ಧರ್ಮಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನಿರ್ವಹಿಸುವಾಗಲೂ ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳು ಜಾತ್ಯತೀತ ಮನಸ್ಸು ಮತ್ತು ವೈಜ್ಞಾನಿಕ ಮನೋಧರ್ಮದೊಂದಿಗೆ ಕೆಲಸ ಮಾಡಬೇಕು ಎಂದು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. (ನಾಮದೇವ್ ಗರಾದ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ).
ಧಾರ್ಮಿಕ ಭಾವನೆಗಳನ್ನು ಒಳಗೊಂಡ ಪ್ರಕರಣಗಳೊಂದಿಗೆ ವ್ಯವಹರಿಸುವಾಗ ತೊಂದರೆ ಎದುರಾಗಬಹುದೆಂಬ ಭಯ ಅಧಿಕಾರಿಗಳಲ್ಲಿದ್ದರೂ, ತಮ್ಮ ಕರ್ತವ್ಯವನ್ನು ದೇವರ ವಿರುದ್ಧದ ಕ್ರಮ ಎಂದು ಪರಿಗಣಿಸಬಾರದು, ಅದು ಕಾನೂನು ನಿಬಂಧನೆಗಳನ್ನು ಜಾರಿಗೊಳಿಸಲು ಅಡ್ಡಿಯಾಗಬಾರದು ಎಂದು ನ್ಯಾಯಾಲಯ ಹೇಳಿದೆ.
“...ಸಂವಿಧಾನದ 51-ಎ ವಿಧಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಜಾತ್ಯತೀತ ಮನೋಭಾವದೊಂದಿಗೆ ಸತ್ಯಕ್ಕೆ ಬದ್ಧರಾಗಿ ಕೆಲಸ ಮಾಡಬೇಕು ಎಂಬ ನಿರೀಕ್ಷೆ ನ್ಯಾಯಾಲಯದ್ದಾಗಿದೆ. ಅಧಿಕಾರಿಗಳು ಅಂತಹ ಸಂದರ್ಭದಲ್ಲಿ ವೈಜ್ಞಾನಿಕ ಮನೋಧರ್ಮ ಹೊಂದಿರಬೇಕಿದ್ದು ಕಾನೂನು ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ," ಎಂದು ಪೀಠ ಹೇಳಿದೆ.
ಸುವರ್ಣ ಯಂತ್ರ ಹೆಸರಿನಲ್ಲಿ ಸುಮಾರು 2 ಕೆಜಿಯಷ್ಟು ಚಿನ್ನ ಹೂತಿದ್ದ ಮತ್ತು 25 ಲಕ್ಷ ರೂಪಾಯಿ ಮತ್ತು ಧಾರ್ಮಿಕ ಟ್ರಸ್ಟ್‌ವೊಂದರ ಆಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
"ಜಗದಂಬಾ ದೇವಿ ಸಾರ್ವಜನಿಕ ಟ್ರಸ್ಟ್‌ನ ಅಕ್ರಮಗಳ ಬಗ್ಗೆ ಅರ್ಜಿದಾರರಾದ ನಾಮದೇವ್ ಗರಾದ್ ಸೇರಿದಂತೆ ಅನೇಕ ವ್ಯಕ್ತಿಗಳು ಅಧಿಕಾರಿಗಳ ಗಮನ ಸೆಳೆಯಲು ಹಲವಾರು ಪ್ರಯತ್ನ ಮಾಡಿದ್ದಾರೆ. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂಜರಿದರು" ಎಂದು ನ್ಯಾಯಮೂರ್ತಿಗಳಾದ ಟಿ ವಿ ನಲವಾಡೆ ಮತ್ತು ಎಂ ಜಿ ಸೆವ್ಲಿಕರ್ ಅವರಿದ್ದ ಪೀಠ ತಿಳಿಸಿದೆ.
"ಪ್ರಸ್ತುತ ಪ್ರಕರಣದಲ್ಲಿ ಟ್ರಸ್ಟ್ ಚಟುವಟಿಕೆಗಳು 'ಮಹಾರಾಷ್ಟ್ರ ಮಾನವ ಬಲಿ ತಡೆ ಮತ್ತು ನಿರ್ಮೂಲನೆ ಮತ್ತಿತರ ಅಮಾನವೀಯ, ದುಷ್ಟ ಹಾಗೂ ಅಘೋರಿ ಆಚರಣೆಗಳು ಹಾಗೂ ಮಾಂತ್ರಿಕ ಕಾಯಿದೆಯ ಅಡಿಯಲ್ಲಿ ಬರುವ ಹಾಗೆ ತೋರುತ್ತಿದ್ದು ಇದಕ್ಕೆ ಮಹಾರಾಷ್ಟ್ರ ಸಾರ್ವಜನಿಕ ಟ್ರಸ್ಟ್ ಕಾಯಿದೆಯ ಅನುಮತಿ ಇಲ್ಲ," ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ಪರವಾಗಿ ತಲೇಕರ್ ಮತ್ತು ಅಸೋಸಿಯೇಟ್ಸ್ ಸಂಸ್ಥೆಯ ವಕೀಲರು ವಾದ ಮಂಡಿಸಿದರು. ಟ್ರಸ್ಟ್ ಪ್ರತಿನಿಧಿಯಾಗಿ ಹಿರಿಯ ವಕೀಲ ರಾಜೇಂದ್ರ ದೇಶಮುಖ್ ಹಾಜರಿದ್ದರು.