ನ್ಯಾಯಾಲಯಗಳು ಸಾಮಾನ್ಯವಾಗಿ ಪೊಲೀಸರು ನಡೆಸುವ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಆದರೆ ಪೊಲೀಸರು ತನಿಖೆಯ ನೆಪದಲ್ಲಿ ನಾಗರಿಕರಿಗೆ ಕಿರುಕುಳ ನೀಡಲಾರಂಭಿಸಿದರೆ ಆಗ ನ್ಯಾಯಾಲಯಗಳು ಕಣ್ಣುಮುಚ್ಚಿ ಕೂರಲಾಗದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ತಮ್ಮ ಅಧಿಕಾರವನ್ನು ನ್ಯಾಯಸಮ್ಮತವಾಗಿ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಅನುಸಾರ ಬಳಸುವವರೆಗೆ ಮಾತ್ರ ಪೊಲೀಸರಿಗೆ ತನಿಖೆ ನಡೆಸುವ ಅನಿರ್ಬಂಧಿತ ಅಧಿಕಾರವಿದೆ ಎಂದು ನ್ಯಾಯಮೂರ್ತಿ ಸತಿಕುಮಾರ್ ಸುಕುಮಾರ ಕುರುಪ್ ಹೇಳಿದರು.
ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 160 ಅಥವಾ ಸೆ, 41 ಎ ಅಡಿಯಲ್ಲಿ ತನಿಖೆಗಾಗಿ ವ್ಯಕ್ತಿಗಳನ್ನು ಕರೆಸುವಾಗ ಪೊಲೀಸರು ಅನುಸರಿಸಬೇಕಾದ ಕೆಲ ಮಾರ್ಗಸೂಚಿಗಳನ್ನು ಅದು ಪ್ರಕಟಿಸಿತು:
ದೂರಿನಲ್ಲಿ ಹೆಸರಿಸಲಾದ ಯಾವುದೇ ವ್ಯಕ್ತಿಯನ್ನು ಅಥವಾ ದೂರಿಗೆ ಸಂಬಂಧಿಸಿದ ಸಾಕ್ಷಿಗಳನ್ನು ಕರೆಸುವಾಗ ಪೊಲೀಸ್ ಅಧಿಕಾರಿ ಸಿಆರ್‌ಪಿಸಿ ಸೆಕ್ಷನ್ 41ಎ ಮತ್ತು ಸಿಆರ್‌ಪಿಸಿ ಸೆಕ್ಷನ್ 160ರ ಅಡಿ ಲಿಖಿತ ಸಮನ್ಸ್ ನೀಡಿ ಅಂತಹ ವ್ಯಕ್ತಿಯನ್ನು (ಆರೋಪಿ) ವಿಚಾರಣೆ ಅಥವಾ ತನಿಖೆಗಾಗಿ ತನ್ನ ಮುಂದೆ ನಿರ್ದಿಷ್ಟ ದಿನಾಂಕ ಮತ್ತು ಸಮಯದಂದು ಹಾಜರಾಗುವಂತೆ ಉಲ್ಲೇಖಿಸಿ ಕರೆಸಬೇಕು.
ವಿಚಾರಣೆಯ ವಿವರಗಳನ್ನು ಪೊಲೀಸ್ ಠಾಣೆಯ ಸಾಮಾನ್ಯ ಡೈರಿ / ಸ್ಟೇಷನ್ ಡೈರಿ / ದೈನಂದಿನ ಡೈರಿಯಲ್ಲಿ ದಾಖಲಿಸಬೇಕು.
ಪೋಲೀಸ್ ಅಧಿಕಾರಿಯು ವಿಚಾರಣೆ/ತನಿಖೆಗಾಗಿ ಕರೆದಿರುವ ವ್ಯಕ್ತಿಗಳಿಗೆ ಕಿರುಕುಳ ನೀಡುವುದರಿಂದ ತನ್ನನ್ನು ತಾನು ದೂರವಿರಿಸಿಕೊಳ್ಳಬೇಕು.
ಪ್ರಾಥಮಿಕ ತನಿಖೆ ಅಥವಾ ಎಫ್‌ಐಆರ್ ದಾಖಲಿಸಿಕೊಳ್ಳಲು ಸುಪ್ರೀಂ ಕೋರ್ಟ್ ಲಲಿತಾ ಕುಮಾರಿ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದ ತೀರ್ಪಿನಲ್ಲಿ ದಾಖಲಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಸ್ಥಳೀಯ ಪೊಲೀಸರು ವಿಚಾರಣೆಯ ನೆಪದಲ್ಲಿ ತನಗೆ ಕಿರುಕುಳ ನೀಡುತ್ತಿದ್ದು ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕೆಂದು ಕೋರಿ ರಜಿನಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.