[ಲಂಚ ಪ್ರಕರಣ] ವಾಣಿಜ್ಯ ವ್ಯವಹಾರ ಕೇಂದ್ರಗಳಾಗಿ ಬದಲಾದ ಪೊಲೀಸ್‌ ಠಾಣೆಗಳು: ನ್ಯಾ. ರಾಧಾಕೃಷ್ಣ

ಲಂಚ ಪಡೆದಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ರಾಜಾಜಿನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌ ಲಕ್ಷ್ಮಣಗೌಡ ಅವರಿಗೆ ಲೋಕಾಯುಕ್ತ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.
Judge K M Radhakrishna
Judge K M Radhakrishna

“ಪೊಲೀಸ್‌ ಠಾಣೆಗಳಲ್ಲಿ ಸರಿ-ತಪ್ಪು, ನ್ಯಾಯ-ಅನ್ಯಾಯದ ಬಗ್ಗೆ ಯೋಚಿಸುವುದು ನಿಂತಿದ್ದು, ಠಾಣೆಗಳಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿರುವುದರಿಂದ ಅವುಗಳು ಇತ್ತೀಚೆಗೆ ವಾಣಿಜ್ಯ ವ್ಯವಹಾರ ಕೇಂದ್ರಗಳಾಗಿವೆ” ಎಂದು ವಿಶೇಷ ಲೋಕಾಯುಕ್ತ ನ್ಯಾಯಾಲಯವು ಈಚೆಗೆ ಬೇಸರ ವ್ಯಕ್ತಪಡಿಸಿದೆ.

ಲಂಚ ಪಡೆದ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರಿನ ರಾಜಾಜಿನಗರ ಪೊಲೀಸ್‌ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಸ್‌ ಲಕ್ಷ್ಮಣಗೌಡ ಅವರಿಗೆ ಭ್ರಷ್ಟಾಚಾರ ನಿಷೇಧ ಕಾಯಿದೆ ಅಡಿ ಸ್ಥಾಪಿಸಲಾಗಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ ಎಂ ರಾಧಾಕೃಷ್ಣ ಅವರು ನಿರೀಕ್ಷಣಾ ಜಾಮೀನು ನಿರಾಕರಿಸುವ ವೇಳೆ ಮೇಲಿನಂತೆ ಹೇಳಿದ್ದಾರೆ.

“ಪೊಲೀಸ್‌ ಪದದ ಅರ್ಥವು ಸಮಚಿತ್ತತೆ, ಸೇವಾ ಕೇಂದ್ರಿತತೆ, ಪ್ರಾಮಾಣಿಕತೆ ಮತ್ತು ತಾಯಿಯ ಸ್ಥಾನದಲ್ಲಿ ನಿಂತು ಮುಗ್ಧ ಜನರನ್ನು ರಕ್ಷಿಸುವುದು ಎಂಬುದಾಗಿದೆ. ದುರದೃಷ್ಟಕರ ಸಂಗತಿ ಎಂದರೆ ಪೊಲೀಸ್‌ ಠಾಣೆಗಳಲ್ಲಿ ಸರಿ-ತಪ್ಪು, ನ್ಯಾಯ-ಅನ್ಯಾಯದ ಬಗ್ಗೆ ಯೋಚಿಸುವುದು ನಿಂತಿದ್ದು, ಠಾಣೆಗಳಲ್ಲಿ ಭ್ರಷ್ಟಾಚಾರ ಆಳವಾಗಿ ಬೇರೂರಿರುವುದರಿಂದ ಅವುಗಳು ಇತ್ತೀಚೆಗೆ ವಾಣಿಜ್ಯ ವ್ಯವಹಾರ ಕೇಂದ್ರಗಳಾಗಿವೆ. ಇಂಥ ದಯನೀಯ ಸ್ಥಿತಿಯಿಂದಾಗಿ ಸಾಮಾನ್ಯ ಜನರು ವ್ಯವಸ್ಥೆಯ ಮೇಲಿನ ನಂಬಿಕೆ ಕಳೆದುಕೊಳ್ಳುವುದಲ್ಲದೇ, ತಮ್ಮ ವೈಯಕ್ತಿಕ ಅಹವಾಲುಗಳನ್ನು ಪರಿಹರಿಸಿಕೊಳ್ಳಲು ಪೊಲೀಸ್‌ ಠಾಣೆಯ ಮೆಟ್ಟಿಲೇರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪರಿಸ್ಥಿತಿಯನ್ನು ಮಟ್ಟಹಾಕದಿದ್ದರೆ, ಇದು ಸವಾಲಾಗಿ ಪರಿಗಣಮಿಸಲಿದೆ. ಇಲ್ಲವಾದಲ್ಲಿ ಧ್ವನಿ ಇಲ್ಲದವರು, ಅಸಹಾಯಕರು, ಬಡವರು ಸಂತ್ರಸ್ತರಾಗಲಿದ್ದು, ಆರೋಗ್ಯವಂತ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಲಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

“ಅರ್ಜಿದಾರ ಮತ್ತು ಇತರೆ ಆರೋಪಿಗಳು ಎಸಗಿರುವ ಅಪರಾಧವು ಸಾಮಾಜಿಕ-ಆರ್ಥಿಕ ರೂಪದಲ್ಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಘಟನೆ ನಡೆದಾಗಿನಿಂದಲೂ ಅರ್ಜಿದಾರ ಇನ್‌ಸ್ಪೆಕ್ಟರ್‌ ನಾಪತ್ತೆಯಾಗಿದ್ದಾರೆ. ಈಗಾಗಲೇ ಮೊದಲ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಲಕ್ಷ್ಮಣಗೌಡ ಅವರ ಸೂಚನೆಯಂತೆ ದೂರುದಾರ ಸಾಗರ್‌ ಅವರು ತನ್ನ ಕಿಸೆಗೆ ಲಂಚದ ಹಣ ಇಟ್ಟರು ಎಂದು ಮೊದಲನೇ ಆರೋಪಿ ತನ್ನ ಜಾಮೀನು ಅರ್ಜಿಯಲ್ಲಿ ವಿವರಿಸಿದ್ದಾನೆ. ಈಗ ಲಕ್ಷ್ಮಣಗೌಡ ಅವರು ನಾಪತ್ತೆಯಾಗಿರುವುದನ್ನು ನೋಡಿದರೆ ಕಾನೂನುಬದ್ಧವಾಗಿ ನಡೆದುಕೊಳ್ಳುತ್ತೇನೆ ಎಂಬ ಅವರ ಮುಚ್ಚಳಿಕೆಯು ಆಧಾರರಹಿತವಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: ದೂರುದಾರ ಸಾಗರ್‌ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳಾದ 354, 506, 504, 323, 324 ಜೊತೆಗೆ 34ರ ಅಡಿ ಸಬ್‌ ಇನ್‌ಸ್ಪೆಕ್ಟರ್‌ ವಿ ದುರ್ಗಾ ಅವರ ನಿರ್ದೇಶನದಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅರ್ಜಿದಾರರಾದ ಲಕ್ಷ್ಮಣಗೌಡ ಅವರು ತನಿಖಾಧಿಕಾರಿಯಾಗಿದ್ದು, ಇದರಲ್ಲಿ ʼಬಿʼ ವರದಿ ಸಲ್ಲಿಸಲು 50 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು, ಸ್ವೀಕರಿಸಿದ್ದರು ಎಂಬ ಆರೋಪವಿದೆ.

ಇದರ ಆಧಾರದಲ್ಲಿ ರಾಜಾಜಿನಗರ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ ಲಕ್ಷ್ಮಣಗೌಡ ಸೇರಿ ಮೂವರು ಅಧಿಕಾರಿಗಳ ವಿರುದ್ಧ ಸಾಗರ್‌ ಎಂಬವರು ನೀಡಿದ ದೂರಿನ ಅನ್ವಯ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 7(ಎ) ಮತ್ತು 12ರ ಅಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಲಕ್ಷ್ಮಣಗೌಡ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.

Attachment
PDF
Lakshmanagowd S Vs Karnataka Lokayukta.pdf
Preview

Related Stories

No stories found.
Kannada Bar & Bench
kannada.barandbench.com