ರೈಡ್‌ ನಡೆಸುವುದು ತನಿಖೆಯಾಗದು; ರೈಡ್‌ ಮಾಡಲು ಪೊಲೀಸರು ಮ್ಯಾಜಿಸ್ಟ್ರೇಟ್‌ ಅನುಮತಿ ಕಾಯಬೇಕೆಂದೇನಿಲ್ಲ: ಹೈಕೋರ್ಟ್‌

ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 81ರ ಅಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿಯಿಂದ ಸರ್ಚ್‌ ವಾರೆಂಟ್‌ ಪಡೆದ ಬಳಿಕ ಶೋಧ ನಡೆಸಲಾಗಿದೆ ಎಂಬುದನ್ನು ನ್ಯಾಯಾಲಯವು ಪರಿಣಿಸಿದೆ.
Karnataka high court
Karnataka high court
Published on

ಪೊಲೀಸರು ದಾಳಿ (ರೈಡ್‌) ನಡೆಸುವುದು ತನಿಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಹೇಳಿದೆ (ಗೋಪಾಲ ಕೃಷ್ಣ ಮತ್ತು ಇತರರು ವರ್ಸಸ್‌ ರಾಜ್ಯ ಸರ್ಕಾರ).

ಕಾನೂನು ಬಾಹಿರವಾದ ಜೂಜಾಟದಂಥ (ಅಂದರ್‌-ಬಾಹರ್) ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಖಚಿತವಾದ ಮಾಹಿತಿ ಇದ್ದಾಗ ಮ್ಯಾಜಿಸ್ಟ್ರೇಟ್‌ ಅನುಮತಿಗಾಗಿ ಆರಕ್ಷಕರು ಕಾಯುವ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರಿದ್ದ ಏಕಸದಸ್ಯ ಪೀಠ ಹೇಳಿದೆ. ಚಿಕ್ಕಮಗಳೂರು ಪೊಲೀಸರು ನಡೆಸಿದ್ದ ರೈಡ್‌ ಮತ್ತು ಆನಂತರದ ತನಿಖೆಯನ್ನು ಪ್ರಶ್ನಿಸಲಾಗಿದ್ದ ಮನವಿಯನ್ನು ವಜಾಗೊಳಿಸಿದೆ.

“ರೈಡ್ ನಡೆಸುವುದಕ್ಕೂ ಮುನ್ನ ಮ್ಯಾಜಿಸ್ಟ್ರೇಟ್‌ ಅವರ ಅನುಮತಿ ಪಡೆಯಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಯು ನ್ಯಾಯಾಲಯದ ಮುಂದಿದೆ. ರೈಡ್‌ ನಡೆಸುವುದು ತನಿಖೆಗೆ ಸಮ ಎಂಬುದು ಅರ್ಜಿದಾರರ ವಾದವಾಗಿದ್ದು, ಖಚಿತವಾದ ಮಾಹಿತಿಯ ಮೇರೆಗೆ ವ್ಯಕ್ತಿಯು ಅಂದರ್‌-ಬಾಹರ್‌ನಲ್ಲಿ ತೊಡಗಿರುವುದು ತಿಳಿದೂ ಮ್ಯಾಜಿಸ್ಟ್ರೇಟ್‌ ಅನುಮತಿ ನೀಡುವವರೆಗೆ ಪೊಲೀಸರು ಕಾಯಬೇಕು ಎಂಬುದನ್ನು ಒಪ್ಪಲಾಗದು. ಮ್ಯಾಜಿಸ್ಟ್ರೇಟ್‌ ಅನುಮತಿ ನೀಡುವವರೆಗೆ ಪೊಲೀಸರನ್ನು ಕಾಯುವಂತೆ ಹೇಳಲಾಗದು. ಪ್ರಕರಣ (ಕೇಸ್) ದಾಖಲಿಸಲು ಮಾತ್ರ ಅನುಮತಿ ಅಗತ್ಯ” ಎಂದು ಆದೇಶದಲ್ಲಿ ನ್ಯಾಯಾಲಯ ಹೇಳಿದೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಚಿಕ್ಕಮಗಳೂರಿನ ಹಿರಿಯ ನಾಗರಿಕರ ಸೇವಾ ಕೇಂದ್ರದಲ್ಲಿ ಕಾನೂನುಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ ಒಂಭತ್ತು ಆರೋಪಿಗಳು ಮನವಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್‌ ಅವರಿಂದ ಅನುಮತಿ ಪಡೆದ ಬಳಿಕ ಬಸವನಹಳ್ಳಿ ಪೊಲೀಸರು 12,550 ರೂಪಾಯಿ ವಶಪಡಿಸಿಕೊಂಡು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.

ರೈಡ್ ಮತ್ತು ತನಿಖೆಗೂ ಮುನ್ನ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 155 (2) ಅಡಿ ಪೊಲೀಸರು ಮ್ಯಾಜಿಸ್ಟ್ರೇಟ್‌ ಅನುಮತಿ ಪಡೆಯಬೇಕಿತ್ತು ಎಂದು ಆರೋಪಿಗಳು ವಾದಿಸಿದ್ದರು. ಪೂರ್ವಾಗ್ರಹದಿಂದ ಪೊಲೀಸರು ತನಿಖೆ ನಡೆಸಿದ್ದಾರೆ ಎಂಬುದನ್ನು ಆರೋಪಿ ಸಾಬೀತುಪಡಿಸಲು ವಿಫಲವಾದರೆ ವಿಚಾರಣೆ ಮತ್ತು ಶಿಕ್ಷೆಗೆ ಧಕ್ಕೆ ಮಾಡಲಾಗದು ಎಂದು ವಾಸ್ತವಿಕ ವಿಚಾರಗಳು ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ ಪೀಠ ಹೇಳಿದೆ.

Also Read
ಕೊಳಚೆ ಪ್ರದೇಶ, ಕಿಕ್ಕಿರದ ಜನವಸತಿ ಪ್ರದೇಶದ ಜನರಿಗೆ ಕೋವಿಡ್‌ ಲಸಿಕೆ ಸಿಗಲಿ: ವಿಶೇಷ ಕ್ರಮವಹಿಸಲು ಹೈಕೋರ್ಟ್‌ ಸೂಚನೆ

“ಸದರಿ ಪ್ರಕರಣದಲ್ಲಿ ಶೋಧದ ಬಳಿಕ ಎಫ್‌ಐಆರ್‌ ದಾಖಲಿಸಲಾಗಿದ್ದು, ಇದಕ್ಕೂ ಮುನ್ನ 24.02.2020ರಂದು ಹೊರಡಿಸಲಾದ ಪ್ರತ್ಯೇಕ ಆದೇಶದ ಜೊತೆಗೆ 23.02.2020ರಂದು ಮ್ಯಾಜಿಸ್ಟ್ರೇಟ್‌ ಅವರಿಂದ ಪೂರ್ವಾನುಮತಿ ಪಡೆಯಲಾಗಿದೆ. ಪೂರ್ವಾಗ್ರಹದಿಂದ ಪೊಲೀಸರು ತನಿಖೆ ನಡೆಸಿದ್ದಾರೆ ಎಂಬುದನ್ನು ಆರೋಪಿ ಸಾಬೀತುಪಡಿಸಲು ವಿಫಲವಾದರೆ ವಿಚಾರಣೆ ಮತ್ತು ಶಿಕ್ಷೆಗೆ ಧಕ್ಕೆ ಮಾಡಲಾಗದು” ಎಂದು ವಾಸ್ತವಿಕ ವಿಚಾರಗಳು ಮತ್ತು ಪ್ರತಿವಾದಿಗಳ ವಾದವನ್ನು ಆಲಿಸಿದ ಬಳಿಕ ಪೀಠ ಹೇಳಿದೆ.

ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 81ರ ಅಡಿ ಉಪ ಪೊಲೀಸ್‌ ಅಧೀಕ್ಷಕರಿಂದ ಸರ್ಚ್‌ ವಾರೆಂಟ್‌ ಪಡೆದ ಬಳಿಕ ಶೋಧ ನಡೆಸಲಾಗಿದೆ ಎಂಬುದನ್ನು ನ್ಯಾಯಾಲಯವು ಪರಿಣಿಸಿದೆ. “ಕರ್ನಾಟಕ ಪೊಲೀಸ್‌ ಕಾಯಿದೆಯ ಸೆಕ್ಷನ್‌ 81 (ಡಿ) ಜೂಜಾಟಕ್ಕೆ ಬಳಸಲಾದ ಸಾಮಗ್ರಿಗಳು, ಹಣ, ಹಣಕ್ಕಾಗಿನ ಭದ್ರತೆ ಮತ್ತು ಸ್ಥಳದಲ್ಲಿ ಜೂಜಾಟಕ್ಕೆ ಬಳಸಲು ಇಡಲಾದ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲು ಅನುಮತಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಈ ವಿಚಾರಗಳನ್ನು ಪ್ರಸ್ತಾಪಿಸಿದ ಪೀಠವು ಮನವಿಯನ್ನು ವಜಾಗೊಳಿಸಿತು.

Kannada Bar & Bench
kannada.barandbench.com