ಭಯ ಅಥವಾ ದುರಾಸೆಯಿಂದಲ್ಲ, ಅವಮಾನದಿಂದಾಗಿ ಜನರು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ: ಅಲಾಹಾಬಾದ್‌ ಹೈಕೋರ್ಟ್‌

ಇಸ್ಲಾಂಗೆ ಒತ್ತಾಯಪೂರ್ವಕವಾಗಿ ಮತಾಂತರಗೊಳಿಸಿ ಆಕೆಯನ್ನು ಮದುವೆಯಾಗಿದ್ದ ವ್ಯಕ್ತಿ ಸಲ್ಲಿಸಿದ್ದ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
Allahabad High Court
Allahabad High Court

ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳಿಸಿ ಆಕೆಯನ್ನು ವಿವಾಹವಾಗಿದ್ದ ವ್ಯಕ್ತಿಗೆ ಈಚೆಗೆ ಅಲಾಹಾಬಾದ್‌ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಮತಾಂತರವು ಒತ್ತಾಯಪೂರ್ವಕವಾಗಿದ್ದು, ಮದುವೆಯಾಗುವುದಕ್ಕಾಗಿ ಸಂತ್ರಸ್ತೆಯನ್ನು ಕಾನೂನುಬಾಹಿರವಾಗಿ ಮತಾಂತರಗೊಳಿಸಲಾಗಿದೆ ಎಂದು ನ್ಯಾಯಮೂರ್ತಿ ಶೇಖರ್‌ ಕುಮಾರ್‌ ಯಾದವ್‌ ಅಭಿಪ್ರಾಯಪಟ್ಟಿದ್ದು, ಆರೋಪಿಗೆ ಜಾಮೀನು ನಿರಾಕರಿಸಿದ್ದಾರೆ.

ಭಯ ಅಥವಾ ದುರಾಸೆಗಾಗಿ ಜನರು ಕೆಲವು ಸಂದರ್ಭದಲ್ಲಿ ಮತಾಂತರಗೊಳ್ಳುವುದಿಲ್ಲ. ಆದರೆ, ಅವಮಾನದಿಂದಾಗಿ ಮತ್ತೊಂದು ಧರ್ಮದಲ್ಲಿ ಗೌರವ ಸಿಗುತ್ತದೆ ಎಂದು ಭಾವಿಸಿ ಮತಾಂತರಗೊಳ್ಳುತ್ತಾರೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

“ಸಂವಿಧಾನದ ಅಡಿ ಎಲ್ಲರಿಗೂ ಸ್ವಾತಂತ್ರ್ಯದ ಹಕ್ಕಿದೆ. ಭಯ ಅಥವಾ ದುರಾಸೆಯಿಂದ ಕೆಲವು ಸಂದರ್ಭದಲ್ಲಿ ಜನರು ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದಿಲ್ಲ. ಅವಮಾನದಿಂದಾಗಿ ಮತ್ತೊಂದು ಧರ್ಮದಲ್ಲಿ ಗೌರವ ಸಿಗುತ್ತದೆ ಎಂದು ಭಾವಿಸಿ ಅವರು ಮತಾಂತರಗೊಳ್ಳುತ್ತಾರೆ. ಇದರಿಂದ ಯಾವುದೇ ಸಮಸ್ಯೆಯಿಲ್ಲ. ಭಾರತೀಯ ಸಂವಿಧಾನದಡಿ ಎಲ್ಲರೂ ಘನತೆಯಿಂದ ಬದುಕುವ ಹಕ್ಕು ಹೊಂದಿದ್ದಾರೆ. ತಮ್ಮ ಮನೆಯಲ್ಲಿ ಗೌರವ ಸಿಗದ ವ್ಯಕ್ತಿ, ತಮ್ಮನ್ನು ನಿರ್ಲಕ್ಷಿಸಲಾಗುತ್ತದೆ ಎಂದು ಅವರಿಗೆ ಅನ್ನಿಸಿದರೆ ಆಗ ಆತ/ಆಕೆ ಮನೆ ತೊರೆಯುತ್ತಾರೆ” ಎಂದು ಪೀಠ ಹೇಳಿದೆ.

ತಮ್ಮ ಬದುಕಿನ ಆರಂಭಿಕ ಹಂತದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರು ಅನುಭವಿಸಿದ ಅವಮಾನಗಳನ್ನು ನ್ಯಾಯಾಲಯ ನೆನೆಪಿಸಿದೆ. “ಹಿಂದಿನ ಇತಿಹಾಸವು ಹೇಳುವುದೇನೆಂದರೆ ವಿಭಜನೆಯಾದಾಗ ದೇಶದ ಮೇಲೆ ಆಕ್ರಮಣವಾಗಿ, ನಾವು ಗುಲಾಮರಾಗಿದ್ದೆವು. ಇದಕ್ಕೆ ಭಾರತ ಸಂವಿಧಾನದ ಕರ್ತೃ ಡಾ. ಭೀಮ ರಾವ್‌ ಅಂಬೇಡ್ಕರ್‌ ಅತ್ಯುತ್ತಮ ಉದಾಹರಣೆಯಾಗಿದ್ದು, ತಮ್ಮ ಬದುಕಿನ ಆರಂಭಿಕ ಹಂತದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಅವರು ಅದೇ ಕಾರಣಕ್ಕಾಗಿ ಮತಾಂತರಗೊಂಡಿದ್ದರು” ಎಂದು ನ್ಯಾಯಾಲಯ ನೆನಪಿಸಿದೆ.

ಹಿಂದೂ ಮಹಿಳೆಯನ್ನು ವರಿಸುವುದಕ್ಕಾಗಿ ಕಾನೂನುಬಾಹಿರವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದ ಆರೋಪಿ ಜಾವೇದ್‌ ಎಂಬಾತ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಕಳೆದ ವರ್ಷದ ನವೆಂಬರ್‌ನಲ್ಲಿ ಜಲೇಸರ್‌ ಮಾರುಕಟ್ಟೆಯಿಂದ ತನ್ನನ್ನು ಬಲವಂತವಾಗಿ ಅಪಹರಿಸಲಾಗಿದ್ದು, ತನಗೆ ವಿಷಕಾರಿ ಡ್ರಗ್ಸ್‌ ನೀಡಲಾಗಿತ್ತು. ಇದರಿಂದ ಪ್ರಜ್ಞೆ ಕಳೆದುಕೊಂಡಿದ್ದಾಗಿ ಸಂತ್ರಸ್ತೆ ಹೇಳಿದ್ದಾರೆ. ಪುನಾ ಮಾರನೇಯ ದಿನ ತನ್ನನ್ನು ದೆಹಲಿಯ ಕರಕರಡೋಮ ನ್ಯಾಯಾಲಯದಲ್ಲಿ ತಂದು ನಿಲ್ಲಿಸಿ, ದಾಖಲೆಗಳಿಗೆ ಸಹಿ ಮಾಡುವಂತೆ ಸೂಚಿಸಲಾಗಿತ್ತು. ತನ್ನನ್ನು ಬಲವಂತವಾಗಿ ದೆಹಲಿಗೆ ಕರೆರಲಾಗಿತ್ತು ಎಂದು ಆಕೆ ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದ್ದು, ಅದಾಗಲೇ ಜಾವೇದ್‌ಗೆ ಮತ್ತೊಂದು ವಿವಾಹವಾಗಿತ್ತು ಎಂದು ವಿವರಿಸಿದ್ದಾರೆ. ವಿವಾಹ ಮಾಡಿಕೊಳ್ಳುವ ಏಕೈಕ ಕಾರಣಕ್ಕಾಗಿ ಬಲವಂತವಾಗಿ ತನ್ನನ್ನು ಮತಾಂತರಗೊಳಿಸಲಾಗಿದೆ ಎಂದು ಆಕೆಯು ಮ್ಯಾಜಿಸ್ಟ್ರೇಟ್‌ಗೆ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 366, 368 ಮತ್ತು 120-B ಮತ್ತು ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಯಂತ್ರಣ ಕಾಯಿದೆಯ ಸೆಕ್ಷನ್‌ 5(1) ಅಡಿ ಎಫ್‌ಐಆರ್‌ ದಾಖಲಿಸಲಾಗಿತ್ತು.

ಸ್ವಯಂಪ್ರೇರಣೆಯಿಂದ ಸಂತ್ರಸ್ತೆ ಮತಾಂತರಗೊಂಡಿದ್ದು, ಬಲವಂತದಿಂದಲ್ಲ. ಉತ್ತರ ಪ್ರದೇಶ ಕಾನೂನುಬಾಹಿರ ಧಾರ್ಮಿಕ ಮತಾಂತರ ನಿಯಂತ್ರಣ ಸುಗ್ರೀವಾಜ್ಞೆ ಅಸ್ತಿತ್ವಕ್ಕೆ ಬರುವುದಕ್ಕೆ ಮುನ್ನವೇ ಮತಾಂತರವಾಗಿದೆ ಎಂದು ಆರೋಪಿ ಪರ ವಕೀಲರು ನ್ಯಾಯಾಲಯದ ಗಮನಸೆಳೆದಿದ್ದಾರೆ.

ವಾದ-ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಇದು ಬಲವಂತದ ಮತಾಂತರವಾಗಿದೆ. ಆಕೆಯ ಮನಸ್ಸಿಗೆ ವಿರುದ್ಧವಾಗಿ ಮದುವೆಯಾಗುವುದಕ್ಕಾಗಿ ಈ ಕೃತ್ಯ ಎಸಗಲಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Also Read
ಬಲಾತ್ಕಾರದ ಮತಾಂತರ ನಿಷೇಧಿಸಲಾಗಿದೆಯೇ ವಿನಾ ಲವ್‌ ಜಿಹಾದ್‌ ಉಲ್ಲೇಖಿಸಿಲ್ಲ: ಪಿಐಎಲ್‌ ವಜಾಕ್ಕೆ ಯೋಗಿ ಸರ್ಕಾರ ಮನವಿ

ದೇಶದಲ್ಲಿ ಧಾರ್ಮಿಕ ಮತಾಂದತೆ, ದುರಾಸೆ ಮತ್ತು ಭಯಕ್ಕೆ ಸ್ಥಳಾವಕಾಶವಿಲ್ಲ. ಧರ್ಮವು ಭಕ್ತಿಯ ಒಂದು ಭಾಗವಾಗಿದ್ದು, ಇದನ್ನು ನಿರ್ದಿಷ್ಟ ಭಕ್ತಿಯ ವಿಧಾನಕ್ಕೆ ಸೀಮಿತಗೊಳಿಸಬಾರದು. “ಇದಕ್ಕೆ ಚಕ್ರವರ್ತಿ ಅಕ್ಬರ್‌ ಮತ್ತು ಆತನ ಪತ್ನಿ ಜೋಧಾ ಬಾಯ್‌ ಅವರನ್ನು ಉದಾಹರಣೆಯಾಗಿ ನೋಡಬಹುದು” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಜಾವೇದ್‌ ಈಗಾಗಲೇ ವಿವಾಹವಾಗಿದ್ದಾರೆ ಎಂಬುದನ್ನು ಪರಿಗಣಿಸಿರುವ ನ್ಯಾಯಾಲಯವು “ಅವಕಾಶ ಸಿಕ್ಕ ಕೂಡಲೇ ಆರೋಪಿಯು ಸಂತ್ರಸ್ತೆಯನ್ನು ಮಾನಸಿಕ ಮತ್ತು ದೈಹಿಕವಾಗಿ ದುರ್ಬಳಕೆ ಮಾಡಿದ್ದಾರೆ. ಪೊಲೀಸರಿಗೆ ಕರೆ ಮಾಡಿರುವ ಸಂತ್ರಸ್ತೆಯು ಮ್ಯಾಜಿಸ್ಟ್ರೇಟ್‌ ಮುಂದೆ ಹೇಳಿಕೆ ದಾಖಲಿಸಿರುವುದನ್ನು ನಿರ್ಲಕ್ಷಿಸಲಾಗದು” ಎಂದಿದೆ.

ಸಂವಿಧಾನದ 25 (1)ನೇ ವಿಧಿಯು ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಕಲ್ಪಿಸಿದೆ. ಹಾಗೆಂದು, ದುರಾಸೆ ಅಥವಾ ಭಯಕ್ಕೆ ವ್ಯಕ್ತಿಯೊಬ್ಬರು ಮತಾಂತರಗೊಳ್ಳಬೇಕು ಎಂದೇನಿಲ್ಲ ಎಂದು ಪೀಠ ಹೇಳಿದೆ. “ಜಾಮೀನು ನೀಡುವುದರಿಂದ ಸಮಾಜದಲ್ಲಿರುವ ಧಾರ್ಮಿಕ ಗುತ್ತಿಗೆದಾರರು ಬಡವರು ಮತ್ತು ಮಹಿಳೆಯರಿಗೆ ಬೆದರಿಕೆ ಮತ್ತು ಆಮಿಷವೊಡ್ಡಿ ಮತಾಂತರ ಮಾಡಲು ಶಕ್ತಿ ತುಂಬಿದಂತಾಗುತ್ತದೆ” ಎಂದಿರುವ ನ್ಯಾಯಾಲಯವು ಜಾವೇದ್‌ ಜಾಮೀನು ಮನವಿಯನ್ನು ತಿರಸ್ಕರಿಸಿದೆ.

Related Stories

No stories found.
Kannada Bar & Bench
kannada.barandbench.com