ ಕೋರ್ಟ್‌

ಆದ್ದರಿಂದ, ನ್ಯಾಯಮೂರ್ತಿಗಳಾದ ವೆಂಕಟೇಶ್ ಮತ್ತು ಮೋಹನ್ ಅವರಿದ್ದ ಮದ್ರಾಸ್‌ ಹೈಕೋರ್ಟ್‌ ಪೀಠ, ಪ್ರಸ್ತುತ ಪ್ರಕರಣದ ಇತ್ಯರ್ಥ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಕಟ್ಟುನಿಟ್ಟಾಗಿ ಪಾಲಿಸುವುದಕ್ಕಾಗಿ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ರೂಪಿಸುವಂತೆ ರಾಜ್ಯದ ಪ್ರಧಾನ ಮುಖ್ಯ ಕಾರ್ಯದರ್ಶಿ ಅವರಿಗೆ ನಿರ್ದೇಶಿಸಿತು.

ರಾಜ್ಯಾದ್ಯಂತ ನ್ಯಾಯಾಲಯಗಳು ಮತ್ತು ಬಾಲಾಪರಾಧಿ ನ್ಯಾಯ ಮಂಡಳಿಗಳಲ್ಲಿರುವ ಸಮ್ಮತಿಯ ಲೈಂಗಿಕತೆಗೆ ಸಂಬಂಧಿಸಿದ ಅಪ್ರಾಪ್ತ ವಯಸ್ಕರ ವಿರುದ್ಧದ ಬಾಕಿ ಪ್ರಕರಣಗಳ ಸಂಖ್ಯೆಯನ್ನು ತಿಳಿಸುವಂತೆ ಹೈಕೋರ್ಟ್ ತಮಿಳುನಾಡು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಹಿಂದಿನ ವಿಚಾರಣೆ ವೇಳೆ ತಿಳಿಸಿತ್ತು.

ಅಂತಹ 111 ಪ್ರಕರಣಗಳನ್ನು ಗುರುತಿಸಲಾಗಿದೆ ಎಂದು ಡಿಜಿಪಿ ಬುಧವಾರ ನ್ಯಾಯಾಲಯಕ್ಕೆ ತಿಳಿಸಿದರು. ಈ ಪ್ರಕರಣಗಳು ತನಿಖೆಯ ಹಂತದಲ್ಲಿವೆ ಅಥವಾ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಸಿರುವ ಹಂತದಲ್ಲಿವೆ ಮತ್ತು ಸಂಬಂಧಪಟ್ಟ ಅಧಿಕಾರ ವ್ಯಾಪ್ತಿ ಇರುವ ನ್ಯಾಯಾಲಯ ಕೆಲವನ್ನು ಇನ್ನೂ ವಿಚಾರಣೆ ನಡೆಸಬೇಕಿದೆ ಎಂದು ಡಿಜಿಪಿ ವಿವರಿಸಿದರು.

ಇದಕ್ಕೆ ನ್ಯಾಯಾಲಯವು ರದ್ದುಪಡಿಸಲು ಅರ್ಹವಾಗಿರುವ ಇಂತಹ ಪ್ರಕರಣಗಳಲ್ಲಿ ಪೊಲೀಸ್‌ ಅಧಿಕಾರಿಗಳು ಸಂಬಂಧಪಟ್ಟ ಅಪ್ರಾಪ್ತೆಯರ ಪೋಷಕರೊಂದಿಗೆ ಸಂಪರ್ಕ ಹೊಂದಲಿದ್ದು, ಪ್ರಕರಣಗಳನ್ನು ರದ್ದುಪಡಿಸಲು ಪೋಷಕರು ಸಮ್ಮತಿಸಿದಲ್ಲಿ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದಿದೆ.

Related Stories

No stories found.
Kannada Bar & Bench
kannada.barandbench.com