ಪೋಕ್ಸೊ ಪ್ರಕರಣ: ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಪೊಲೀಸ್‌ ವಶಕ್ಕೆ

ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿ ಪ್ರಕರಣ ದಾಖಲು. ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲು ಆರೋಪಿಯಾಗಿದ್ದಾರೆ.
POCSO, Dr Sri Shivamurthy Murugha Sharanaru
POCSO, Dr Sri Shivamurthy Murugha Sharanaru
Published on

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೊ ಪ್ರಕರಣದ ಅಡಿ ಮೊದಲ ಆರೋಪಿಯಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಗುರುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆಗಸ್ಟ್‌ 26ರಂದು ಮೈಸೂರಿನ ನಜರಾಬಾದ್‌ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 376(2)(ಎನ್‌), 376(3), 149 ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣವನ್ನು ಚಿತ್ರದುರ್ಗ ಗ್ರಾಮೀಣ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ, ಅಲ್ಲಿ ಪೋಕ್ಸೊ ಕಾಯಿದೆ ಸೆಕ್ಷನ್‌ಗಳಾದ 17, 5(ಎಲ್‌), 6, ಐಪಿಸಿ ಸೆಕ್ಷನ್‌ಗಳಾದ 376(2)(ಎನ್‌), 376(3), 149 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ನಿರ್ಮೂಲನೆ) ಕಾಯಿದೆ ಸೆಕ್ಷನ್‌ಗಳಾದ 3(1) (ಡಬ್ಲ್ಯು) (1)(2), 3(2) (V) ಅಡಿ ಪ್ರಕರಣ ದಾಖಲಿಸಲಾಗಿದೆ.

Also Read
[ಮುರುಘಾ ಶರಣ ವಿರುದ್ಧ ಪೋಕ್ಸೊ ಪ್ರಕರಣ] ತನಿಖೆ ಮೇಲೆ ನಿಗಾ ಇಡಲು ಹೈಕೋರ್ಟ್‌ ಮಧ್ಯಪ್ರವೇಶ ಕೋರಿ ವಕೀಲರಿಂದ ಪತ್ರ ಮನವಿ

ಪ್ರಕರಣದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿನ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್‌ ರಶ್ಮಿ ಹಾಗೂ ಮಠದ ಬಸವಾದಿತ್ಯ (ಮರಿಸ್ವಾಮಿ) ಅವರು ಕ್ರಮವಾಗಿ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಮಠದ ಜೊತೆಗೆ ನಿಕಟ ಸಂಪರ್ಕ ಹೊಂದಿರುವ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಅವರು ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ನೆರವಿನಿಂದ ಸಂತ್ರಸ್ತೆಯರು ನಜರಾಬಾದ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಮಧ್ಯೆ, ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶರಣರು ಚಿತ್ರದುರ್ಗದ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನಾಳೆ ಅರ್ಜಿಯ ವಿಚಾರಣೆಯನ್ನು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ ಕೆ ಕೋಮಲಾ ಅವರ ನೇತೃತ್ವದ ಪೀಠವು ನಡೆಸಲಿದೆ.

Kannada Bar & Bench
kannada.barandbench.com