

ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯು ಬೇರೊಬ್ಬರನ್ನು ಮದುವೆಯಾಗಿದ್ದಾರೆ ಎಂಬ ಕಾರಣಕ್ಕೆ ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣಾ ಕಾಯಿದೆ (ಪೋಕ್ಸೊ) ಅಡಿಯಲ್ಲಿ ದಾಖಲಾದ ಪ್ರಕರಣ ರದ್ದುಪಡಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಮೌಖಿಕವಾಗಿ ಹೇಳಿದೆ.
ಸಂತ್ರಸ್ತೆ ಬೇರೊಬ್ಬನನ್ನು ಮದುವೆಯಾಗಿದ್ದಾರೆ ಮತ್ತು ಪ್ರಕರಣದ ಸಹ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂಬ ಕಾರಣಕ್ಕೆ ಪೋಕ್ಸೊ ಕಾಯಿದೆ ಅಡಿ ತನ್ನ ವಿರುದ್ಧದ ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸಬೇಕು ಎಂದು ಕೋರಿ ದೇವನಹಳ್ಳಿ ತಾಲ್ಲೂಕಿನ ನಿವಾಸಿ ಪಾಲಾಕ್ಷ ಕುಮಾರ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ಪೀಠವು “ಅರ್ಜಿದಾರ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದಾನೆ. ಪ್ರಕರಣದ ಇತರೆ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂದರೆ, ಆ ಆದೇಶ ಅರ್ಜಿದಾರನಿಗೆ ಹೇಗೆ ಅನ್ಬಯಿಸುತ್ತದೆ?” ಎಂದು ಪ್ರಶ್ನಿಸಿತು.
ಅರ್ಜಿದಾರನ ಪರ ವಕೀಲರು “ಸಂತ್ರಸ್ತೆ ಸಂಧಾನ ಮೂಲಕ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸಿದ್ಧರಿದ್ದಾರೆ” ಎಂದು ಹೇಳಿದರು.
ಇದಕ್ಕೆ ಪೀಠವು “ಸಂತ್ರಸ್ತೆ ಅರ್ಜಿದಾರನನ್ನು ಮದುವೆಯಾಗಿದ್ದಾರೆಯೇ? ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾದರೆ ಅರ್ಜಿದಾರನ ಮೇಲಿನ ಆರೋಪ ಹೇಗೆ ಅಳಿಸಿ ಹೋಗುತ್ತದೆ?” ಎಂದು ಪ್ರಶ್ನಿಸಿತು.
“ಅರ್ಜಿದಾರ ಮೊದಲನೆ ಆರೋಪಿಯಾಗಿದ್ದಾನೆ. ಆತನ ಮೇಲೆ ಪೋಕ್ಸೊ ಕಾಯಿದೆಯ ಸೆಕ್ಷನ್ 3 ಮತ್ತು 4 ಅಡಿಯ ಲೈಂಗಿಕ ದೌರ್ಜನ್ಯ ಅಪರಾಧದ ಆರೋಪಗಳಿವೆ. ಪ್ರಕರಣದಲ್ಲಿ ಆರೋಪಿಗಳು ಖುಲಾಸೆಯಾಗಿದ್ದಾರೆ ಎಂದು ಅರ್ಜಿದಾರ ಖುಲಾಸೆಯಾಗಲ್ಲ. ವಿಚಾರಣಾಧೀನ ನ್ಯಾಯಾಲಯದ ಮುಂದೆ ಹೋಗಿ, ವಿಚಾರಣೆ ಎದುರಿಸಿ” ಎಂದು ನ್ಯಾಯಾಲಯ ತಾಕೀತು ಮಾಡಿತು.
ಅದಕ್ಕೆ ಸಂತ್ರಸ್ತೆ ಮದುವೆಯಾಗಿದ್ದಾರೆ ಎಂದು ವಾದ ಮಂಡಿಸಲು ಆರಂಭಿಸಿದ ಅರ್ಜಿದಾರ ಪರ ವಕೀಲರನ್ನು ತಡೆದ ಪೀಠವು “ಸಂತ್ರಸ್ತೆ ಬೇರೊಬ್ಬರನ್ನು ಮದುವೆಯಾಗಿದ್ದಾರೆ. ಅಂದ ಮಾತ್ರಕ್ಕೆ ಅರ್ಜಿದಾರರ ಮೇಲಿನ ಅಪರಾಧಗಳು ಅಳಿಸಿ ಹೋಗುವುದಿಲ್ಲ. ಅಪ್ತಾಪ್ತೆ ಮೇಲಿನ ಅತ್ಯಾಚಾರ ಪ್ರಕರಣ ರದ್ದಾಗುವುದಿಲ್ಲ. ಪ್ರಕರಣವನ್ನು ರಾಜೀ ಮಾಡಲಾಗದು. ಅರ್ಜಿಯನ್ನು ವಜಾಗೊಳಿಸಲಾಗುವುದು. ಯಾವುದೇ ಕಾರಣಕ್ಕೂ ಅರ್ಜಿದಾರ ವಿರುದ್ಧದ ಪ್ರಕರಣ ರದ್ದುಪಡಿಸಲಾಗದು” ಎಂದು ಸ್ಪಷ್ಟವಾಗಿ ನುಡಿದು ಆದೇಶ ಬರೆಯಿಸಲು ಪೀಠ ಮುಂದಾಯಿತು.
ಆಗ ಅರ್ಜಿದಾರರ ಪರ ವಕೀಲರು ಅರ್ಜಿ ಹಿಂಪಡೆಯಲು ಅನುಮತಿಸಬೇಕು ಎಂದು ಪೀಠವನ್ನು ಕೋರಿದರು. ಇದಕ್ಕೆ ನ್ಯಾಯಾಲಯ ಅನುಮತಿಸಿತು.