ಅಪರಾಧಿ ಕುಟುಂಬ ಸದಸ್ಯನಾಗಿದ್ದರೂ ಮಕ್ಕಳ ಲೈಂಗಿಕ ದೌರ್ಜನ್ಯ ವರದಿ ಮಾಡುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು: ಸಿಜೆಐ

ಅಪಮಾನ ಮತ್ತು ಕುಟುಂಬ ಗೌರವದ ಕಾರಣಕ್ಕೆ ಮೌನ ಸಂಸ್ಕೃತಿ ಅಸ್ತಿತ್ವದಲ್ಲಿದ್ದು ಇದು ಮಕ್ಕಳ ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ವರದಿ ಮಾಡದಂತೆ ಕುಟುಂಬಗಳನ್ನು ತಡೆಯುತ್ತದೆ ಎಂದು ಅವರು ಹೇಳಿದರು.
Justice DY Chandrachud
Justice DY Chandrachud

ಅಪರಾಧಿಗಳು ಕುಟುಂಬದ ಸದಸ್ಯರಾಗಿದ್ದರೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಗಳ ಬಗ್ಗೆ ತಿಳಿಸುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.

ಯುನಿಸೆಫ್‌ ಸಹಯೋಗದೊಂದಿಗೆ ಬಾಲನ್ಯಾಯ ಕುರಿತಾದ ಸುಪ್ರೀಂ ಕೋರ್ಟ್ ಸಮಿತಿ ಶನಿವಾರ ಆಯೋಜಿಸಿದ್ದ ಪೋಕ್ಸೊ ಕಾಯಿದೆ ಬಗೆಗಿನ ಎರಡು ದಿನಗಳ ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಸಿಜೆಐ ಮುಖ್ಯ ಭಾಷಣ ಮಾಡಿದರು.

ಅಪಮಾನ ಮತ್ತು ಕುಟುಂಬ ಗೌರವದ ಕಾರಣಕ್ಕೆ ಮೌನ ಸಂಸ್ಕೃತಿ  ಅಸ್ತಿತ್ವದಲ್ಲಿದ್ದು ಇದು ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡದಂತೆ ಕುಟುಂಬಗಳನ್ನು ತಡೆಯುತ್ತದೆ ಎಂದು ಅವರು ಹೇಳಿದರು.

ಆದರೆ ಕುಟುಂಬದ ಗೌರವ ಎಂಬುದು ಮಗುವಿನ ಹಿತಾಸಕ್ತಿಗೆ ಆದ್ಯತೆ ನೀಡುವುದಿಲ್ಲ ಎಂಬುದನ್ನು ಅರಿಯಬೇಕು ಮತ್ತು ಅಪರಾಧಿ ಕುಟುಂಬದ ಸದಸ್ಯರಾಗಿದ್ದರೂ ಸಹ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡುವಂತೆ ಕುಟುಂಬಗಳನ್ನು ಪ್ರೋತ್ಸಾಹಿಸಬೇಕು ಎಂದು ಅವರು ಹೇಳಿದರು.  

ಅಪರಾಧ ನಡೆದಾಗ ಸೃಷ್ಟಿಯಾಗುವ ಮೌನ ಸಂಸ್ಕೃತಿಗೆ ಕಾರಣವಾಗುವ ಎರಡುಮಾರಕ ರೂಢಿಮಾದರಿಗಳನ್ನು ಅವರು ವಿವರಿಸಿದರು: "ಮೊದಲ ರೂಢಮಾದರಿಯು ಹೆಣ್ಣು ಮಗು ಮಾತ್ರ ಲೈಂಗಿಕ ಕಿರುಕುಳಕ್ಕೆ ಒಳಗಾಗುವ ಸಾಧ್ಯತೆಯಿದೆ ಮತ್ತು ಎರಡನೆಯದು ಅಪರಾಧಿ ಅಪರಿಚಿತ ಎಂಬುದು. ಹುಡುಗರು ಕೂಡ ಲೈಂಗಿಕ ದೌರ್ಜನ್ಯದ ಸಮಾನ ಅಪಾಯ ಎದುರಿಸುತ್ತಾರೆ ಮತ್ತು ಬಹುತೇಕ ಪ್ರಕರಣಗಳಲ್ಲಿ  ಅಪರಾಧಿಯು ಕುಟುಂಬದ ಆಪ್ತ ಸದಸ್ಯ ಇಲ್ಲವೇ ಹಿತೈಷಿ ಅಥವಾ ನೆರೆಹೊರೆಯವನಾಗಿದ್ದು ಸಂತ್ರಸ್ತರಿಗೆ ಚೆನ್ನಾಗಿ ಗೊತ್ತಿರುತ್ತಾನೆ ಎಂಬುದನ್ನು ಸಂಶೋಧನೆ ತೋರಿಸಿದೆ."

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ - 2012ರ  ಅಡಿಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿದರೆ ಸಂತ್ರಸ್ತ ಮಕ್ಕಳು ಮತ್ತೆ ಸಂತ್ರಸ್ತರಾಗುವುದಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಪ್ರಪಂಚದಾದ್ಯಂತ, ಮಕ್ಕಳು ಭಾವನಾತ್ಮಕ, ದೈಹಿಕ, ಮಾನಸಿಕ ಹಾಗೂ ಲೈಂಗಿಕ ಹಿಂಸೆಯಿಂದ ಹೆಚ್ಚು ತೊಂದರೆಗೀಡಾಗಿದ್ದು ಭಾರತ ಕೂಡ ಇದಕ್ಕೆ ಹೊರತಲ್ಲ. 

  • ಪೋಕ್ಸೊ ಒಂದು ಲಿಂಗ-ತಟಸ್ಥ ಕಾಯಿದೆಯಾಗಿದ್ದು ಗುಪ್ತ ವಿಚಾರಣೆ ನಡೆಯುತ್ತದೆ ಮತ್ತು ಮಗುವಿನ ಗುರುತನ್ನು ಗೌಪ್ಯವಾಗಿಡಲಾಗುತ್ತದೆ. ಪೋಕ್ಸೊ ಜಾರಿಮಾಡುವುದು ದೀರ್ಘ ಯಾನದ ಮೊದಲ ಹೆಜ್ಜೆಯಾಗಿದೆ. ಮಕ್ಕಳ ಸಂತ್ರಸ್ತರ ಕುಟುಂಬಗಳು ದೂರು ಸಲ್ಲಿಸಲು ತೀರಾ ಹಿಂಜರಿಯುತ್ತಾರೆ.   ಆದ್ದರಿಂದ ನಾವು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ವಹಿಸಿಕೊಡುವಾಗ ಬಹಳ ಜಾಗರೂಕರಾಗಿರಬೇಕು.

  • ಕ್ರಿಮಿನಲ್‌ ನ್ಯಾಯಿಕ ಆಡಳಿತದ ಪ್ರತಿ ಹಂತದಲ್ಲೂ ಸಂತ್ರಸ್ತರು ಮತ್ತೆ ಸಂತ್ರಸ್ತರಾಗುವುದರಿಂದ ಎಚ್ಚರಿಕೆ ವಹಿಸಬೇಕು.

  • ಅಂತಹ ವಿಚಾರಣೆ ಸೃಷ್ಟಿಸುವ ವಾತಾವರಣ ಮತ್ತು ಸಂತ್ರಸ್ತರ ಪುನರ್ವಸತಿ ವೇಳೆ ಅನುಸರಿಸುವ ತಂತ್ರಗಳು ಸಾಕಷ್ಟು ಸೂಕ್ಷ್ಮವಾಗಿರದಿದ್ದರೆ ಮತ್ತೆ ಸಂತ್ರಸ್ತರಾಗುವ ಸಂಭವ ಇದೆ.

  • ವಿಚಾರಣೆ ವಿಳಂಬದಿದಾಗಿಯೂ ಸಂತ್ರಸ್ತರು ಮತ್ತೆ ಸಂತ್ರಸ್ತರಾಗಬಹುದು. ಹೀಗಾಗಿ ನವೀನ ವಿಧಾನಗಳ ಬಗ್ಗೆ ಯೋಚಿಸಿ ಸಾಂಪ್ರದಾಯಿಕ ವಿಧಾನಗಳಿಂದ ದೂರ ಇರಬೇಕು. ಶಾಲೆ, ಪೊಲೀಸ್‌ ಮತ್ತು ನ್ಯಾಯಾಂಗ ಶಿಕ್ಷಣದ ಪಠ್ಯಕ್ರಮ ವಿಕಸನಗೊಳಿಸಬೇಕು. ರಾಜ್ಯ ನ್ಯಾಯಾಂಗ ಅಕಾಡೆಮಿಗಳಿಗೆ ರಾಷ್ಟ್ರೀಯ ಮಾದರಿಯೊಂದನ್ನು ರೂಪಿಸಬೇಕು. ನ್ಯಾಯಾಧೀಶರಿಗೆ ತರಬೇತಿ ನೀಡುವಾಗ ಮಗುವಿನ ಮನಸ್ಸು ಮತ್ತು ಸಂವಹನ ಕುರಿತು ಗಮನ ಕೇಂದ್ರೀಕರಿಸಬೇಕು.

  • ಮಗುವಿನ ಹಿತಾಸಕ್ತಿಗಿಂತಲೂ ಕುಟುಂಬದ ಗೌರವ ದೊಡ್ಡದಲ್ಲ ಎಂಬುದನ್ನು ಅರಿತು ಅಪರಾಧಿ ಕುಟುಂಬದ ಸದಸ್ಯನಾಗಿದ್ದರೂ ಸಹ ದೌರ್ಜನ್ಯ ಪ್ರಕರಣಗಳನ್ನು ವರದಿ ಮಾಡಲು ಕುಟುಂಬಗಳಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು.

  • ಕ್ರಿಮಿನಲ್ ನ್ಯಾಯ ವ್ಯವಸ್ಥೆ ಕಾರ್ಯನಿರ್ವಹಿಸುವ ರೀತಿಯಿಂದಾಗಿ ಕೆಲವೊಮ್ಮೆ ಸಂತ್ರಸ್ತರಿಗೆ ಆಘಾತ ಉಂಟಾಗುತ್ತದೆ.  ಆದ್ದರಿಂದ ದುಷ್ಕೃತ್ಯ ತಪ್ಪಿಸಲು ನ್ಯಾಯಾಂಗದೊಂದಿಗೆ ಕಾರ್ಯಾಂಗ ಕೈ ಜೋಡಿಸಬೇಕು.

  • ಪೋಕ್ಸೊ ಪ್ರಕರಣಗಳ ವಿಚಾರಣೆ ಮಾಡುವ ನ್ಯಾಯಾಧೀಶರ ಸಂಖ್ಯೆ  ಹೆಚ್ಚಳ ಮಾಡುವ ಜೊತೆಗೆ ತರಬೇತಿ ಮತ್ತು ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕಿದೆ.

Related Stories

No stories found.
Kannada Bar & Bench
kannada.barandbench.com