ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಮದುವೆಯಾಗುವಂತೆ ಪೋಕ್ಸೊ ಪ್ರಕರಣದಲ್ಲಿನ ಆರೋಪಿಗೆ ಷರತ್ತು ವಿಧಿಸಿರುವ ಕರ್ನಾಟಕ ಹೈಕೋರ್ಟ್ ಈಚೆಗೆ ಆತನಿಗೆ ಜಾಮೀನು ಮಂಜೂರು ಮಾಡಿದೆ.
ರಾಮನಗರದ 22 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ನಡೆಸಿದ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದೆ.
“ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆರೋಪಿಯು ಆಕೆಯನ್ನು ವಿವಾಹವಾಗಬೇಕು. ವಿವಾಹ ನೋಂದಣಿ ಮಾಡಿಸಿ, ನೋಂದಣಿ ದಾಖಲೆಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು” ಎಂಬ ಷರತ್ತನ್ನು ಪೀಠವು ವಿಧಿಸಿದೆ.
“ಸಂತ್ರಸ್ತೆಯ ತಂದೆಯು ನ್ಯಾಯಾಲಯದ ಮುಂದೆ ಹಾಜರಾಗಿದ್ದು, ಪ್ರಕರಣವು ಸಂಬಂಧಿಕರಿಗೆ ತಿಳಿದಿದೆ. ಸಂತ್ರಸ್ತೆಯನ್ನು ಅರ್ಜಿದಾರ-ಆರೋಪಿ ಜೊತೆ ಮದುವೆ ಮಾಡಿಸುವುದು ಬಿಟ್ಟು ಬೇರೆ ದಾರಿಯಿಲ್ಲ ಎಂದು ಹೇಳಿರುವುದನ್ನು ಪೀಠವು ದಾಖಲಿಸಿಕೊಂಡಿದೆ.
“ಆರೋಪಿಯ ಜೊತೆ ಸಂಬಂಧ ಹೊಂದಿರುವುದಾಗಿ ಸಂತ್ರಸ್ತೆಯು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾಳೆ. ಆಕೆ ಅಪ್ರಾಪ್ತೆಯಾಗಿದ್ದು, ಸ್ವಇಚ್ಛೆಯಿಂದ ದೈಹಿಕ ಸಂಬಂಧ ಬೆಳೆಸಿರುವುದಾಗಿ ತಿಳಿಸಿದ್ದಾಳೆ. ದೈಹಿಕ ಸಂಬಂಧಕ್ಕೆ ಸಂತ್ರಸ್ತೆಯ ಸಮ್ಮತಿ ಇದ್ದರೂ ಆಕೆಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹೇಳಿಕೆಯು ಅಪ್ರಸ್ತುತವಾಗಿದೆ. ಆದರೆ, ಇದೇ ವೇಳೆ ಸಂತ್ರಸ್ತೆಗೆ 17 ವರ್ಷ ವಯಸ್ಸಾಗಿದ್ದು ಆಕೆಗೆ ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದೆ ಎನ್ನುವುದನ್ನು ಅಲ್ಲಗಳೆಯಲಾಗದು. ಸಂತ್ರಸ್ತೆಯು ಪ್ರಾಪ್ತ ವಯಸ್ಸಿಗೆ ಬಂದ ತಕ್ಷಣ ಆಕೆಯನ್ನು ಮದುವೆಯಾಗುವುದಾಗಿ ಆರೋಪಿ ಹೇಳಿದ್ದಾನೆ” ಎಂಬುದನ್ನು ಪೀಠವು ಆದೇಶದಲ್ಲಿ ದಾಖಲಿಸಿದೆ.
ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಕೆ ನಾಗೇಶ್ವರಪ್ಪ ಅವರು “ಆರೋಪಿಯು ಸಂತ್ರಸ್ತೆಯನ್ನು ವಿವಾಹವಾಗಬೇಕು ಎಂಬ ಷರತ್ತು ವಿಧಿಸಬೇಕು. ಇದು ಇಬ್ಬರು ವಿವಾಹ ಬಂಧನಕ್ಕೆ ಒಳಗಾಗುವುದನ್ನು ಕಡ್ಡಾಯಗೊಳಿಸಲಿದೆ” ಎಂದರು.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯ ತಂದೆ ನೀಡಿದ ದೂರು ಆಧರಿಸಿ ರಾಮನಗರದ ಮಹಿಳಾ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 5(ಪಿ)(ಕೆ), (ಜೆ) ಮತ್ತು 6 ಹಾಗೂ ಐಪಿಸಿ ಸೆಕ್ಷನ್ 376(2)(ಐ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಸಂತ್ರಸ್ತೆಗೆ 17 ವರ್ಷ ವಯಸ್ಸಿನ ವಿದ್ಯಾರ್ಥಿನಿಯಾಗಿದ್ದು, ಆರೋಪಿಯ ಸಂಬಂಧಿಯಾಗಿದ್ದಾರೆ. ಕುಟುಂಬದ ಸಮಾರಂಭದಲ್ಲಿ ಇಬ್ಬರ ಭೇಟಿಯಾಗಿದ್ದು, ಇಬ್ಬರು ಒಬ್ಬರನ್ನೊಬ್ಬರು ಇಷ್ಟಪಡಲು ಆರಂಭಿಸಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂದು ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ಮದುವೆಯಾಗುವ ಭರವಸೆಯ ಮೇಲೆ ಆರೋಪಿ ಹಾಗೂ ಸಂತ್ರಸ್ತೆಯು ದೈಹಿಕ ಸಂಬಂಧ ಬೆಳೆಸಿದ್ದರು. ಬಾಲಕಿ ಗರ್ಭಿಣಿಯಾಗಿದ್ದರಿಂದ ಆಕೆಯ ತಂದೆ ದೂರು ದಾಖಲಿಸಿದ್ದರು. ವಿಚಾರಣಾಧೀನ ನ್ಯಾಯಾಲಯವು ಆರೋಪಿಗೆ ಜಾಮೀನು ನಿರಾಕರಿಸಿತ್ತು.