ಪೋಕ್ಸೊ ಪ್ರಕರಣದಲ್ಲಿ ಸಂಧಾನಕ್ಕೆ ಅವಕಾಶವಿದೆಯೇ ಎನ್ನುವುದನ್ನು ಪರಿಶೀಲಿಸಲಿರುವ ಹೈಕೋರ್ಟ್‌

ಅಪ್ರಾಪ್ತ ಬಾಲಕಿಯ ತಂದೆ ಕಾಲೇಜಿಗೆ ತೆರಳಿದ್ದ ಪುತ್ರಿ ಮನೆಗೆ ಮರಳಿಲ್ಲ ಎಂದು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಬಾಲಕ ಮತ್ತು ಸಂತ್ರಸ್ತ ಬಾಲಕಿ ಈ ಇಬ್ಬರ ಫೋನ್‌ ಟ್ರ್ಯಾಕ್‌ ಮಾಡಿದ್ದ ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದರು.
Karnataka HC and POCSO
Karnataka HC and POCSO

ಅಪ್ರಾಪ್ತ ಬಾಲಕಿಯ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ (ಪೋಕ್ಸೊ) ಕಾಯಿದೆ ಅಡಿ ಅಪ್ರಾಪ್ತ ಬಾಲಕನ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಬಾಲಕನ ಪರವಾಗಿ ತಂದೆ ಸಲ್ಲಿಸಿದ್ದ ಕ್ರಿಮಿನಲ್‌ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ನಡೆಸಿತು.

“ಅರ್ಜಿದಾರ ಬಾಲಕ ಮತ್ತು ದೂರದಾರರ ಪುತ್ರಿ ಇಬ್ಬರೂ ಅಪ್ರಾಪ್ತರಾಗಿದ್ದು, ಇಬ್ಬರ ನಡುವೆ ಪ್ರೇಮಾಂಕುರವಾದ ಬಳಿಕ ಪ್ರಕರಣ ದಾಖಲಾಗಿದೆ. ಈಗ ಪಕ್ಷಕಾರರು ಪ್ರಕರಣವನ್ನು ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ನಿರ್ಧರಿಸಿದ್ದು, ಕಾನೂನು ಪ್ರಕ್ರಿಯೆ ಕೈಬಿಡುವಂತೆ ಕೋರಿದ್ದಾರೆ. ಈ ವಿಚಾರವನ್ನು ಪರಿಗಣಿಸುವ ಅವಶ್ಯಕತೆ ಇದ್ದು, ಬೇಸಿಗೆ ರಜೆಯ ಬಳಿಕ ವಿಚಾರಣೆ ನಡೆಸಲಾಗುವುದು. ಹೀಗಾಗಿ, ಮೇ 23ರ ವರೆಗೆ ಪ್ರಕರಣಕ್ಕೆ ತಡೆ ನೀಡಲಾಗಿದ್ದು, ಇದು ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರತೀಕ್‌ ಚಂದ್ರಮೌಳಿ ಅವರು “ಪಕ್ಷಕಾರರು ಪ್ರಕರಣವನ್ನು ಸುಖಾಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಹೀಗಾಗಿ, ತನಿಖಾ ಪ್ರಕ್ರಿಯೆ ಕೈಬಿಡಲು ಆದೇಶಿಸಬೇಕು. ತನಿಖೆಯ ಸಂದರ್ಭದಲ್ಲಿ ನಿರಂತರವಾಗಿ ಕಿರುಕುಳ ನೀಡಲಾಗಿದೆ. ಸಾಂವಿಧಾನಿಕ ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಸಂಧಾನ ಪರಿಗಣಿಸಿ, ತನಿಖಾ ಪ್ರಕ್ರಿಯೆಯನ್ನು ರದ್ದುಪಡಿಸಿವೆ” ಎಂದು ನ್ಯಾಯಾಲಯದ ಗಮನಸೆಳೆದರು.

ಪ್ರಾಸಿಕ್ಯೂಷನ್‌ ಪರ ವಕೀಲರು “ಪೋಕ್ಸೊ ಅಡಿ ಅಪರಾಧ ಪ್ರಕರಣ ಇದಾಗಿದ್ದು, ಇಲ್ಲಿ ಸಂಧಾನಕ್ಕೆ ಅವಕಾಶವಿಲ್ಲ” ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ, ಸದ್ಯಕ್ಕೆ ತನಿಖೆಗೆ ತಡೆ ನೀಡಿರುವ ನ್ಯಾಯಾಲಯವು ಮೇ 24ಕ್ಕೆ ವಿಚಾರಣೆ ಮುಂದೂಡಿದೆ.

ಪ್ರಕರಣದ ಹಿನ್ನೆಲೆ: 2021ರ ನವೆಂಬರ್‌ 21ರಂದು ಅಪ್ರಾಪ್ತ ಬಾಲಕಿಯ ತಂದೆ ಕಾಲೇಜಿಗೆ ತೆರಳಿದ್ದ ಪುತ್ರಿ ಮನೆಗೆ ಮರಳಿಲ್ಲ ಎಂದು ದೂರು ನೀಡಿದ್ದರು. ಇದನ್ನು ಪರಿಗಣಿಸಿ ಆರೋಪಿ ಬಾಲಕ ಮತ್ತು ಸಂತ್ರಸ್ತ ಬಾಲಕಿ ಇಬ್ಬರ ಫೋನ್‌ ಟ್ರ್ಯಾಕ್‌ ಮಾಡಿದ್ದ ಪೊಲೀಸರು ಅವರನ್ನು ಪತ್ತೆ ಹಚ್ಚಿದ್ದರು. ಬಳಿಕ, ಆರೋಪಿ ಬಾಲಕನ ವಿರುದ್ಧ ಪೋಕ್ಸೊ ಕಾಯಿದೆ ಸೆಕ್ಷನ್‌ 5 ಮತ್ತು 6, ಭಾರತೀಯ ದಂಡ ಸಂಹಿತೆ ಸೆಕ್ಷನ್‌ 376, 363 ಅಡಿ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದರು. ಈಗ, ಉಭಯ ಪಕ್ಷಕಾರರು ಪ್ರಕರಣಕ್ಕೆ ಅಂತ್ಯ ಹಾಡಲು ಬಯಸಿದ್ದು, ವಿಚಾರಣೆ ರದ್ದುಪಡಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

Related Stories

No stories found.
Kannada Bar & Bench
kannada.barandbench.com