ಪೋಕ್ಸೊ ಪ್ರಕರಣ: ಮೂರನೇ ಆರೋಪಿ ಬಸವಾದಿತ್ಯ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿದ ಚಿತ್ರದುರ್ಗದ ವಿಶೇಷ ನ್ಯಾಯಾಲಯ

ಮಕ್ಕಳ ತಂದೆ-ತಾಯಿಯನ್ನು ಪತ್ತೆ ಹಚ್ಚಬೇಕಿದೆ ಎಂದು ಉಲ್ಲೇಖಿಸಲಾಗಿದೆ. ಮಕ್ಕಳ ತಂದೆ-ತಾಯಿ ಅವರನ್ನು ಹುಡುಕಿಲ್ಲ. ಹಾಗಾದರೆ, ಮಕ್ಕಳು ಯಾರ ವಶದಲ್ಲಿದ್ದರು. ಇದನ್ನು ಭೇದಿಸಿದರೆ ಸತ್ಯ ಬಯಲಾಗಲಿದೆ ಎಂದು ವಾದಿಸಿದ ಸಿ ಎಚ್‌ ಹನುಮಂತರಾಯ.
Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru
Published on

ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಕಿರಿಯ ಸ್ವಾಮೀಜಿ ಬಸವಾದಿತ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ಜಿಲ್ಲಾ ನ್ಯಾಯಾಲಯವು ಗುರುವಾರ ವಜಾ ಮಾಡಿದೆ.

ಸಿಆರ್‌ಪಿಸಿ ಸೆಕ್ಷನ್‌ 438ರ ಅಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ವಿಶೇಷ ನ್ಯಾಯಾಧೀಶರಾದ ಬಿ ಕೆ ಕೋಮಲಾ ಅವರು ಆದೇಶ ಮಾಡಿದ್ದಾರೆ.

ಬಾಲ ನ್ಯಾಯ ಕಾಯಿದೆ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್‌ 12(3)(ಎ) ಅಡಿ ಅರ್ಜಿದಾರರು ಎಸ್‌ಎಸ್‌ಎಲ್‌ಸಿ ಅಂಕ ಪಟ್ಟಿ ಮತ್ತು ಆಧಾರ್‌ ಕಾರ್ಡ್‌ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಾಲಾಪರಾಧಿ ಎಂದು ಊಹಿಸದರೂ ಪೋಕ್ಸೊ ಕಾಯಿದೆ ಸೆಕ್ಷನ್‌ 34ರ ಅಡಿ ನ್ಯಾಯಾಲಯವು ಅರ್ಜಿದಾರರ ವಯಸ್ಸನ್ನು ಘೋಷಿಸಲಾಗದು. ಇದನ್ನು ನಿರಾಕರಿಸಬಹುದಾದ ಊಹೆ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಆರೋಪಿಯು ಬಾಲಾಪರಾಧಿ ಅಥವಾ ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಗು (ಚೈಲ್ಡ್‌ ಇನ್‌ ಕಾನ್‌ಫ್ಲಿಕ್ಟ್‌ ವಿತ್‌ ಲಾ) ಎಂದು ಪರಿಗಣಿಸಿದರೂ ಸಿಆರ್‌ಪಿಸಿ ಸೆಕ್ಷನ್ 438ರ ಅಡಿಯಲ್ಲಿ ಅರ್ಜಿ ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ʼಮಕ್ಕಳ ತಲೆಕೆಡಿಸಿ, ಸುಳ್ಳು ದೂರು ದಾಖಲುʼ

ನಾಲ್ಕನೇ ಆರೋಪಿ ಪರಮಶಿವಯ್ಯ ಮತ್ತು ಐದನೇ ಆರೋಪಿ ಎನ್‌ ಗಂಗಾಧರ ಅವರ ಪರವಾಗಿ ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ವಿವಿಧ ದಾಖಲೆಗಳನ್ನು ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹಿರಿಯ ವಕೀಲರಾದ ಸಿ ಎಚ್‌ ಹನುಮಂತರಾಯ ಅವರು ಇಂದು ವಾದ ಮಂಡಿಸಿದರು.

“ಅಪ್ರಾಪ್ತ ಹೆಣ್ಣು ಮಕ್ಕಳು ಬೆಂಗಳೂರಿನ ಕಾಟನ್‌ ಪೇಟೆ ಠಾಣೆಗೆ ಭೇಟಿ ನೀಡಿದರೂ ಏತಕ್ಕಾಗಿ ಎಫ್‌ಐಆರ್‌ ದಾಖಲಿಸಲಿಲ್ಲ. ಮಕ್ಕಳು ಒಂದು ತಿಂಗಳ ಕಾಲ ಎಲ್ಲಿ ಹೋಗಿದ್ದರು. ಜುಲೈ 24-25ರ ಮಧ್ಯರಾತ್ರಿಯಲ್ಲಿ ಮಕ್ಕಳು ಕಾಟನ್‌ ಪೇಟೆ ಪೊಲೀಸ್‌ ಠಾಣೆಗೆ ಹೋಗಿರುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿನ ಪೊಲೀಸರ ಕರೆಯ ಹಿನ್ನೆಲೆಯಲ್ಲಿ ಮಠದ ಹಿಂದಿನ ಕಾರ್ಯದರ್ಶಿ ಎಸ್‌ ಕೆ ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಅಲ್ಲಿಗೆ ತೆರಳಿ ಆ ಮಕ್ಕಳನ್ನು ವಾಪಸ್‌ ಕರೆದುಕೊಂಡು ಬರುತ್ತಾರೆ. ಅಲ್ಲಿಂದ ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಆಗಸ್ಟ್‌ 26ರ ವರೆಗೆ ದೂರು ದಾಖಲಿಸುವವರೆಗೆ ಮಕ್ಕಳು ಎಲ್ಲಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಈ ಸಂದರ್ಭದಲ್ಲಿ ಮಕ್ಕಳ ತಲೆಕೆಡಿಸಿ, ಸುಳ್ಳು ದೂರು ಕೊಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾಟನ್‌ ಪೇಟೆ ಠಾಣೆಯ ಡೈರಿಯ ದಾಖಲೆಯು ನ್ಯಾಯಾಲಯಕ್ಕೆ ಸಲ್ಲಿಕೆಯಾಗಬೇಕು. ಇದು ಪ್ರಕರಣದ ಕೇಂದ್ರಬಿಂದುವಾಗಿದೆ. ಯಾವ ಕಾರಣಕ್ಕಾಗಿ, ಯಾರು ಮಕ್ಕಳನ್ನು ಅಡಗಿಸಿ ಇಟ್ಟಿದ್ದರು. ಈ ಎಲ್ಲಾ ಚಿತ್ರಣವು ನ್ಯಾಯಾಲಯದ ಮುಂದೆ ಬಂದರೆ ಸತ್ಯವನ್ನು ಹುಡುಕಬಹುದಾಗಿದೆ. ಹೀಗಾಗಿ, ಸಿಆರ್‌ಪಿಸಿ ಸೆಕ್ಷನ್‌ 91ರ ಅಡಿ ಅರ್ಜಿ ಹಾಕಲಾಗಿದೆ” ಎಂದು ಪೀಠಕ್ಕೆ ವಿವರಿಸಿದರು.

C H Hanumantharaya, Sr. Counsel
C H Hanumantharaya, Sr. Counsel

ಮುಂದುವರಿದು, “ಪ್ರಾಸಿಕ್ಯೂಷನ್‌ ಎಲ್ಲಿಯೂ ಮಕ್ಕಳು ಕಾಟನ್‌ ಪೇಟೆ ಠಾಣೆಗೆ ಹೋಗಿಲ್ಲ ಎಂದು ಹೇಳಿಲ್ಲ. ಕಾಟನ್‌ ಪೇಟೆ ಠಾಣೆಗೆ ಮಕ್ಕಳು ಹೋದ ನಂತರ ಅಲ್ಲಿನ ಪೊಲೀಸರು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಸೆಕ್ಷನ್‌ 32 ಅಡಿ ಯಾವ ಕ್ರಮ ಜರುಗಿಸಿದ್ದಾರೆ. ಇಂದಿನವರೆಗೂ ಮಕ್ಕಳ ತಂದೆ-ತಾಯಿಯನ್ನು ಪತ್ತೆ ಹಚ್ಚಬೇಕಿದೆ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಮಕ್ಕಳ ತಂದೆ-ತಾಯಿ ಅವರನ್ನು ಹುಡುಕಿಲ್ಲ. ಹಾಗಾದರೆ, ಮಕ್ಕಳು ಯಾರ ವಶದಲ್ಲಿದ್ದರು. ಇದನ್ನು ಭೇದಿಸಿದರೆ ಸತ್ಯ ಬಯಲಾಗಲಿದೆ. ಈ ಅಂಶಗಳು ನ್ಯಾಯಾಲಯದ ಮುಂದೆ ಬರದಿದ್ದರೆ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ವಾದ ಮಂಡಿಸಲಾಗದು. ಇವು ಮೂಲಭೂತ ದಾಖಲೆಗಳಾಗಿವೆ” ಎಂದು ವಿವರಿಸಿದರು.

“ಜುಲೈ 24-25ರ ಮಧ್ಯರಾತ್ರಿ ಎಸ್‌ ಕೆ ಬಸವರಾಜನ್‌ ಮತ್ತು ಸೌಭಾಗ್ಯ ಅವರನ್ನು ಸಂಪರ್ಕಿಸಿದ ಕಾಟನ್‌ ಪೇಟೆ ಠಾಣೆಯ ಪೊಲೀಸ್‌ ಅಧಿಕಾರಿಯ ಕರೆ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಮಾರ್ಚ್‌ 7ರಂದು ಬಸವರಾಜನ್‌ ಅವರು ಮಠಕ್ಕೆ ಕಾರ್ಯದರ್ಶಿಯಾಗಿ ಮತ್ತೆ ನೇಮಕವಾಗಿದ್ದರು. ಅಲ್ಲಿಂದ ಬಸವರಾಜನ್‌ ಅವರು ಹಾಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೆಲ್ಲರನ್ನೂ ಸಂಪರ್ಕಿಸಿದ್ದಾರೆ. ಇದಕ್ಕೆ ಈ ರೀತಿಯ ರೂಪ ನೀಡಿದ್ದೇಕೆ ಎಂಬ ವಿಚಾರ ಪೀಠದ ಮುಂದೆ ಬರಬೇಕು. ಇದೆಲ್ಲವನ್ನೂ ನ್ಯಾಯಾಲಯದ ಮುಂದೆ ತರದೇ ಆರೋಪಿಗಳು ಪ್ರತಿಷ್ಠಿತ ಮಠಕ್ಕೆ ಸೇರಿದವರು ಎಂಬ ಪೂರ್ವಾಗ್ರಹದಿಂದ ತನಿಖೆ ನಡೆಸಿದರೆ ಅರ್ಜಿದಾರರಿಗೆ ಅನ್ಯಾಯವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.

“ಒಂದನೇ ಆರೋಪಿ ಡಾ. ಶಿವಮೂರ್ತಿ ಮುರುಘಾ ಶರಣರು ವಿದೇಶ ಪ್ರವಾಸದಲ್ಲಿದ್ದಾಗ ಮಠದ ಆಗು-ಹೋಗುಗಳನ್ನು ಅರಿತುಕೊಂಡು ಈ ರೀತಿಯ ಷಡ್ಯಂತ್ರ ರೂಪಿಸಲಾಗಿದೆ. ಇದನ್ನು ತನಿಖಾಧಿಕಾರಿಗಳು ಭೇದಿಸದೇ, ಮಾಧ್ಯಮ ವರದಿಗಳನ್ನು ಆಧರಿಸಿ, ಪ್ರಕರಣ ಸೃಷ್ಟಿಸಲಾಗಿದೆ. ಕಾಟನ್‌ ಪೇಟೆ ಠಾಣೆಯಲ್ಲಿ ವರದಿಯಾಗಿರುವುದೇ ಎಫ್‌ಐಆರ್‌. ಒಡನಾಡಿಯವರು ನಜರಾಬಾದ್‌ನಲ್ಲಿ ನೀಡಿದ್ದು, ಮೇಲ್ನೋಟಕ್ಕೆ ಎಫ್‌ಐಆರ್‌ ಆಗುವುದಿಲ್ಲ. ಹೀಗಾಗಿ, ನಾವು ಕೋರಿರುವ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು” ಎಂದು ಕೋರಿದರು.

ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದ್ದು, ಅಂದು ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ ಬಿ ನಾಗವೇಣಿ ಅವರು ವಾದ ಮಂಡಿಸಲಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ಕೆ ಬಿ ಕೆ ಸ್ವಾಮಿ ಅವರು ಹಾಜರಿದ್ದರು.

Kannada Bar & Bench
kannada.barandbench.com