ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು ತಮ್ಮನ್ನು ದೇವರು ಎಂದು ಭಾವಿಸಿರುತ್ತಾರೆ: ಗುಜರಾತ್ ಹೈಕೋರ್ಟ್ ಕಿಡಿ

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧಜನ ದೂರು ಸಲ್ಲಿಸಬಹುದಾದ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಸಮರ್ಪಕ ಪ್ರಚಾರ ನಡೆಸದ ರಾಜ್ಯ ಸರ್ಕಾರ ಟೀಕಿಸುವ ವೇಳೆ ನ್ಯಾಯಾಲಯ ಈ ಮೌಖಿಕ ಅವಲೋಕನ ಮಾಡಿತು.
Police officer
Police officer

ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸುವ ಕೋಶವಾದ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ (ಎಸ್‌ಪಿಸಿಎ) ಕುರಿತು ಸಾಕಷ್ಟು ಜಾಗೃತಿ ಮೂಡಿಸುವಲ್ಲಿ ವಿಫಲವಾಗಿರುವ ಗುಜರಾತ್‌ ಸರ್ಕಾರವನ್ನು ರಾಜ್ಯ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.

ಜನ ತಮ್ಮ ದೂರು ಸಲ್ಲಿಸಲು ನೇರವಾಗಿ ಪೊಲೀಸ್ ಠಾಣೆ ಅಥವಾ ಜಿಲ್ಲಾಧಿಕಾರಿಯನ್ನು  ಸಂಪರ್ಕಿಸುತ್ತಾರೆ ಎಂದು ನಿರೀಕ್ಷಿಸಲಾಗದು, ವಿಶೇಷವಾಗಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್‌ಗಳು ಸಾಮಾನ್ಯವಾಗಿ "ದೇವರು" ಅಥವಾ "ರಾಜರು" ಎಂಬಂತೆ ವರ್ತಿಸುತ್ತಾರೆ ಎಂದು ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿತು.

ಸರ್ಕಾರಿ ಕಚೇರಿಯ ಹೊರಗೆ ಯಾರೂ ನಿಲ್ಲಬಾರದು. ಜನ ಸಾಮಾನ್ಯರು ಕಚೇರಿ ಹೊರಗೆ ಕಾಯಬೇಕೆ? ಅವರು ಸರ್ಕಾರಿ ಕಚೇರಿ ಒಳಗೆ ಹೋಗಲು ಯಾರಾದರೂ ಅನುಮತಿಸುತ್ತಾರಾ? ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ಕಮಿಷನರ್‌ ತಮ್ಮನ್ನು ದೇವರೆಂದು ಭಾವಿಸಿರುತ್ತಾರೆ. ಅವರು ದೇವರು ಇಲ್ಲವೇ ರಾಜರಂತೆ ವರ್ತಿಸುತ್ತಾರೆ ಎಂದು ಸಿಟ್ಟಿನಿಂದ ನ್ಯಾ, ಸುನೀತಾ ಅಗರ್‌ವಾಲ್‌ ತಿಳಿಸಿದರು.

ಪೊಲೀಸ್ ಅಧಿಕಾರಿಗಳ ಬಗ್ಗೆ ದೂರುಗಳನ್ನು ಸ್ವೀಕರಿಸಲು ಸರ್ಕಾರ ಪ್ರಾಧಿಕಾರವನ್ನು ಸ್ಥಾಪಿಸಿದ್ದರೂ, ಈ ಕಾರ್ಯವಿಧಾನದ ಬಗ್ಗೆ ಯಾರಿಗೂ ತಿಳಿದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಅನಿರುದ್ಧ ಮಯೀ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

ದೂರು ಸಲ್ಲಿಸಲು ಎಲ್ಲಿಗೆ ಹೋಗಬೇಕು ಮತ್ತು ಯಾರನ್ನು ಸಂಪರ್ಕಿಸಬೇಕು ಎಂದು ಯಾರಿಗೂ ತಿಳಿದಿಲ್ಲದ ಕಾರಣ ಅಂತಹ ಪ್ರಾಧಿಕಾರ ರಚಿಸುವುದಷ್ಟೇ ಸಾಕಾಗದು ಎಂದು ನ್ಯಾಯಾಲಯ ಹೇಳಿದೆ.

Also Read
[ಲಂಚ ಪ್ರಕರಣ] ವಾಣಿಜ್ಯ ವ್ಯವಹಾರ ಕೇಂದ್ರಗಳಾಗಿ ಬದಲಾದ ಪೊಲೀಸ್‌ ಠಾಣೆಗಳು: ನ್ಯಾ. ರಾಧಾಕೃಷ್ಣ

ರಾಜ್ಯ ಸರ್ಕಾರದ ಪರ ಹಾಜರಾದ ಸರ್ಕಾರಿ ವಕೀಲರಾದ ಮನೀಶಾ ಲುವ್‌ಕುಮಾರ್-ಶಾ ಅವರನ್ನು ಉದ್ದೇಶಿಸಿ ಮುಖ್ಯ ನ್ಯಾಯಮೂರ್ತಿಗಳು, "ಇವು ಕಟು ವಾಸ್ತವವಾಗಿದ್ದು ಎಲ್ಲರಿಗೂ ಅವುಗಳ ಬಗ್ಗೆ ತಿಳಿದಿದೆ. ಸಾಮಾನ್ಯ ಜನ ಪೊಲೀಸ್‌ ಠಾಣೆ, ಕಮಿಷನರ್‌ ಕಚೇರಿ ಅಥವಾ ಜಿಲ್ಲಾಧಿಕಾರಿ ಕಚೇರಿ ಪ್ರವೇಶಿಸುವುದು ಅಸಾಧ್ಯದ ಸಂಗತಿಯಾಗಿದೆ. ನಾವಿಬ್ಬರೂ (ನ್ಯಾಯಮೂರ್ತಿಗಳು) ಒಂದು ಕಾಲದಲ್ಲಿ ಸಾಮಾನ್ಯ ಜನರಾಗಿದ್ದು ವಾಸ್ತವಾಂಶಗಳನ್ನು ತಿಳಿದಿದ್ದೇವೆ ಮತ್ತು ಪೊಲೀಸ್‌ ಅಧಿಕಾರಿಗಳ ಬಗ್ಗೆ ವೈಯಕ್ತಿಕ ಅನುಭವ ಇದೆ" ಎಂದು ಅವರು ತಿಳಿಸಿದರು.

ಆದ್ದರಿಂದ ಪೊಲೀಸ್‌ ದೂರು ಕೋಶ ರಚಿಸುವ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳನ್ನು ಚಾಚೂತಪ್ಪದೆ ಪಾಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಆದೇಶಿಸಿತು.

ತಡರಾತ್ರಿ ಪ್ರಯಾಣಿಸುತ್ತಿದ್ದ ಜೋಡಿಯಿಂದ ₹ 60,000 ಸುಲಿಗೆ ಮಾಡಿದ್ದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧ ತಾನು ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

Related Stories

No stories found.
Kannada Bar & Bench
kannada.barandbench.com