ಪೊಲೀಸ್‌ ಪಡೆ ಜಾತ್ಯತೀತ ಸ್ವರೂಪ ಹೊಂದಿರಬೇಕು: ಪೊಲೀಸ್‌ ಸಿಬ್ಬಂದಿಗೆ ಗಡ್ಡ ಬಿಡುವ ಹಕ್ಕಿಲ್ಲ- ಅಲಾಹಾಬಾದ್‌ ಹೈಕೋರ್ಟ್‌

ಪೊಲೀಸ್‌ ಪಡೆಯು ಶಿಸ್ತಿನ ಪಡೆಯಾಗಿರಬೇಕಿದ್ದು, ಕಾನೂನು ಪರಿಪಾಲನಾ ಸಂಸ್ಥೆಯಾಗಿರುವುದರಿಂದ ಜಾತ್ಯತೀತ ಸ್ವರೂಪ ಹೊಂದಬೇಕಿದೆ. ಇದು ರಾಷ್ಟ್ರೀಯ ಐಕ್ಯತೆಯನ್ನು ಹೆಚ್ಚಿಸಲಿದೆ ಎಂದು ನ್ಯಾಯಾಲಯ ಹೇಳಿದೆ.
UP police barricade
UP police barricade

ಸಂವಿಧಾನದ 25ನೇ ವಿಧಿಯಡಿ ಗಡ್ಡ ಬಿಡುವ ಮೂಲಭೂತ ಹಕ್ಕು ಪೊಲೀಸ್‌ ಸಿಬ್ಬಂದಿಗೆ ಇಲ್ಲ ಎಂದು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಆದೇಶ ಮಾಡಿದೆ.

ಗಡ್ಡ ಬಿಡುವುದು ಮೂಲಭೂತ ಹಕ್ಕಲ್ಲ ಎಂದು ಮೇಲಿನ ಪ್ರಾಧಿಕಾರ ವಿಶೇಷ ನಿರ್ದೇಶನ ನೀಡಿದ್ದರೂ ಅದು ತಮ್ಮ ಹಕ್ಕು ಎಂದು ಉತ್ತರ ಪ್ರದೇಶ ಪೊಲೀಸ್‌ ಪಡೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಮೊಹಮ್ಮದ್‌ ಫರ್ಮಾನ್‌ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ರಾಜೇಶ್‌ ಸಿಂಗ್‌ ಚೌಹಾಣ್‌ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.

“ಸಂವಿಧಾನದ 25ನೇ ವಿಧಿಯು ಅಂತಃಸಾಕ್ಷಿಯಂತೆ ನಡೆದುಕೊಳ್ಳಲು ಮತ್ತು ಇಚ್ಛೆಯ ವೃತ್ತಿ ಕೈಗೊಳ್ಳಲು, ಇಚ್ಛೆಯ ಧರ್ಮ ಪ್ರಸರಣ ಮಾಡಲು ಸ್ವಾತಂತ್ರ್ಯ ಕಲ್ಪಿಸಿದೆ. ಆದರೆ, ಶಿಸ್ತಿನ ಪಡೆಯ ಸದಸ್ಯನಾಗಿ ಗಡ್ಡ ಬಿಡುವುದನ್ನು 25ನೇ ವಿಧಿ ರಕ್ಷಿಸುವುದಿಲ್ಲ. ಈ ವಿಧಿಯು ಸಂಪೂರ್ಣವಾದ ಹಕ್ಕನ್ನು ನೀಡುವುದಿಲ್ಲ. ಎಲ್ಲಾ ಹಕ್ಕುಗಳನ್ನು ಸಂವಿಧಾನದಡಿ ಅವುಗಳನ್ನು ರಚಿಸಲಾಗಿರುವ ಮೂಲೋದ್ದೇಶಗಳ ಹಿನ್ನೆಲೆಯಲ್ಲಿ ಪರಿಗಣಿಸಬೇಕಿದೆ” ಎಂದು ಪೀಠ ಹೇಳಿದೆ.

ಸಂವಿಧಾನದ 25ನೇ ವಿಧಿಯಡಿ ಖಾತರಿಪಡಿಸಲಾಗಿರುವ ಹಕ್ಕುಗಳು ಅಂತರ್ಗತವಾದ ನಿರ್ಬಂಧಗಳನ್ನು ಒಳಗೊಂಡಿವೆ. ಪೊಲೀಸ್‌ ಪಡೆಯು ಶಿಸ್ತಿನ ಪಡೆಯಾಗಿರಬೇಕಿದ್ದು, ಕಾನೂನು ಪರಿಪಾಲನಾ ಸಂಸ್ಥೆಯಾಗಿರುವುದರಿಂದ ಜಾತ್ಯತೀತ ರೂಪ ಹೊಂದಬೇಕಿದೆ. ಇದು ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸಲಿದೆ ಎಂದು ನ್ಯಾಯಾಲಯ ಹೇಳಿದೆ.

ಹೈಕೋರ್ಟ್‌ನಲ್ಲಿ ಎರಡು ರಿಟ್‌ ಮನವಿಗಳನ್ನು ಫರ್ಮಾನ್‌ ಅವರು ಸಲ್ಲಿಸಿದ್ದು, ಕಳೆದ ವರ್ಷದ ಅಕ್ಟೋಬರ್‌ನಲ್ಲಿ 26ರಂದು ಉತ್ತರ ಪ್ರದೇಶದ ಪೊಲೀಸ್‌ ಮಹಾನಿರ್ದೇಶಕರು ಪೊಲೀಸ್‌ ಪಡೆಗೆ ಸೂಕ್ತ ಸಮವಸ್ತ್ರ ಮತ್ತು ಸೂಕ್ತ ಚರ್ಯೆ ಹೊಂದುವ ಸಂಬಂಧ ಹೊರಡಿಸಿರುವ ಮಾರ್ಗಸೂಚಿಯ ಸುತ್ತೋಲೆಯನ್ನು ಆಕ್ಷೇಪಿಸಿ ಹಾಗೂ ಎರಡನೆಯದಾಗಿ ಶಿಸ್ತಿನ ಪಡೆಯ ಸಿಬ್ಬಂದಿಯಾಗಿಯೂ ಗಡ್ಡ ಬೆಳೆಸಿದ್ದಾರೆ ಎಂದು ಇಲಾಖಾ ತನಿಖೆಯ ಅನುಸಾರ ಕಳೆದ ವರ್ಷದ ನವೆಂಬರ್‌ 5ರಂದು ತಮ್ಮನ್ನು ಉಪ ಪೊಲೀಸ್‌ ಮಹಾನಿರ್ದೇಶಕರು ತಮ್ಮನ್ನು ಅಮಾನತು ಮಾಡಿ ಹೊರಿಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅವರು ಮನವಿ ಸಲ್ಲಿಸಿದ್ದರು. ಎರಡನೇ ಮನವಿಯ ಜೊತೆಗೆ ಅಯೋಧ್ಯೆಯ ಗ್ರಾಮೀಣ ವಿಭಾಗದ ಪೊಲೀಸ್‌ ವರಿಷ್ಠಧಿಕಾರಿ ಜುಲೈ 29ರಂದು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಫರ್ಮಾನ್‌ ಪ್ರಶ್ನಿಸಿದ್ದರು.

“ಪೊಲೀಸ್‌ ಪಡೆಯಲ್ಲಿ ಶಿಸ್ತುನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮೇಲಧಿಕಾರಿಗಳು ಆದೇಶ ಮಾಡಿದ್ದು, ಕಾನೂನು ಪರಿಪಾಲನೆ ಮಾಡುವ ಪೊಲೀಸ್‌ ಪಡೆಯು ಜಾತ್ಯತೀತ ರೂಪ ಹೊಂದುವುದು ಅತ್ಯಗತ್ಯವಾಗಿದ್ದು, ಇದು ರಾಷ್ಟ್ರೀಯ ಐಕ್ಯತೆಯನ್ನು ಬಲಪಡಿಸುತ್ತದೆʼ ಎಂದು ನ್ಯಾಯಾಲಯ ಹೇಳಿದೆ.

Also Read
ಅಶ್ಲೀಲ ಚಿತ್ರ ಪ್ರಕರಣ: ಪೊಲೀಸ್‌ ವಶಕ್ಕೆ ನೀಡಿದ್ದನ್ನು ಪ್ರಶ್ನಿಸಿದ್ದ ಕುಂದ್ರಾ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

ಅರ್ಜಿದಾರರ ವಿರುದ್ಧ ಆರಂಭಿಸಿರುವ ಕ್ರಮದ ಬಗ್ಗೆ ನ್ಯಾಯಾಲಯವು ಗಡ್ಡವನ್ನು ಕತ್ತರಿಸದಿರುವುದು ಉನ್ನತ ಅಧಿಕಾರಿಗಳು ಹೊರಡಿಸಿದ ಸುತ್ತೋಲೆಯ ಉಲ್ಲಂಘನೆಯಾಗಿದೆ ಎಂದಿದೆ. “ನಿರ್ದಿಷ್ಟ ಸೂಚನೆಯ ಹೊರತಾಗಿಯೂ ಗಡ್ಡ ಕತ್ತರಿಸದಿರುವ ಪೊಲೀಸ್‌ ಪೇದೆಯ ನಿಲುವು ಮೇಲಧಿಕಾರಿಗಳ ಆದೇಶ/ಸುತ್ತೋಲೆಯ ಉಲ್ಲಂಘನೆಯಾಗಿದೆ. ಇದು ದುರ್ವರ್ತನೆ, ದುಷ್ಕೃತ್ಯ ಮತ್ತು ಅಪರಾಧವಾಗಿದೆ” ಎಂದು ಪೀಠ ಹೇಳಿದೆ.

ನ್ಯಾಯದಾನದ ದೃಷ್ಟಿಯಿಂದ ಕಾನೂನಿನ ಅನ್ವಯ ಮೂರು ತಿಂಗಳ ಒಳಗೆ ಇಲಾಖಾ ತನಿಖೆಯನ್ನು ಕಟ್ಟುನಿಟ್ಟಾಗಿ ತನಿಖಾಧಿಕಾರಿ ನಡೆಸಬೇಕು. “ಸರಿಯಾದ ಸಮವಸ್ತ್ರ ಧರಿಸುವುದು ಹಾಗೂ ದೈಹಿಕ ಚರ್ಯೆ ಕಾಪಾಡಿಕೊಳ್ಳುವುದು ಶಿಸ್ತಿನ ಪಡೆಯ ಸದಸ್ಯರ ಮೊದಲ ಮತ್ತು ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿದೆ. ಇದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಬಾರದು” ಎಂದು ನ್ಯಾಯಾಲಯವು ಒತ್ತಿ ಹೇಳಿದೆ.

Related Stories

No stories found.
Kannada Bar & Bench
kannada.barandbench.com