ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು; ಬಿಡುಗಡೆಗೆ ಕಾನೂನಿನ ತೊಡಕು

ಪ್ರಕರಣದ ವಿಚಾರಣೆ ಮುಗಿಯುವರೆಗೆ ಚಿತ್ರದುರ್ಗ ಜಿಲ್ಲೆ ಪ್ರವೇಶ ಮಾಡಬಾರದು. ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು” ಎಂಬುದು ಸೇರಿ ಏಳು ಷರತ್ತುಗಳನ್ನು ಹೈಕೋರ್ಟ್‌ ವಿಧಿಸಿದೆ.
ಪೋಕ್ಸೊ ಪ್ರಕರಣ: ಶಿವಮೂರ್ತಿ ಮುರುಘಾ ಶರಣರಿಗೆ ಹೈಕೋರ್ಟ್‌ನಿಂದ ಜಾಮೀನು ಮಂಜೂರು; ಬಿಡುಗಡೆಗೆ ಕಾನೂನಿನ ತೊಡಕು
Published on

ಮಠದಲ್ಲಿ ನೆಲೆಸಿದ್ದ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ರಾಜೇಂದ್ರ ಮಠದ ಡಾ.ಶಿವಮೂರ್ತಿ ಶರಣರಿಗೆ ಕರ್ನಾಟಕ ಹೈಕೋರ್ಟ್‌ ಬುಧವಾರ ಜಾಮೀನು ಮಂಜೂರು ಮಾಡಿದೆ. ಆದರೂ ಕಾನೂನಿನ ತೊಡಕಿನ ಹಿನ್ನೆಲೆಯಲ್ಲಿ ಶರಣರು ತಕ್ಷಣಕ್ಕೆ ಬಿಡುಗಡೆಯಾಗುವ ಬಗ್ಗೆ ಸಂದೇಹಗಳಿವೆ.

ಜಾಮೀನು ಕೋರಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ಮತ್ತು ಕ್ರಿಮಿನಲ್‌ ಮೇಲ್ಮನವಿಗಳ ವಿಚಾರಣೆಯನ್ನು ಅಕ್ಟೋಬರ್‌ 31ರಂದು ಪೂರ್ಣಗೊಳಿಸಿ, ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್‌ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಇಂದು ಪ್ರಕಟಿಸಿತು.

“ಪ್ರಕರಣದ ವಿಚಾರಣೆ ಮುಗಿಯುವರೆಗೆ ಚಿತ್ರದುರ್ಗ ಜಿಲ್ಲೆಯ ಪ್ರವೇಶ ಮಾಡಬಾರದು. ಎರಡು ಲಕ್ಷ ರೂಪಾಯಿ ವೈಯಕ್ತಿ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು. ಸಾಕ್ಷಿಗಳಿಗೆ ಬೆದರಿ ಹಾಕುವಂತಿಲ್ಲ. ನ್ಯಾಯಾಲಯದ ವಶಕ್ಕೆ ಪಾಸ್‌ಪೋರ್ಟ್‌ ಸಲ್ಲಿಸಬೇಕು. ವಿಡಿಯೊ ಕಾನ್ಫ್‌ರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು. ಜಾಮೀನು ಮಂಜೂರು ಆದೇಶವನ್ನು ಶರಣರು ದುರ್ಬಳಕೆ ಮಾಡಿಕೊಳ್ಳಬಾರದು. ನ್ಯಾಯಾಲಯ ವಿಧಿಸಿದ ಷರತ್ತು ಉಲ್ಲಂಘಿಸಿದರೆ, ಜಾಮೀನು ತನ್ನಿಂದ ತಾನೇ ರದ್ದಾಗಲಿದೆ” ಎಂಬ ಷರತ್ತುಗಳನ್ನು ವಿಧಿಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಸ್ವಾಮೀಜಿ ಪರ ವಕೀಲರು ಏನಂತಾರೆ?

“ಮುರುಘಾ ಶರಣರ ವಿರುದ್ಧ ಎರಡು ಎಫ್‌ಐಆರ್‌ಗಳು ದಾಖಲಾಗಿವೆ. ಮೊದಲ ಎಫ್‌ಐಆರ್‌ನಲ್ಲಿ ಇಬ್ಬರು ಸಂತ್ರಸ್ತ ಮಕ್ಕಳು ಇದ್ದುದ್ದರಿಂದ ಎರಡು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹೀಗಾಗಿ, ನಾವು ಎರಡು ಜಾಮೀನು ಅರ್ಜಿ ಸಲ್ಲಿಸಿದ್ದೆವು. ಈಗ ಎರಡೂ ಅರ್ಜಿಗಳನ್ನು ಹೈಕೋರ್ಟ್‌ ಪುರಸ್ಕರಿಸಿದೆ. ಎರಡನೇ ಎಫ್‌ಐಆರ್‌ನಲ್ಲಿ ಸ್ವಾಮೀಜಿ ಬಂಧನವಾಗಿಲ್ಲ. ಆ ಪ್ರಕರಣದಲ್ಲಿ ಬಾಡಿ ವಾರೆಂಟ್‌ ಮೂಲಕ ಕಸ್ಟಡಿಗೆ ಪಡೆದು ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಈಗ ಆರೋಪಿ ಯಾವ ಪ್ರಕರಣದಲ್ಲಿ ಕಸ್ಟಡಿಯಲ್ಲಿದ್ದಾರೋ ಆ ಪ್ರಕರಣದಲ್ಲಿ ಜಾಮೀನು ಮಂಜೂರಾದರೆ ಬಿಡುಗಡೆ ಮಾಡಬೇಕು ಎಂದು ಬೇರೆ ಪ್ರಕರಣದಲ್ಲಿ ಹೈಕೋರ್ಟ್‌ ಆದೇಶವಿದೆ. ಈ ಆದೇಶ ಬಹಳ ಮಂದಿಗೆ ತಿಳಿದಿಲ್ಲ. ಮೊದಲ ಪ್ರಕರಣದಲ್ಲಿ ಜಾಮೀನು ಮಂಜೂರಾಗಿದ್ದು, ಎರಡನೇ ಪ್ರಕರಣದಲ್ಲಿ ಜಾಮೀನು ಮಂಜೂರು ಆಗುವವರೆಗೆ ಬಿಡುಗಡೆ ಮಾಡಲಾಗದು ಎಂದು ಸಹಜವಾಗಿ ಹೇಳುತ್ತಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಎರಡೂ ಆದೇಶಗಳನ್ನು ಸಲ್ಲಿಸಲಾಗುವುದು. ಇದಕ್ಕೆ ವಿಚಾರಣಾಧೀನ ನ್ಯಾಯಾಲಯ ಒಪ್ಪಿದರೆ ಸ್ವಾಮೀಜಿ ಬಿಡುಗಡೆಯಾಗುತ್ತಾರೆ. ಇಲ್ಲವಾದಲ್ಲಿ ಎರಡನೇ ಪ್ರಕರಣದಲ್ಲೂ ಹೈಕೋರ್ಟ್‌ ಮೆಟ್ಟಿಲೇರಿ ಜಾಮೀನು ಮಂಜೂರು ಮಾಡಿಸಿಕೊಂಡು ಬಿಡುಗಡೆ ಕೋರಬೇಕಿದೆ” ಎಂದು ಸ್ವಾಮೀಜಿ ಪರ ವಕೀಲ ಸಂದೀಪ್‌ ಪಾಟೀಲ್‌ ಅವರು “ಬಾರ್‌ ಅಂಡ್‌ ಬೆಂಚ್‌”ಗೆ ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ:  ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯಿದೆ ಸೆಕ್ಷನ್‌ಗಳಾದ 17, 5(L), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(ಡಿಎ), 376(3), 201, 202, 506 ಜೊತೆಗೆ 34, ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್‌ 3(ಎಫ್‌) ಮತ್ತು 7 ಹಾಗೂ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಸೆಕ್ಷನ್‌ 75ರ ಅಡಿ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ. ಇದರಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

Also Read
ಪೋಕ್ಸೊ ಪ್ರಕರಣ: ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಪೋಕ್ಸೊ ಕಾಯಿದೆ 17,5(1),6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(ಡಿಎ), 376(3), 201, 202, 506 ಜೊತೆಗೆ 34, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗಳ ಮೇಲಿನ ದೌರ್ಜನ್ಯ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 3(1)(ಡಬ್ಲ್ಯು)(i)(ii), 3(20(v)(va), ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯಿದೆ ಸೆಕ್ಷನ್‌ 3(ಎಫ್‌) ಮತ್ತು 7 ಹಾಗೂ ಬಾಲ ನ್ಯಾಯ (ಮಕ್ಕಳ ರಕ್ಷಣೆ ಮತ್ತು ಆರೈಕೆ) ಸೆಕ್ಷನ್‌ 75ರ ಅಡಿ ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿಯೂ ಜಾಮೀನು ಮಂಜೂರಾಗಿದೆ.  

ಇಬ್ಬರು ಬಾಲಕಿಯರು ಮೈಸೂರಿನ ನಜರ್‌ಬಾದ್ ಪೊಲೀಸ್‌ ಠಾಣೆಯಲ್ಲಿ ಸ್ವಾಮೀಜಿ ಸೇರಿ ಐವರ ವಿರುದ್ಧ 2022ರ ಆಗಸ್ಟ್‌ 26ರಂದು ದೂರು ದಾಖಲಿಸಿದ್ದರು. ಆನಂತರ ಅದನ್ನು ವ್ಯಾಪ್ತಿ ಹೊಂದಿರುವ ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿತ್ತು. ಶರಣರನ್ನು 2022ರ ಸೆಪ್ಟೆಂಬರ್ 1ರಂದು ಬಂಧಿಸಲಾಗಿತ್ತು. ಅಂದಿನಿಂದಲೂ ಅವರು ಚಿತ್ರದುರ್ಗದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

Kannada Bar & Bench
kannada.barandbench.com