ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯ ಮುಂಡರಗಿಯ ಶಂಕರಪ್ಪ ಎಂಬುವರಿಗೆ ವಿಧಿಸಿದ್ದ ಏಳು ವರ್ಷಗಳ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಈಚೆಗೆ 10 ವರ್ಷಕ್ಕೆ ಹೆಚ್ಚಿಸಿದೆ.
2018ರ ಮಾರ್ಚ್‌ನಲ್ಲಿ ವಿಚಾರಣಾಧೀನ ನ್ಯಾಯಾಲಯ ವಿಧಿಸಿರುವ ಶಿಕ್ಷೆ ಹೆಚ್ಚಳ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಚ್ ಟಿ ನರೇಂದ್ರ ಪ್ರಸಾದ್ ಮತ್ತು ರಾಜೇಂದ್ರ ಬದಾಮಿಕರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯಿದೆಯ (ಪೋಕ್ಸೊ) ನಾನಾ ಸೆಕ್ಷನ್‌ಗಳಡಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅದರಡಿ ಉಲ್ಲೇಖವಾಗಿರುವ 10 ವರ್ಷಗಳ ಶಿಕ್ಷೆಯನ್ನೇ ವಿಧಿಸಬೇಕಾಗುತ್ತದೆ ಎಂದು ಪೀಠ ಹೇಳಿದೆ.
ಪೋಕ್ಸೊ ಕಾಯಿದೆ ಸೆಕ್ಷನ್ 42ಎ ಪ್ರಕಾರ ಯಾವುದೇ ಕಾನೂನು ಅದಕ್ಕಿಂತ ಮೇಲಲ್ಲ. ಹಾಗೊಂದು ವೇಳೆ ಗೊಂದಲವಿದ್ದರೆ ಅಂತಹ ಸಂದರ್ಭಗಳಲ್ಲಿ ಪೋಕ್ಸೊ ಕಾಯಿದೆ ಬೇರೆಲ್ಲಾ ಕಾಯಿದೆಗಳನ್ನು ಬದಿಗೊತ್ತಲಿದೆ. ಈ ಪ್ರಕರಣದಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್ 6 ಮತ್ತು ಸೆಕ್ಷನ್ 376(2)(1) ಅನ್ವಯ 10 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ವಿಚಾರಣಾಧೀನ ನ್ಯಾಯಾಲಯ ಪೋಕ್ಸೊ ಕಾಯಿದೆ ಸೆಕ್ಷನ್ 42ರ ಅನ್ವಯ, 7 ವರ್ಷ ಶಿಕ್ಷೆ ವಿಧಿಸಿರುವುದು ಸರಿಯಲ್ಲ. ಇದು ನಿಯಮಕ್ಕೆ ವಿರುದ್ಧವಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಸಂತ್ರಸ್ತೆ ಅಪ್ರಾಪ್ತೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆಕೆ ಎರಡು ತಿಂಗಳು ಲೈಂಗಿಕ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ವೈದ್ಯಕೀಯ ಪರೀಕ್ಷೆಯಲ್ಲೂ ಅದು ದೃಢಪಟ್ಟಿದೆ. ಹಾಗಾಗಿ, ಆ ಕೃತ್ಯವನ್ನು ಪೋಕ್ಸೊ ಕಾಯಿದೆ ಸೆಕ್ಷನ್ 6ರಡಿ ಪರಿಗಣಿಸಬೇಕು ಮತ್ತು ಅದರಡಿ ಕನಿಷ್ಠ 10 ವರ್ಷಗಳ ಶಿಕ್ಷೆ ಇದೆ. ವಿಚಾರಣಾ ನ್ಯಾಯಾಲಯ ಆ ಶಿಕ್ಷೆಯನ್ನೇ ವಿಧಿಸಬೇಕಿತ್ತು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆ ಮುಂಡಗರಿಯಲ್ಲಿ ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿದ್ದರು. ಆಗ ಆರೋಪಿ ಶಂಕರ್ ಅಲಿಯಾಸ್ ಶಂಕರಪ್ಪ ಕಾರಿನಲ್ಲಿ ಸಂತ್ರಸ್ತೆಯನ್ನು ಅಪಹರಿಸಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಸವದಿಯ ತನ್ನ ಸಹೋದರಿ ಮನೆಗೆ ಕರೆದೊಯ್ದು ಆಕೆಯನ್ನು ತನ್ನ ಪತ್ನಿ ಎಂದು ಪರಿಚಯಿಸಿದ್ದನು. ಬಳಿಕ ಆಕೆಯನ್ನು ಕೊಪ್ಪಳಕ್ಕೆ ಕರೆದೊಯ್ದು ಬಾಡಿಗೆ ಮನೆಯಲ್ಲಿಟ್ಟು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು.
ಹೀಗಾಗಿ, ಆರೋಪಿ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್ 4 ಮತ್ತು 5 ಮತ್ತು ಐಪಿಸಿ ಸೆಕ್ಷನ್ 363, 342, 343, 376(1) ಹಾಗೂ 506ರಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.