
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಲಾದರೂ ಅನುಮತಿಸಬೇಕು ಎಂದು ಪ್ರಾಸಿಕ್ಯೂಷನ್ ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಕೋರಿತು. ಅಂತಿಮವಾಗಿ ಅರ್ಜಿಯ ವಿಚಾರಣೆಯನ್ನು ಸೋಮವಾರ ಪೂರ್ಣಗೊಳಿಸುವುದಾಗಿ ತಿಳಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆ ಮುಂದೂಡಿತು.
ಪೋಕ್ಸೊ ಪ್ರಕರಣ ರದ್ದತಿ ಮತ್ತು ಅದರಲ್ಲಿ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಯಡಿಯೂರಪ್ಪ ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಿರುವುದರಿಂದ ಇಡೀ ಪ್ರಕ್ರಿಯೆ ಸ್ಥಬ್ಧವಾಗಿದೆ. ಪೋಕ್ಸೊ ಕಾಯಿದೆಯ ಸೆಕ್ಷನ್ 35ರ ಪ್ರಕಾರ ವಿಚಾರಣೆ 6 ತಿಂಗಳಿಂದ ಒಂದು ವರ್ಷದಲ್ಲಿ ಮುಗಿಯಬೇಕು. ಅದರ ಜೊತೆಗೆ ವಿಚಾರಣಾಧೀನ ನ್ಯಾಯಾಲಯವು ಆರೋಪ ಪಟ್ಟಿಯ ಸಂಜ್ಞೇ ಪರಿಗಣಿಸಿದ ತಿಂಗಳಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಬೇಕು” ಎಂದರು.
ಇದಕ್ಕೆ ಪೀಠವು “ಸಂತ್ರಸ್ತ ಮಗುವಿಗೆ ಎಷ್ಟು ವಯಸ್ಸಾಗಿದೆ” ಎಂದಿತು. ಪ್ರಾಸಿಕ್ಯೂಷನ್ ಪರ ವಕೀಲರು “ಮಗುವಿಗೆ 17 ವರ್ಷ, ಎರಡು ತಿಂಗಳಾಗಿದೆ. ಕನಿಷ್ಠ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲು ಅನುಮತಿಸಬೇಕು. ಸಂಜ್ಞೇ ಸ್ವೀಕರಿಸಿಯೇ ಆರು ತಿಂಗಳಾಗಿದೆ” ಎಂದರು.
ಈ ನಡುವೆ ಬಿಎಸ್‌ವೈ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು “ಶುಕ್ರವಾರ ಅಥವಾ ಸೋಮವಾರ ಒಂದೇ ಬಾರಿಗೆ ಮಧ್ಯಂತರ ಅರ್ಜಿಗಳು ಸೇರಿದಂತೆ ಇಡೀ ಪ್ರಕರಣದ ವಿಚಾರಣೆ ಪೂರ್ಣಗೊಳಿಸಬಹುದು” ಎಂದರು.
ಇದಕ್ಕೆ ಒಪ್ಪಿದ ನ್ಯಾಯಾಲಯವು “ಬಿಎಸ್‌ವೈ ಅವರನ್ನು ಬಂಧಿಸಬಾರದು ಮತ್ತು ವಿಚಾರಣೆಗಾಗಿ ಅವರ ಖುದ್ದು ಹಾಜರಾತಿಗೆ ವಿನಾಯಿತಿ ನೀಡಬೇಕು” ಎಂಬ ಮಧ್ಯಂತರ ಆದೇಶ ವಿಸ್ತರಿಸಿ, ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.